ಬೆಂಗಳೂರು:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿರುವ ಆರೋಪಗಳಿಗೆ ಉತ್ತರಿಸಲು ಇದು ಸಕಾಲವಲ್ಲ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯ ಸರಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದರು.
ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರ ಪತನವಾಗಲು ದೇವೇಗೌಡ, ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಕಾರಣ. ನಾನು ಯಾವತ್ತೂ ನೀಚ ರಾಜಕಾರಣ ಮಾಡಿಲ್ಲ. ಕೈ ಹಿಡಿದ ಪಕ್ಷಕ್ಕೆ ದ್ರೋಹ ಎಸಗುವುದು ಅಪ್ಪ, ಮಕ್ಕಳ ಜಾಯಮಾನವಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು.
Related Articles
ಸಿದ್ದರಾಮಯ್ಯನವರ ಆಕ್ರೋಶಕ್ಕೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಸಿದ್ದರಾಮಯ್ಯ ಮಾಡಿರುವ ಆರೋಪಗಳಿಗೆ ಉತ್ತರಿಸಲು ಇದು ಸಕಾಲವಲ್ಲ. ದೇಶದ ರಾಜಕೀಯ ವಿದ್ಯಮಾನಗಳು ಏಕರೂಪವಾಗಿವೆ. ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕಾದ ಇಂತಹ ಸಂದರ್ಭದಲ್ಲಿ ಒಡಕಿನ ಮಾತುಗಳು ಆರೋಗ್ಯಕರವಲ್ಲ. ಕಾಲ ಕೂಡಿ ಬಂದಾಗ ಖಂಡಿತ ಎಲ್ಲದಕ್ಕೂ ಉತ್ತರಿಸುವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.