Advertisement

ಜನರ ಸಮಸ್ಯೆಗೆ ಸ್ಪಂದಿಸುವ ಸರ್ಕಾರ ಇದಲ್ಲ

10:25 AM Oct 14, 2021 | Team Udayavani |

ಕಲಬುರಗಿ: ಜನತೆ ಮತ್ತು ರೈತರ ಸಂಕಷ್ಟಕ್ಕೆ ಬಿಜೆಪಿ ಸರ್ಕಾರ ಸ್ಪಂದಿಸುತ್ತಿಲ್ಲ. 2019ರಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ, ಬೆಳೆ ಹಾನಿಯಾದವರಿಗೆ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಐವಾನ್‌-ಇ-ಶಾಹಿ ಅತಿಥಿ ಗೃಹದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಪ್ರವಾಹ ಬಂದ ಸಂದರ್ಭದಲ್ಲಿ ನಾನು ಜಿಲ್ಲೆಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದ್ದೆ. ನಷ್ಟಕ್ಕೀಡಾದ ರೈತರಿಗೆ ಕೂಡಲೇ ಪರಿಹಾರ ನೀಡುವಂತೆ ಸದನದ ಒಳಗೆ ಮತ್ತು ಹೊರಗೆ ಸರ್ಕಾರವನ್ನು ಒತ್ತಾಯಿಸಿದ್ದೆ. ಆದರೂ ಸರ್ಕಾರ ರೈತರಿಗೆ ನೆರವಾಗಿಲ್ಲ ಎಂದರು.

2019ರಲ್ಲಿ ಪ್ರವಾಹ ಉಂಟಾಗಿತ್ತು. ಆಮೇಲೆ ಮತ್ತೆ ಮೂರು ಬಾರಿ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ಈ ವರ್ಷವೂ ಮಳೆ ಬಂದು ಬೆಳೆ ಹಾನಿಯಾಗಿದೆ. ರೈತರಿಗೆ ಪರಿಹಾರದ ಹಣ ಸಿಗೋದು ಯಾವಾಗ? ಪರಿಹಾರ ಕೇಳಿದರೆ ಸರ್ಕಾರ ಕೊರೊನಾ ನೆಪ ಹೇಳುತ್ತಿದೆ. ರಾಜ್ಯದ ಬಜೆಟ್‌ 2.46 ಲಕ್ಷ ಕೋಟಿ ರೂ. ಇದೆ. ಕೊರೊನಾಗೆ ಆರು ಸಾವಿರ ಕೋಟಿ ರೂ. ಖರ್ಚು ಮಾಡಿದರೂ, ಉಳಿದ ಹಣ ಏನಾಗಿದೆ ಎಂದು ಪ್ರಶ್ನಿಸಿದರು.

ಡಿಸಿ ವರ್ತನೆ ಬಗ್ಗೆ ಆಕ್ರೋಶ

ಚಿಂಚೋಳಿ ಮತ್ತು ಕಾಳಗಿ ತಾಲೂಕಿನಲ್ಲಿ ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಭೂಮಿ ಕಂಪಿಸುತ್ತಿದೆ. ಆದರೂ ಬಿಜೆಪಿಯ ಒಬ್ಬ ಜನಪ್ರತಿನಿಧಿಯಾಗಲಿ, ಉಸ್ತುವಾರಿ ಸಚಿವರಾಗಲಿ, ಸಂಸದರಾಗಲಿ ಭೂಕಂಪ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಸರ್ಕಾರಕ್ಕೆ ಜನರ ಕಷ್ಟ ಕೇಳುವ ಮನಸ್ಸೇ ಇಲ್ಲ ಎಂದು ಟೀಕಿಸಿದರು.

Advertisement

ಜಿಲ್ಲಾಧಿಕಾರಿಯಾದರೂ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕಿತ್ತು. ಮಾಜಿ ಸಚಿವರಾದ ಡಾ| ಶರಣಪ್ರಕಾಶ ಪಾಟೀಲ ಅವರೇ ಜಿಲ್ಲಾಧಿಕಾರಿಗೆ ಕೇಳಿದರೆ, ಸ್ಥಳಕ್ಕೆ ಉಪ ಆಯುಕ್ತರು, ತಹಶೀಲ್ದಾರ್‌ ತೆರಳಿದ್ದಾರೆ ಅಂತಾ ಹೇಳಿದ್ದಾರೆ. ಒಬ್ಬ ಜಿಲ್ಲಾಧಿಕಾರಿಗೆ ಇಂತಹ ವರ್ತನೆ ಸರಿಯೇ? ಇಂತಹ ಅಧಿಕಾರಿಗಳ ಮೂಲಕ ಜನಪರ ಆಡಳಿತ ನೀಡಲು ಸಾಧ್ಯವೇ ಎಂದು ಕಿಡಿಕಾರಿದರು.

ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಸಚಿವರು ಕೂಡ ಬಂದಿಲ್ಲ. ಬೆಂಗಳೂರಲ್ಲೇ ಕುಳಿತುಕೊಂಡರೆ, ಉಸ್ತುವಾರಿ ಯಾಕೆ ಬೇಕು. ಸಚಿವ ಮುರುಗೇಶ ನಿರಾಣಿಗೆ ಸಕ್ಕರೆ ಕಾರ್ಖಾನೆಗಳನ್ನೇ ನೋಡಿಕೊಳ್ಳಲಿಕ್ಕೇ ಸಮಯವಿಲ್ಲ. ಇನ್ನು ಜಿಲ್ಲೆಗೆ ಬಂದು ಜನರ ಸಮಸ್ಯೆ ಆಲಿಸುತ್ತಾರಾ ಎಂದ ಸಿದ್ದರಾಮಯ್ಯ, ಇಂದೊಂದು ಬೇಜವಾಬ್ದಾರಿ ಸರ್ಕಾರ. ಜನರಿಗೆ ರಕ್ಷಣೆ ಕೊಡಲು ಆಗದೇ ಇದ್ದರೆ ಸರ್ಕಾರ, ಜಿಲ್ಲಾಡಳಿತ ಯಾಕೆ ಇರಬೇಕೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆ ವಿರೋಧ ಪಕ್ಷದ ಮುಖ್ಯಸಚೇತಕ, ಜೇವರ್ಗಿ ಶಾಸಕ ಡಾ| ಅಜಯಸಿಂಗ್‌, ಅಫಜಲಪುರ ಶಾಸಕ ಎಂ.ವೈ. ಪಾಟೀಲ, ಮಾಜಿ ಸಚಿವ ಬಾಬುರಾವ ಚವ್ಹಾಣ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ ಇದ್ದರು

ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಶೇ.75ರಷ್ಟು ಜನ ಜೀವಭಯದಿಂದ ಮನೆ ಖಾಲಿ ಮಾಡಿದ್ದಾರೆ. ನಾನು ಗ್ರಾಮಕ್ಕೆ ಹೋದಾಗಲೂ ಭೂಕಂಪನದ ಅನುಭವ ಆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ ಅವರಿಗೆ ಕರೆ ಮಾಡಿ ತುರ್ತಾಗಿ ಪರಿಹಾರ ಕಾರ್ಯ ಕೈಗೊಳ್ಳಬೇಕೆಂದು ತಿಳಿಸಿದ್ದೇನೆ.

ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next