Advertisement

ಬಲಿಷ್ಠ ಪ್ರತಿಪಕ್ಷ-ವಿಘಟಿತ ಆಡಳಿತ ಪಕ್ಷ: ಸುಧಾಂಶು 

06:00 AM Oct 31, 2018 | Team Udayavani |

ಬೆಂಗಳೂರು: ಕರ್ನಾಟಕದಲ್ಲಿ ಪ್ರಬಲ ಪ್ರತಿಪಕ್ಷವಿದ್ದು, ವಿಘಟಿತ ಸರ್ಕಾರ ಅಧಿಕಾರದಲ್ಲಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರದ ಅಕ್ರಮಗಳನ್ನು ಬಯಲಿಗೆಯುವುದಾಗಿ ವಿಧಾನಸಭೆ ಚುನಾವಣೆಗೂ ಮುನ್ನ ಹೇಳುತ್ತಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇದೀಗ ಕಾಂಗ್ರೆಸ್‌ನ ಮುಲಾಜಿನಲ್ಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಆರೋಪಿಸಿದರು.

Advertisement

ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಬರಾಕ್‌ ಒಬಾಮಾ ರಿಂದ ಶ್ಲಾಘನೆಗೆ ಒಳಗಾಗಿರುವ, ಜಾಗತಿಕ ಮಟ್ಟದಲ್ಲಿ ತನ್ನದೇ ಛಾಪು ಮೂಡಿಸಿರುವ ಬೆಂಗಳೂರನ್ನು ಹೊಂದಿರುವ ರಾಜ್ಯಕ್ಕೆ ಸೂಕ್ತವಾದ ಸರ್ಕಾರ ಇದಲ್ಲ. ಸಾಮಾನ್ಯವಾಗಿ ಸರ್ಕಾರ ಬಲಿಷ್ಠವಾಗಿದ್ದು, ಪ್ರತಿಪಕ್ಷಗಳು ಸರ್ಕಾರವನ್ನು ಹಣಿಯಲು ಪ್ರಯತ್ನಿಸುತ್ತವೆ. ಆದರೆ ಕರ್ನಾಟಕದ ಪರಿಸ್ಥಿತಿಯೇ ಬೇರೆ. ಪ್ರಬಲ ಪ್ರತಿಪಕ್ಷ ವಿದ್ದು, ವಿಘಟಿತ ಮೈತ್ರಿ ಸರ್ಕಾರವಿದೆ.  ಸರ್ಕಾರದಲ್ಲಿ ಸಮನ್ವಯತೆ ತರಲು ಪ್ರಯತ್ನ ನಡೆಸುತ್ತಿರುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳುತ್ತಿರುವುದು ವಿಪರ್ಯಾಸ ಎಂದು ಹೇಳಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರೇ ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್‌ ಹೇಳುತ್ತಿತ್ತು. ಆದರೆ ಚುನಾವಣೆ ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡ ಕಾಂಗ್ರೆಸ್‌ ಉಪಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು ಎಂದು ಹೇಳಿದರು. 

ದೇಶದಲ್ಲಿ ಪ್ರತಿಪಕ್ಷಗಳ ಮಹಾಘಟ ಬಂಧನ್‌ ಇಲ್ಲ ಎಂಬ ಸ್ಥಿತಿ ಇದೆ. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ, ರಾಹುಲ್‌ ಗಾಂಧಿಯವರು ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ಹೇಳಿದರು. ಎನ್‌ಸಿಪಿ ನಾಯಕ ಶರತ್‌ ಪವಾರ್‌ ಕೂಡ ಮಹಾಘಟಬಂಧನ್‌ ಇಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಬೆಂಗಳೂರಿನಲ್ಲಿ ಆರಂಭವಾದ ಮಹಾಘಟಬಂಧನ್‌ ಪ್ರಯತ್ನ ಆರಂಭದಲ್ಲೇ ಪತನವಾಗಲಿದೆ ಎಂದು ಭವಿಷ್ಯ ನುಡಿದರು. ಈಗಾಗಲೇ ಬಿಎಸ್‌ಪಿಯು ಕಾಂಗ್ರೆಸ್‌ ನೊಂದಿಗಿನ ಮೈತ್ರಿ ಚಿಂತನೆಯಿಂದ ಹೊರಬಂದಿದೆ. ಉತ್ತರ ಭಾರತದಲ್ಲಿ ಕಾಂಗ್ರೆಸ್‌ ಅನ್ನು ದೂರುವ ಬಿಎಸ್‌ಪಿಯು ಕರ್ನಾಟಕದಲ್ಲಿ ಯಾವ ನಿಲುವು ಕೈಗೊಳ್ಳಲಿದೆ ಎಂದು ಪ್ರಶ್ನಿಸಿದರು.

ದೇವೇಗೌಡರು ನಿಲುವು ಸ್ಪಷ್ಟಪಡಿಸಲಿ: ಇತ್ತೀಚೆಗೆ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಮೈತ್ರಿ ಸರ್ಕಾರ ಮಹತ್ವ ನೀಡಿಲ್ಲ. ಮುಖ್ಯಮಂತ್ರಿಗಳು ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ವಾಲ್ಮೀಕಿ ಪ್ರಶಸ್ತಿಯನ್ನು ಎಚ್‌.ಡಿ.ದೇವೇಗೌಡರು ಪಡೆಯುವುದಾದರೆ ರಾಮಜನ್ಮಭೂಮಿ ಬಗ್ಗೆ ಅವರ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು. ಇನ್ನು 10 ದಿನದಲ್ಲಿ ಟಿಪ್ಪು ಜಯಂತಿಯಿದ್ದು, ಆಚರಣೆಗೆ ಎಲ್ಲಿಲ್ಲ ದ ಉತ್ಸಾಹವನ್ನು ಮೈತ್ರಿ ಸರ್ಕಾರ ತೋರಲಿದೆ ಎಂದು ಕಿಡಿ ಕಾರಿದರು. 

Advertisement

ಮಸೀದಿ ನಿರ್ಮಾಣ ಯಾರಿಗೂ ಬೇಕಿಲ್ಲ: ಅಯೋಧ್ಯೆಯಲ್ಲಿ ಇಂದು ಯಾರಿಗೂ ಮಸೀದಿ ಬೇಕಿಲ್ಲ. ರಾಹುಲ್‌ ಗಾಂಧಿ, ಅಖೀಲೇಶ್‌ ಯಾದವ್‌ ಸೇರಿದಂತೆ ಹಲವರ ನಿಲುವು ಬದಲಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್‌ ಆದೇಶ ಬರುವವರೆಗೆ ಕಾಯುತ್ತೀರೋ ಇಲ್ಲವೇ ಸುಗ್ರೀವಾಜ್ಞೆ ಹೊರಡಿಸುತ್ತೀರೋ ಎಂದು ಕಾಂಗ್ರೆಸ್‌ ನಾಯಕರೇ ಪ್ರಶ್ನಿಸುತ್ತಿದ್ದಾರೆ. ಸಾಧು ಸಂತರು ರಾಮಮಂದಿರ ನಿರ್ಮಿಸಲಿದ್ದಾರೆ. ಬಿಜೆಪಿಯದು ಹಿಂದಿನಿಂದಲೂ ಅದೇ ಆಶಯವಾಗಿದ್ದು, ಪಕ್ಷವಾಗಿ ಅದಕ್ಕೆ ಎದುರಾಗುವ ತೊಂದರೆಗಳನ್ನು ನಿವಾರಿಸುವ ಕೆಲಸ ಮಾಡಲಿದೆ ಎಂದು ಪ್ರತಿಕ್ರಿಯಿಸಿದರು. ಬಿಜೆಪಿ ರಾಜ್ಯ ವಕ್ತಾರ ಗೋ. ಮಧುಸೂದನ, ಮಾಧ್ಯಮ ವಿಭಾಗದ ಸಂಚಾಲಕ ಶಾಂತಾರಾಮ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next