– ಸದ್ಯ ರಚಿತಾ ರಾಮ್ ಎದುರು ಸಿಕ್ಕರೆ ಹೀಗೆ ಕೇಳುವವರ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ಕಾರಣ, “ಐ ಲವ್ ಯೂ’ ಸಿನಿಮಾ. ಉಪೇಂದ್ರ ನಾಯಕರಾಗಿರುವ “ಐ ಲವ್ ಯೂ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್‌ನಲ್ಲಿ ರಚಿತಾ ಬೋಲ್ಡ್ ಲುಕ್, ಮಾತು ನೋಡಿದವರು ಅಚ್ಚರಿಪಟ್ಟಿದ್ದಾರೆ. ಹಾಗಂತ ರಚಿತಾಗೆ ಈ ಬಗ್ಗೆ ಬೇಸರವಿಲ್ಲ. ಕಾರಣ ಕಥೆ ಹಾಗೂ ಪಾತ್ರ. “ಒಬ್ಬ ನಟಿಯಾಗಿ ನನಗೆ ಕೆರಿಯರ್‌ನಲ್ಲಿ ಒಮ್ಮೆಯಾದರೂ ತುಂಬಾ ಬೋಲ್ಡ್ ಪಾತ್ರ ಮಾಡಬೇಕೆಂಬ ಆಸೆ ಇತ್ತು. ಆ ಕನಸಿನೊಂದಿಗೆ ಇದ್ದಾಗ ಸಿಕ್ಕ ಸ್ಕ್ರಿಪ್ಟ್ “ಐ ಲವ್ ಯೂ’. ಒಳ್ಳೆಯ ಬ್ಯಾನರ್, ಒಳ್ಳೆಯ ಡೈರೆಕ್ಟರ್ ಹಾಗೂ ಒಳ್ಳೆಯ ನಾಯಕ … ಜೊತೆಗೆ ನಾನು ಕನಸು ಕಾಣುತ್ತಿದ್ದಂತಹ ಪಾತ್ರ ಸಿಕ್ಕಿತು. ಆ ಕಾರಣದಿಂದ ನಾನು ಒಪ್ಪಿಕೊಂಡೆ. ನಟಿಯಾಗಿ ಎಲ್ಲಾ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಯಾರಿಗಿರಲ್ಲ ಹೇಳಿ. ಆ ಆಸೆಯಿಂದಲೇ ನಾನು “ಐ ಲವ್ ಯೂ’ ಒಪ್ಪಿಕೊಂಡಿದ್ದು. ಈ ತರಹದ ಪಾತ್ರ ಮಾಡಿದ್ದರ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ತುಂಬಾ ಖುಷಿಯಿಂದಲೇ ಮಾಡಿದ್ದೇನೆ. ಸಾಕಷ್ಟು ನಿರೀಕ್ಷೆಯಿಂದ ಎದುರು ನೋಡುತ್ತಿದ್ದೇನೆ. ಸಿನಿಮಾ ಬಗ್ಗೆ, ನನ್ನ ಪಾತ್ರ ಬಗ್ಗೆ ಏನೇ ಪ್ರತಿಕ್ರಿಯೆ, ಕಾಮೆಂಟ್ ಬಂದರೂ ಅದನ್ನು ಸ್ವೀಕರಿಸಲು ನಾನು ಸಿದ್ಧಳಾಗಿದ್ದೇನೆ’ ಎಂದು ನೇರವಾಗಿ ಹೇಳುತ್ತಾರೆ ರಚಿತಾ.
Advertisement
ಸಾಮಾನ್ಯವಾಗಿ ಒಬ್ಬ ನಟಿ ಒಂದು ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡರೆ ಮತ್ತೆ ಅವರಿಗೆ ಆ ತರಹದ್ದೇ ಪಾತ್ರಗಳು ಹುಡುಕಿಕೊಂಡು ಬರುತ್ತವೆ. ಒಂದು ವೇಳೆ ರಚಿತಾ ರಾಮ್ ಅವರಿಗೂ ಅಂತಹ ಸಂದರ್ಭ ಎದುರಾದರೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಆದರೆ, ರಚಿತಾ ಮಾತ್ರ ಈ ವಿಚಾರದಲ್ಲಿ ಪಕ್ಕಾ ಇದ್ದಾರೆ. ಅವರದ್ದೇ ಮಾತಲ್ಲಿ ಹೇಳಬೇಕೆಂದರೆ ಬೋಲ್ಡ್ ಆಗಿ ಕಾಣಿಸಿಕೊಳ್ಳೋದು “ಐ ಲವ್ ಯೂ’ ಚಿತ್ರಕ್ಕೆ ಕೊನೆ. ಬೋಲ್ಡ್ ಆಗಿ ಕಾಣಿಸಿಕೊಂಡ ಫಸ್ಟ್ ಅಂಡ್ ಲಾಸ್ಟ್ ಸಿನಿಮಾ “ಐ ಲವ್ ಯೂ’ ಆಗಲಿದೆ. “ಮೊದಲೇ ಹೇಳಿದಂತೆ ನಾನು “ಐ ಲವ್ ಯೂ’ ಚಿತ್ರದ ಪಾತ್ರ ಒಪ್ಪಿಕೊಂಡಿದ್ದು ತುಂಬಾ ಇಷ್ಟಪಟ್ಟು. ಈ ಹಿಂದಿನ ನನ್ನ ಯಾವ ಸಿನಿಮಾದಲ್ಲೂ ನನಗೆ ಆ ತರಹದ ಪಾತ್ರ ಸಿಕ್ಕಿಲ್ಲ. ಹಾಗಾಗಿ, ಪಾತ್ರಕ್ಕೆ ತಕ್ಕಂತೆ ಕಾಣಿಸಿಕೊಂಡಿದ್ದೇನೆ. ಹಾಗಂತ ಮುಂದೆ ಆ ತರಹದ್ದೇ ಅವಕಾಶಗಳು ಬಂದರೆ ಖಂಡಿತವಾಗಿಯೂ ಕಾಣಿಸಿಕೊಳ್ಳುವುದಿಲ್ಲ. ಜೀವನದಲ್ಲಿ ಒಂದು ಬಾರಿ ಬೋಲ್ಡ್ ಲುಕ್ ಪ್ರಯತ್ನಿಸಬೇಕೆಂದಿತ್ತು. ಅದು “ಐ ಲವ್ ಯೂ’ನಲ್ಲಿ ಆಗಿದೆ. ಮುಂದೆ ಯಾವ ಸಿನಿಮಾದಲ್ಲೂ ಬೋಲ್ಡ್ ಆಗಿ ಕಾಣಿಸಿಕೊಳ್ಳುವುದಿಲ್ಲ. ಬೋಲ್ಡ್ ಆಗಿ ಕಾಣಿಸಿಕೊಳ್ಳುವುದು “ಐ ಲವ್ ಯೂ’ಗೆ ಲಾಸ್ಟ್’ ಎನ್ನುವುದು ರಚಿತಾ ಮಾತು.