ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗುರುವಾರ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಅವರ “ಭಯ್ಯಾಸ್” (ವಲಸಿಗರು) ಕುರಿತು ಮಾಡಿದ ಟೀಕೆಗಳನ್ನು ಖಂಡಿಸಿ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್, ಬಿಹಾರದ ಜನರು ಪಂಜಾಬ್‌ಗೆ ಎಷ್ಟು ಸೇವೆ ಸಲ್ಲಿಸಿದ್ದಾರೆಂದು ಚನ್ನಿ ಅವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
“ಇದು ಅಸಂಬದ್ಧ. ಜನರು ಅಂತಹ ವಿಷಯಗಳನ್ನು ಹೇಗೆ ಹೇಳಬಹುದು ಎಂದು ನನಗೆ ಗಾಬರಿಯಾಗಿದೆ. ಪಂಜಾಬ್‌ನಲ್ಲಿ ಬಿಹಾರದ ಎಷ್ಟು ಜನರು ವಾಸಿಸುತ್ತಿದ್ದಾರೆ ಮತ್ತು ಅವರು ಆ ಭೂಮಿಗೆ ಎಷ್ಟು ಸೇವೆ ಸಲ್ಲಿಸಿದ್ದಾರೆಂದು ಚನ್ನಿಗೆ ತಿಳಿದಿಲ್ಲ, ಎಂದು ಕಿಡಿ ಕಾರಿದ್ದಾರೆ.
ಉತ್ತರ ಪ್ರದೇಶ, ಬಿಹಾರ ಮತ್ತು ದೆಹಲಿಯ “ಭಯ್ಯಾ” ಗಳನ್ನು ರಾಜ್ಯಕ್ಕೆ ಪ್ರವೇಶಿಸಲು ಬಿಡಬೇಡಿ ಎಂದು ಚನ್ನಿ ಪಂಜಾಬ್‌ನಲ್ಲಿ ಮಂಗಳವಾರ ರೂಪನಗರದಲ್ಲಿ ರೋಡ್‌ಶೋನಲ್ಲಿ ಜನರನ್ನು ಕೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿದ್ದು, ಅವರ ಪಕ್ಕದಲ್ಲಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಕದಲ್ಲಿ ಚಪ್ಪಾಳೆ ತಟ್ಟುತ್ತಿದ್ದರು. ಇದು ಕಾಂಗ್ರೆಸ್ ಗೆ ತಿರುಗು ಬಾಣ ವಾಗಿದೆ.
ಪ್ರಿಯಾಂಕಾ ಗಾಂಧಿ ಪಂಜಾಬ್‌ನ ಸೊಸೆ. ಇಲ್ಲಿ ಆಡಳಿತ ನಡೆಸಲು ಬಂದಿರುವ ‘ಉತ್ತರ ಪ್ರದೇಶ, ಬಿಹಾರ, ದೆಹಲಿ ದೇ ಭಯ್ಯಾ ಗಳನ್ನು ರಾಜ್ಯಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಆಪ್ ನಾಯಕರನ್ನು ಗುರಿಯಾಗಿಸಿಕೊಂಡು ಚನ್ನಿ ಹೇಳಿಕೆ ನೀಡಿದ್ದರು. ಈ ಕಾಮೆಂಟ್ ಗೆ ಪಂಜಾಬ್ ಪ್ರತಿಪಕ್ಷ ಗಳಾದ ಬಿಜೆಪಿ, ಅಕಾಲಿದಳ ಮತ್ತು ಎಎಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾಮೆಂಟ್ “ತುಂಬಾ ನಾಚಿಕೆಗೇಡಿನದು” ಎಂದು ಬಣ್ಣಿಸಿದ್ದಾರೆ.