Advertisement

ಜಾತಿ ಆಧಾರಿತ ಚುನಾವಣೆ ಇದಲ್ಲ: ಹಾಲಾಡಿ ಶ್ರೀನಿವಾಸ ಶೆಟ್ಟಿ

01:37 PM Apr 24, 2023 | Team Udayavani |

ಕುಂದಾಪುರ: ಐದು ಬಾರಿ ಅವಕಾಶ ನೀಡಿದ್ದೀರಿ. ಇನ್ನೂ ನನಗೇ ಅವಕಾಶ ಕೊಡಿ ಎನ್ನಲಾರೆ. ನಿಮ್ಮ ಋಣ ಪೂರ್ತಿ ತೀರಿಸಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥಪೂರ್ಣವಾಗಿರಲು, ಒಬ್ಬನೇ ಪ್ರತೀಬಾರಿ ಸ್ಪರ್ಧಿಸಿ ಮತಯಾಚಿಸುವುದು ಇತರರ ಅವಕಾಶ ಕಸಿದುಕೊಂಡಂತಾಗುತ್ತದೆ ಎಂಬ ನೆಲೆಯಲ್ಲಿ ನಾನು ಸ್ಪರ್ಧಿಸದೇ ಈ ಬಾರಿ ಕಿರಣ್‌ ಕೊಡ್ಗಿ ಅವರನ್ನು ಗೆಲ್ಲಿಸಿ ಎಂದು ಕೇಳುತ್ತಿದ್ದೇನೆ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

Advertisement

ಅವರು ರವಿವಾರ ಇಲ್ಲಿನ ವ್ಯಾಸರಾಜ ಕಲ್ಯಾಣ ಮಂಟಪದಲ್ಲಿ ನಡೆದ ಪುರಸಭೆ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಸಜ್ಜನ, ವಿಚಾರವಂತ, ಜಾತ್ಯತೀತ, ನನಗಿಂತಲೂ ತುಸು ಹೆಚ್ಚೇ ಸಹನೆ ಇರುವ ಕಿರಣ್‌ ಕೊಡ್ಗಿ ಅವರು ಕಳೆದ 30 ವರ್ಷಗಳಿಂದ ಪಕ್ಷದ ಕೆಲಸದಲ್ಲಿ ನಿರತರಾದ ಅನುಭವಿ. ಒಂದೇ ಬಾರಿಗೆ ರಾಮರಾಜ್ಯ ನಿರ್ಮಾಣ ಮಾಡಲಾಗದು. ಹಂತಹಂತವಾಗಿ ಅಭಿವೃದ್ಧಿಯಾಗಬೇಕು. ಹಾಗೆ ಬಾಕಿ ಉಳಿದ ಕೆಲಸಗಳನ್ನು ಕಿರಣ್‌ ಕೊಡ್ಗಿ ಅವರು ನೆರವೇರಿಸಿಕೊಡುತ್ತಾರೆ. ಈ ನಿಟ್ಟಿನಲ್ಲಿ ಸ್ವ ಇಚ್ಛೆಯಿಂದ ಸ್ಪರ್ಧಿಸದೇ ಇರಲು ತೀರ್ಮಾನಿಸಿದ ನಾನು ಸಾಮಾಜಿಕವಾಗಿ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದರು.

ದೇಶದ ಸಾರ್ವಭೌಮತೆ, ಉಗ್ರನಿಗ್ರಹ ಕುರಿತು ಮೋದಿ ಅವರು ಕೈಗೊಂಡ ಕ್ರಮಗಳು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಸ್ವಾತಂತ್ರ್ಯಪೂರ್ವದ ಕಾಂಗ್ರೆಸ್ಸೇ ಬೇರೆ, ಈಗಿನ ಕಾಂಗ್ರೆಸ್ಸೇ ಬೇರೆ. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ ವಂಚನೆಯ ಅಸ್ತ್ರ. ಅವರು ಮಾಡುತ್ತಿರುವ ಅಪಪ್ರಚಾರಗಳಿಗೆ ಕಿವಿಯಾನಿಸಬೇಡಿ. ಇದು ಜಾತಿ ಆಧಾರಿತ ಚುನಾವಣೆ ಅಲ್ಲ. ನಾನು ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಎಲ್ಲೂ ಬೆಂಬಲ ನೀಡಿಲ್ಲ ಎಂದರು.

Advertisement

ಅಭ್ಯರ್ಥಿ ಕಿರಣ್‌ ಕುಮಾರ್‌ ಕೊಡ್ಗಿ, ಶಾಸಕ ಹಾಲಾಡಿ ಅವರು ಜನಸಾಮಾನ್ಯರೊಡನೆ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ರೀತಿ, ನಡೆ, ಅಭಿವೃದ್ಧಿ ಕಾರ್ಯವನ್ನು ಅವರ ಮಾರ್ಗದರ್ಶನದಲ್ಲಿಯೇ ಮುಂದುವರಿಸುತ್ತೇನೆ. 30 ವರ್ಷಗಳಿಂದ ಪಕ್ಷದ ಕೆಲಸದಲ್ಲಿ ನಿರತನಾದ ನನಗೆ ನಿರೀಕ್ಷಿಸದೇ ಬಂದ ಜವಾಬ್ದಾರಿಯನ್ನು ನಿರ್ವಹಿಸಿ ಜನರ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುಪ್ರಸಾದ ಶೆಟ್ಟಿ ಬೈಕಾಡಿ, ಪ್ರತೀ ಸಭೆಗೂ ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಿರುವುದು ಎರಡು ಜಿಲ್ಲೆಗಳಲ್ಲಿ ಕುಂದಾಪುರ ಕ್ಷೇತ್ರದಲ್ಲಿ ಮಾತ್ರ. 5 ಅವಧಿಯಲ್ಲಿ ಹಾಲಾಡಿಯವರು ನೀಡಿದ ಸೇವೆಗೆ ನಾವು ನೀಡುವ ಗೌರವ ಕೊಡ್ಗಿಯವರು 60 ಸಾವಿರ ಮತಗಳ ಅಂತರದ ಗೆಲುವು ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿಶೋರ್‌ ಕುಮಾರ್‌, ದ.ಕ. ಜಿಲ್ಲಾ ಸಹಪ್ರಭಾರಿ ರಾಜೇಶ್‌ ಕಾವೇರಿ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್‌ ಮಾತನಾಡಿದರು. ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್‌, ಸದಸ್ಯ ಮೋಹನದಾಸ ಶೆಣೈ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ್‌ ಪೂಜಾರಿ ವಕ್ವಾಡಿ, ಮಂಡಲ ಮಾಜಿ ಅಧ್ಯಕ್ಷ ಕಾಡೂರು ಸುರೇಶ್‌ ಶೆಟ್ಟಿ, ನಗರ ಪ್ರಧಾನ ಕಾರ್ಯದರ್ಶಿ ಶಿವ ಮೆಂಡನ್‌ ಉಪಸ್ಥಿತರಿದ್ದರು. ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಸ್ವಾಗತಿಸಿ, ನಗರ ಅಧ್ಯಕ್ಷ ರಾಜೇಶ್‌ ಕಡ್ಗಿಮನೆ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next