Advertisement
ರಾಮನಲ್ಲಿ ಸದಾ ಒಂದು ಅಪೂರ್ವ ತೇಜಸ್ಸು ಮಿನುಗುತ್ತಿತ್ತು. ಅದು ಅಪೂರ್ವ, ಅನಿರ್ವಚನೀಯ. ಅದೇ ಜನಾಕರ್ಷಣೆಯ ಕೇಂದ್ರಬಿಂದು. ನನ್ನ ಮಿತ ತಿಳಿವಳಿಕೆಯ ಅಡಿಯಲ್ಲಿ ಹೇಳುವುದಾದರೆ, ಅದನ್ನು ಮಾತೃಹೃದಯ ಗುರುತಿಸಿತ್ತು. ಗುರು ವಶಿಷ್ಠರು ಕಂಡಿದ್ದರು. ವಿಶ್ವಾಮಿತ್ರರು ಗುರುತಿಸಿದ್ದರು. ನನ್ನವರ ಹಾಗೂ ನನ್ನ ಬಂಟ ಹನುಮ, ಅಜ್ಜಿ ಶಬರಿ, ಅತ್ತ ವಿಭೀಷಣ, ದುಷ್ಟ ರಾವಣನ ಶಿಷ್ಟ ಮಡದಿ ಮಂಡೋದರಿ ತಿಳಿದಿದ್ದರು. ಲೋಕದ ಜನರು ಆ ಶಕ್ತಿಯನ್ನೇ ದುಷ್ಟ ಸಂಹಾರ, ಶಿಷ್ಟ ರಕ್ಷಣೆ, ಧರ್ಮ ಸಂಸ್ಥಾಪನೆಗಾಗಿ ದಿವಿಯಿಂದ ಭುವಿಗಿಳಿದ ಶಕ್ತಿಯೆಂದು ಆರಾಧಿಸುತ್ತಿದ್ದರು.
Related Articles
Advertisement
ನಮ್ಮ ದಾಂಪತ್ಯ ಎಷ್ಟು ಅನ್ಯೊನ್ಯದ್ದು ಗೊತ್ತೇ? ಮುಂದಿನ ಯುಗಯುಗಾಂತರವೂ ಈ ಸೀತಾರಾಮರನ್ನು ಆದರ್ಶದಾಂಪತ್ಯಕ್ಕೆ ಮಾದರಿಯಾಗಿಟ್ಟುಕೊಳ್ಳುತ್ತದೆಂದು ಅಯೋಧ್ಯೆಯ ಸಾಮಾನ್ಯಪ್ರಜೆಯೂ ಭಾವಿಸುವಷ್ಟು! ನನ್ನತ್ತೆ ಕೌಸಲ್ಯಾದೇವಿಯರಂತೂ ನನ್ನನ್ನು ತುಂಬಾ ಹಚ್ಚಿಕೊಂಡುಬಿಟ್ಟಿದ್ದರು. ನನ್ನವರು ನನ್ನನ್ನು ಅದೆಷ್ಟು ಪ್ರೀತಿಸುತ್ತಿದ್ದರೆಂದರೆ ವರ್ಣಿಸಲು ಶಬ್ದಗಳು ಸೋಲುತ್ತವೆ. ನನ್ನ ಮನಸ್ಸೇ ಅವರ ಮನಸ್ಸು, ಅವರ ಮನಸ್ಸೇ ನನ್ನ ಮನಸ್ಸು. ನನ್ನ ಮನದ ಪಿಸುಮಾತೂ ಅವರಿಗೆ ಕೇಳಿಸುತ್ತಿತ್ತು. ಅವರ ಅಂತರಂಗದ ಮೆಲುದನಿಗೆ ನಾನು ಕಿವಿಯಾಗಿದ್ದೆ.
ಒಮ್ಮೆ ನನ್ನವರು, ನಗರದ ಏಕತಾನತೆ ಸಾಕಾಗಿದೆ; ದೂರದ ಕಾಡುಮೇಡುಗಳಲ್ಲಿ ಅಲೆದಾಡಿ, ಋಷಿಮುನಿಗಳ ಸಂದರ್ಶನ ಮಾಡಿ ಬರೋಣವೆಂದು ಮನಸ್ಸಿನಲ್ಲಿ ಅಂದುಕೊಂಡರು. ಅದೇ ದಿನ ನಾನು ಅವರಿಗೆ ಹೇಳಿದೆ; “ನಾನೂ ನಿಮ್ಮೊಂದಿಗೆ ಕಾಡಿಗೆ ಬರುತ್ತೇನೆ, ಕರೆದುಕೊಂಡು ಹೋಗಲೇಬೇಕು’ ಅಂದೆ. “ಅರೆ ನಾನೆಲ್ಲಿ ಕಾಡಿಗೆ ಹೋಗುತ್ತೇನೆಂದು ನಿನ್ನಲ್ಲಿ ಹೇಳಿದೆ?’ ಎಂದು ಕೇಳಿದರು. “ನನಗೆಲ್ಲ ಕೇಳಿಸಿಬಿಟ್ಟಿದೆ’ ಅಂದೆ. ಇಬ್ಬರೂ ಜೋರಾಗಿ ನಕ್ಕೆವು.
ಇಂತಹ ಇನ್ನೆಷ್ಟೋ ಉದಾಹರಣೆಗಳಿವೆ. ಆದರೆ, ಈ ಉದಾಹರಣೆಯನ್ನು ಹೇಳಲು ಕಾರಣವಿದೆ. ಇದೊಂದು ಭವಿಷ್ಯದ ಸೂಚಕವೋ ಎಂಬಂತೆ ನನ್ನ ಮದುವೆಯಾಗಿ ಹನ್ನೆರಡು ವರ್ಷಗಳ ನಂತರ ಪ್ರಾರಂಭವಾಯಿತು ಕಷ್ಟದ ದಿನಗಳು. ಹಾಗೆಂದು ನಾನಾಗಲೀ ನನ್ನವರಾಗಲೀ ಅದನ್ನು ಕಷ್ಟವೆಂದುಕೊಂಡಿರಲಿಲ್ಲ. ಲೋಕದ ಕಣ್ಣಿಗೆ ಹಾಗೆ ಕಾಣುತ್ತಿತ್ತು. ಕಷ್ಟಗಳನ್ನೇ ಸುಖಗಳಾಗಿ ಮಾರ್ಪಡಿಸಿಕೊಳ್ಳುವ ಜೀವನ ಕಲೆ ನಮ್ಮಿಬ್ಬರಿಗೂ ಗೊತ್ತಿತ್ತು. ಹಾಗೆಂದು “ನೀವು ಕಣ್ಣೀರು ಹಾಕಲೇ ಇಲ್ವ?’ ಎಂದು ಕೇಳಬೇಡಿ.(ಮುಂದುವರಿಯುತ್ತದೆ…) – ಸಿ.ಎ. ಭಾಸ್ಕರ ಭಟ್ಟ