ಮಂಡಿ: ಮಂಡಿ ಕ್ಷೇತ್ರ ನಿಮ್ಮ ಪೂರ್ವಜರ ಆಸ್ತಿಯಲ್ಲದ ಕಾರಣ ಬೆದರಿಕೆ ಹಾಕಿ ನನ್ನನ್ನು ವಾಪಸ್ ಕಳುಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಅಭ್ಯರ್ಥಿಯಾಗಿರುವ ನಟಿ ಕಂಗನಾ ರಣಾವತ್ ಗುರುವಾರ ಸಚಿವ ವಿಕ್ರಮಾದಿತ್ಯ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೀರಭದ್ರ ಸಿಂಗ್ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಅವರ ಪುತ್ರ, ಹಿಮಾಚಲ ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಮಂಡಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಿದ್ಧತೆಯಲ್ಲಿದ್ದಾರೆ.
ಮಂಡಿ ವಿಧಾನಸಭಾ ಕ್ಷೇತ್ರದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಂಗನಾ, “ನನಗೆ ಬೆದರಿಕೆ ಹಾಕಿ ವಾಪಸ್ ಕಳುಹಿಸಲು ಇದು ನಿಮ್ಮ ತಂದೆ ಅಥವಾ ತಾತನ ಆಸ್ತಿ ಅಲ್ಲ. ಇದು ಪ್ರಧಾನಿ ನರೇಂದ್ರ ಮೋದಿಯವರ ಹೊಸ ಭಾರತವಾಗಿದೆ, ಅಲ್ಲಿ ಚಹಾ ಮಾರುತ್ತಿದ್ದ ಸಣ್ಣ, ಬಡ ಹುಡುಗ ಜನರ ದೊಡ್ಡ ನಾಯಕ ಮತ್ತು ಪ್ರಧಾನ ಸೇವಕ ಎಂದರು.
ವಿಕ್ರಮಾದಿತ್ಯ ಸಿಂಗ್ ಅವರು ಸೋಮವಾರ ಕಂಗನಾ “ವಿವಾದಗಳ ರಾಣಿ” ಎಂದು ಹೇಳಿ ಕಾಲಕಾಲಕ್ಕೆ ಅವರ ಹೇಳಿಕೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತದೆ ಎಂದಿದ್ದರು.
ಗೋಮಾಂಸ ತಿನ್ನುವ ಕುರಿತು ವರದಿ ಮಾಡಿರುವ ಕಂಗನಾ ಹೇಳಿಕೆಯನ್ನು ಉಲ್ಲೇಖಿಸಿದ್ದ ವಿಕ್ರಮಾದಿತ್ಯ ಸಿಂಗ್, “ಅವರಿಗೆ ಬುದ್ಧಿಯನ್ನು ನೀಡುವಂತೆ ನಾನು ಭಗವಾನ್ ರಾಮನನ್ನು ಪ್ರಾರ್ಥಿಸುತ್ತೇನೆ ಮತ್ತು ಕಂಗನಾ ‘ದೇವ ಭೂಮಿ’ ಹಿಮಾಚಲದಿಂದ ಬಾಲಿವುಡ್‌ಗೆ ಶುದ್ಧವಾಗಿ ಹಿಂತಿರುಗುತ್ತಾಳೆ ಎಂದು ಭಾವಿಸುತ್ತೇನೆ. ಅವರು ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಏಕೆಂದರೆ ಹಿಮಾಚಲದ ಜನರ ಬಗ್ಗೆ ಆಕೆಗೆ ಏನೂ ತಿಳಿದಿಲ್ಲ ಎಂದಿದ್ದರು.
ವಿಕ್ರಮಾದಿತ್ಯ ಸಿಂಗ್ ಅವರು ಹಿಂದಿನ ಭೂಶಾರ್ ವಂಶಸ್ಥರಾಗಿದ್ದಾರೆ, ಇದನ್ನು ಈಗ ರಾಂಪುರ ಎಂದು ಕರೆಯಲಾಗುತ್ತದೆ, ಇದು ಮಂಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 17 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ.