Advertisement

ಈ ನಿಖಿತಾ ಆ ನಿಖಿತಾ ಅಲ್ಲ!

11:16 AM Oct 15, 2017 | |

“ಗಟ್ಟಿನೆಲೆ ನಿಲ್ಲುವವರೆಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡೇ ಮೇಲೆ ಬರಬೇಕು ….’
– ಮಾತಲ್ಲಿ ತೂಕವಿತ್ತು, ಮುಂದೊಂದು ಬೆಳೆಯುತ್ತೇನೆಂಬ ವಿಶ್ವಾಸವೂ ಇತ್ತು. ಹೊಸ ಹುಡುಗಿಯರಿಗೆ ಒಮ್ಮೆಲೇ ದೊಡ್ಡ ಅವಕಾಶ ಸಿಗೋದಿಲ್ಲ ಎಂಬ ವಾಸ್ತವದ ಅರಿವೂ ಕೂಡಾ ಇದೆ. ಹಾಗಾಗಿ, ನಿಧಾನವಾಗಿ ಸಿಕ್ಕ ಅವಕಾಶಗಳಲ್ಲಿ ಖುಷಿ ಕಾಣುತ್ತಾ ಬೆಳೆಯಬೇಕು ಎಂಬ ಪ್ರಜ್ಞೆ ಹುಡುಗಿಗಿದೆ. ಯಾವ ಹುಡುಗಿ ಎಂದರೆ ನಿಖೀತಾ ಎನ್ನಬೇಕು. ನಿಖಿತಾ ಬಗ್ಗೆ ಮತ್ತೆ ಹೊಸ ಇಂಟ್ರೋಡಕ್ಷನಾ? ಎಂದು ನೀವು ಆಶ್ವರ್ಯಪಡಬೇಡಿ. ನಾವು ಹೇಳುತ್ತಿರುವುದು ಈಗಷ್ಟೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಹೊಸ ಹುಡುಗಿ ನಿಖೀತಾ ನಾರಾಯಣ್‌ ಬಗ್ಗೆ. ಸದ್ಯ ಕನ್ನಡದಲ್ಲಿ “ಜೋಗಿಗುಡ್ಡ’ ಹಾಗೂ “ಸಾಧು’ ಚಿತ್ರದಲ್ಲಿ ನಟಿಸುತ್ತಿರುವ ನಿಖೀತಾ ನಾರಾಯಣ್‌ ಗಾಂಧಿನಗರದ ನ್ಯೂ ಎಂಟ್ರಿ. ನಿಖಿತಾ ಕನ್ನಡ ಚಿತ್ರರಂಗಕ್ಕಷ್ಟೇ ಹೊಸ ಮುಖ. ಆದರೆ ತೆಲುಗಿಗಲ್ಲ. ಈಗಾಗಲೇ ತೆಲುಗಿನಲ್ಲಿ ಐದಾರು ಸಿನಿಮಾಗಳನ್ನು ಮಾಡಿದ್ದಾರೆ. ಹಾಗಂತ ನಿಖೀತಾ ತೆಲುಗು ಹುಡುಗಿಯೇ ಎಂದು ನೀವು ಕೇಳುವಂತಿಲ್ಲ. ತುಂಬಾ ಸ್ಪಷ್ಟವಾಗಿ ಕನ್ನಡ ಮಾತನಾಡುವ ಕನ್ನಡದ ಹುಡುಗಿ. ಆದರೆ ಸೆಟ್ಲ ಆಗಿದ್ದು ಮಾತ್ರ ಹೈದರಾಬಾದ್‌ನಲ್ಲಿ. ಹಾಗಾಗಿ, ತೆಲುಗು ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಪಡೆಯುತ್ತಾರೆ. 


ಮಾಡೆಲಿಂಗ್‌ ಮೂಲಕ ಎಂಟ್ರಿ
ಚಿತ್ರರಂಗಕ್ಕೆ ಬರುವ ಬಹುತೇಕ ನಟಿಯರಿಗೆ ಮಾಡೆಲಿಂಗ್‌ನ ಹಿನ್ನೆಲೆ ಇರುತ್ತದೆ. ಸಿನಿಮಾಕ್ಕೆ ಅದೊಂದು ವೇದಿಕೆಯನ್ನು ಒದಗಿಸುತ್ತದೆ ಎಂದರೆ ತಪ್ಪಲ್ಲ. ನಿಖೀತಾ ನಾರಾಯಣ್‌ ಕೂಡಾ ಮಾಡೆಲಿಂಗ್‌ ಹಿನ್ನೆಲೆಯಿಂದ ಬಂದವರು. ನಿಖೀತಾ ತಂದೆ ಆರಂಭದಲ್ಲಿ ಜಾಹೀರಾತು ಕ್ಷೇತ್ರದಲ್ಲಿ ಇದ್ದಿದ್ದರಿಂದ ಆರಂಭದಲ್ಲಿ ಜಾಹೀರಾತೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಕೆರಿಯರ್‌ ಆರಂಭವಾಗುತ್ತದೆ. ಆ ನಂತರ ನಟಿ ತ್ರಿಶಾ ಸೇರಿದಂತೆ ಸಾಕಷ್ಟು ಮಂದಿಯೊಂದಿಗೆ ಬೇರೆ ಬೇರೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾ ಬಿಝಿಯಾದ ನಿಖೀತಾ 2009 ರಲ್ಲಿ ಮಿಸ್‌ ಹೈದರಾಬಾದ್‌, 2010 ರಲ್ಲಿ ನಡೆದ ಮಿಸ್‌ ಸೌತ್‌ಇಂಡಿಯಾದ ಸೆಕೆಂಡ್‌ ರನ್ನರ್‌ಅಪ್‌ನ್ನು ಮುಡಿಗೇರಿಸಿಕೊಳ್ಳುವ ಮೂಲಕ ಸಿನಿಮಾ ಮಂದಿಯ ಕಣ್ಣಿಗೆ ಬಿದ್ದವರು. ಮಾಡೆಲಿಂಗ್‌ ಮಾಡುತ್ತಿದ್ದ ಸಮಯದಲ್ಲಿ ಸಾಕಷ್ಟು ಸಿನಿಮಾ ಅವಕಾಶಗಳು ನಿಖೀತಾ ಅವರನ್ನು ಹುಡುಕಿಕೊಂಡು ಬಂದಿದ್ದರೂ ಯಾವುದನ್ನೂ ಒಪ್ಪಿಕೊಳ್ಳದ ನಿಖೀತಾಗೆ ಫೇಸ್‌ಬುಕ್‌ ಹಾಗೂ ಗೂಗಲ್‌ನಲ್ಲಿ ಪ್ಲೆಸೆ¾ಂಟ್‌ ಬೇರೆ ಆಗಿತ್ತು. ಇನ್ನೇನು ಕಂಪೆನಿಗೆ ಸೇರಬೇಕು ಎನ್ನುವಷ್ಟರಲ್ಲಿ ತೆಲುಗು ಚಿತ್ರದಿಂದ ಮತ್ತೂಂದು ಆಫ‌ರ್‌. ಹೇಗೆ ಯೋಚಿಸಿ ನೋಡಿದರೂ ಅದು ಒಳ್ಳೆಯ ಲಾಂಚ್‌ ಆಗಿರುತ್ತದೆ. ಕೊನೆಗೆ ನಿಖೀತಾ ಒಪ್ಪಿಕೊಳ್ಳುವ ಮೂಲಕ “ಇಟ್ಸ್‌ ಮೈ ಲವ್‌ಸ್ಟೋರಿ’ ಮೊದಲ ತೆಲುಗು ಸಿನಿಮಾವಾಗುತ್ತದೆ. ಈ ಚಿತ್ರದ ಅಭಿನಯಕ್ಕೆ ಸೀಮಾ ಅವಾರ್ಡ್‌ ಕೂಡಾ ನಿಖೀತಾ ಪಾಲಾಗುತ್ತದೆ. ಆ ನಂತರ  “ಮೇಡ್‌ ಇನ್‌ ವೈಜಾಕ್‌’, “ಪೇಸರತು’. “ಲೇಡಿಸ್‌ ಅಂಡ್‌ ಜೆಂಟಲ್‌ಮೆನ್‌’, “ನಳದಮಯಂತಿ’ ಹಾಗೂ “ತನು ನೆನು ವೆಳ್ಳಿಪೊಯಿಂದಿ’  ಚಿತ್ರಗಳಲ್ಲಿ  ನಟಿಸಿದ್ದಾರೆ. ಸದ್ಯ ನಿಖಿತಾ ತೆಲುಗು ಪ್ರೇಕ್ಷಕರಿಗೆ ಪರಿಚಿತ ಮುಖ ಎಂದರೆ ತಪ್ಪಲ್ಲ. ಆದರೆ ಕನ್ನಡ ಪ್ರೇಕ್ಷಕರಿಗೆ ಈಗಷ್ಟೇ ಪರಿಚಿತರಾಗುತ್ತಿದ್ದಾರೆ.

Advertisement

ನಿಖಿತಾ ಇಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ನಿಜ. ಹಾಗಂತ ಒಂದರ ಹಿಂದೊಂದರಂತೆ ಸತತವಾಗಿ ಅವರಿಗೂ ಆಫ‌ರ್‌ ಬಂದಿಲ್ಲ. ಒಂದು ಸಿನಿಮಾ ಆದ ನಂತರ ಸಾಕಷ್ಟು ಕಾದಿದ್ದಾರೆ. ಒಂದಂತದಲ್ಲಿ ತಾಳ್ಮೆ ಕಳೆದುಕೊಂಡು ಈ ಸಿನಿಮಾ ಸಹವಾಸವೇ ಸಾಕೆಂದು ಕಂಪೆನಿಯೊಂದಕ್ಕೆ ಕೆಲಸಕ್ಕೂ ಸೇರಿಬಿಡುತ್ತಾರೆ. ಆಗ ಮತ್ತೆ ಒಳ್ಳೆಯ ಆಫ‌ರ್‌. ಮನಸ್ಸು ಬಣ್ಣದ ಲೋಕದ ಕಡೆ ವಾಲುತ್ತದೆ.

“ಒಂದು ಸಿನಿಮಾ ಆದ ನಂತರ ಒಳ್ಳೆಯ ಆಫ‌ರ್‌ ಬರಲಿಲ್ಲ. ಸಾಕಷ್ಟು ಸಮಯ ಕಾದೆ. ತುಂಬಾ ಬೇಜಾರಾಗಿ ಸಾಕಪ್ಪಾ ಚಿತ್ರರಂಗದ ಸಹವಾಸ ಎಂದು ಮತ್ತೆ ಕೆಲಸಕ್ಕೆ ಸೇರಲು ನಿರ್ಧರಿಸಿದೆ. ಆಗ ಮತ್ತೂಂದು ಅವಕಾಶ ಬಂತು. ಈ ಪಾತ್ರಕ್ಕೆ ನೀನೇ ಬೇಕು, ತುಂಬಾ ಒಳ್ಳೆಯ ಪಾತ್ರ ಎಂದರು. ಆಗ ಒಪ್ಪಿಕೊಂಡಿದ್ದೇ “ಮೇಡ್‌ ಇನ್‌ ವೈಜಾಕ್‌’. ಅಲ್ಲಿಂದ ಸತತವಾಗಿ ಆಫ‌ರ್‌ ಬರತೊಡಗಿತು’ ಎಂದು ತಮ್ಮ ಸಿನಿ ಕೆರಿಯರ್‌ ಬಗ್ಗೆ ಹೇಳುತ್ತಾರೆ ನಿಖೀತಾ ನಾರಾಯಣ್‌. 

ಕನ್ನಡದ ಆಸೆ
ಸುಮಾರು ವರ್ಷಗಳಿಂದ ನಿಖೀತಾ ಕುಟುಂಬ ಹೈದರಾಬಾದ್‌ನಲ್ಲಿ ಸೆಟ್ಲ ಆಗಿದ್ದರೂ ಕನ್ನಡದ ಸಂಪರ್ಕ ಬಿಟ್ಟಿರಲಿಲ್ಲ. ಹಾಗಾಗಿ ಕನ್ನಡ ಚೆನ್ನಾಗಿಯೇ ಬರುತ್ತಿತ್ತು. ನಿಖೀತಾ ಸಂಬಂಧಿಕರು ಕೂಡಾ ಕರ್ನಾಟಕದಲ್ಲೇ ಇದ್ದರು. ಹಾಗಾಗಿ, ತೆಲುಗಿನಲ್ಲೇ ಎಷ್ಟೇ ಬಿಝಿ ಇದ್ದರೂ ಕನ್ನಡದಲ್ಲೊಂದು ಸಿನಿಮಾ ಮಾಡಬೇಕು, ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಡಬೇಕೆಂಬ ಆಸೆ ನಿಖೀತಾಗಿತ್ತು. ಆಗ ಸಿಕ್ಕಿದ್ದು “ಗೀತಾಂಜಲಿ’ ಚಿತ್ರ. ಶ್ರೀನಗರ ಕಿಟ್ಟಿ ನಾಯಕರಾಗಿರುವ ಈ ಚಿತ್ರಕ್ಕೆ ನಿಖೀತಾ ನಾಯಕಿಯಾಗಿ ಎಂಟ್ರಿಕೊಟ್ಟರೂ ಆ ಚಿತ್ರ ಮಾತ್ರ ಹೆಚ್ಚು ದಿನ ನಡೆಯಲೇ ಇಲ್ಲ. ಹಾಗಾಗಿ, ಮೊದಲ ಚಿತ್ರ ಅರ್ಧಕ್ಕೆ ನಿಂತ ಬೇಸರದಲ್ಲಿದ್ದ ನಿಖೀತಾಗೆ ಆ ನಂತರ ಸಿಕ್ಕಿದ್ದು “ಸಾಧು’. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ನಡುವೆಯೇ ನಿಖೀತಾ ಮತ್ತೂಂದು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದು “ಜೋಗಿಗುಡ್ಡ’. ಧರ್ಮಕೀರ್ತಿರಾಜ್‌ ನಾಯಕರಾಗಿರುವ ಈ ಚಿತ್ರದಲ್ಲಿ ನಿಖೀತಾಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. 

ಇಷ್ಟೇ ಅಲ್ಲದೇ ನಿಖೀತಾಗೆ ಕನ್ನಡದಿಂದಲೂ ಸಾಕಷ್ಟು ಅವಕಾಶಗಳು ಬರುತ್ತಿವೆಯಂತೆ. ಅದರಲ್ಲಿ ದೊಡ್ಡ ಸ್ಟಾರ್‌ ನಟನ ಚಿತ್ರದಿಂದಲೂ ಅವಕಾಶ ಬಂದಿದೆ ಎಂದು ಖುಷಿಯಿಂದ ಹೇಳುತ್ತಾರೆ ನಿಖೀತಾ. “ತೆಲುಗಿನಲ್ಲಿ ನಾನು ಎಷ್ಟೇ ಸಿನಿಮಾ ಮಾಡಿದರೂ ಕನ್ನಡದಲ್ಲಿ ಸಿನಿಮಾ ಮಾಡಬೇಕು, ಇಲ್ಲಿ ಗುರುತಿಸಿಕೊಳ್ಳಬೇಕೆಂಬ ಆಸೆ ಇತ್ತು. ಈಗ ಆ ಆಸೆ ಈಡೇರುತ್ತಿದೆ. ಕನ್ನಡದಿಂದ ಒಳ್ಳೆಯ ಅವಕಾಶಗಳು ಬರುತ್ತಿವೆ’ ಎಂಬುದು ನಿಖೀತಾ ಮಾತು.  

Advertisement

ಅಂದಹಾಗೆ, ನಿಖಿತಾ ಯಾವುದೇ ನಟನಾ ತರಬೇತಿ ಪಡೆದಿಲ್ಲ. ಸಹಜ ನಟನೆಯಲ್ಲಿ ನಂಬಿಕೆ ಇಟ್ಟವರು. ಜೊತೆಗೆ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಕನಸು ಕೂಡಾ ನಿಖೀತಾಗಿದೆ. “ಜನ ಇಷ್ಟಪಡೋದು ಸಹಜ ನಟನೆಯನ್ನು. ಅದನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇಲ್ಲಿವರೆಗಿನ ನನ್ನ ಸಿನಿಮಾದ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮುಂದೆಯೂ ಅದನ್ನೇ ನಿರೀಕ್ಷಿಸುತ್ತೇನೆ’ ಎನ್ನುತ್ತಾರೆ ನಿಖಿತಾ. ಚಿತ್ರರಂಗದಲ್ಲಿ ಒಮ್ಮೆಲೇ ಒಳ್ಳೆಯ ಅವಕಾಶಗಳು ಸಿಗೋದಿಲ್ಲ ಎಂಬುದು ನಿಖೀತಾಗೆ ಚೆನ್ನಾಗಿಯೇ ಗೊತ್ತಿದೆ. ಹಾಗಾಗಿ, ಬಂದ ಅವಕಾಶಗಳಲ್ಲೇ ಖುಷಿ ಕಾಣುತ್ತಾ ಅದರಲ್ಲೇ ತನ್ನ ಸಾಮರ್ಥ್ಯವನ್ನು ತೋರಿಸಬೇಕೆಂಬ ಆಸೆ ಕೂಡಾ ನಿಖೀತಾಗಿದೆ. ಮುಂದೆ ನಿಖೀತಾಗೆ ತೆಲುಗು ಹಾಗೂ ಕನ್ನಡ ಎರಡೂ ಚಿತ್ರರಂಗಗಳಲ್ಲೂ ನಟಿಸುತ್ತಾ ಮಿಂಚಬೇಕೆಂಬ ಆಸೆಯೂ ಇದೆಯಂತೆ.

ಬರಹ: ರವಿಪ್ರಕಾಶ್‌ ರೈ, ಚಿತ್ರಗಳು: ಮನು ಮತ್ತು ಸಂಗ್ರಹ

Advertisement

Udayavani is now on Telegram. Click here to join our channel and stay updated with the latest news.

Next