Advertisement

ಕುಟುಂಬ ರಾಜಕಾರಣ ದಳ ಪತನಕೆ ಇದೇ ಕಾರಣ

11:27 PM May 23, 2019 | Team Udayavani |

ಬೆಂಗಳೂರು: “ಕುಟುಂಬ ರಾಜಕಾರಣ’ ಜೆಡಿಎಸ್‌ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಅತಿ ದೊಡ್ಡ ಹೊಡೆತ ನೀಡಿದ್ದು, ಪಕ್ಷದ ಭವಿಷ್ಯದ ಮೇಲೂ ಮಂಕು ಕವಿದಿದೆ.

Advertisement

ಪ್ರಮುಖವಾಗಿ ಮಂಡ್ಯ ಹಾಗೂ ತುಮಕೂರಿನಲ್ಲಿ ಜೆಡಿಎಸ್‌ ಸೋಲು ಪಕ್ಷಕ್ಕೆ ಆಘಾತ ಮೂಡಿಸಿದ್ದು, ರೈತರ ಸಾಲ ಮನ್ನಾ ಸೇರಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರ ಒಂದು ವರ್ಷದ ಸಾಧನೆಯೂ ಜೆಡಿಎಸ್‌ ಅಭ್ಯರ್ಥಿಗಳ ಕೈ ಹಿಡಿದಿಲ್ಲ.

ಮೊಮ್ಮಗನಿಗಾಗಿ ಹಾಸನ ಕ್ಷೇತ್ರ ತ್ಯಾಗ ಮಾಡಿದ್ದರಿಂದ ಸಚಿವ ಎಚ್‌.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್‌ ರೇವಣ್ಣ ಸುಮಾರು 1.50 ಲಕ್ಷ ಮತಗಳ ದಾಖಲೆಯ ಗೆಲುವು ದಾಖಲಿಸಿ ಒಂದು ರೀತಿಯಲ್ಲಿ ಜೆಡಿಎಸ್‌ ಮರ್ಯಾದೆ ಉಳಿಸಿದ್ದಾರೆ.

ಈಗಾಗಲೇ ಮುಖ್ಯಮಂತ್ರಿ ಸೇರಿ ಮೂವರು ಶಾಸಕರು, ಒಬ್ಬ ಸಂಸದರು ಕುಟುಂಬದಲ್ಲಿದ್ದರೂ ಮತ್ತೆ ಒಂದೇ ಕುಟುಂಬದ ಮೂವರು ಲೋಕಸಭೆ ಚುನಾ ವಣೆಗೆ ಸ್ಪರ್ಧೆಗೆ ಇಳಿದಿದ್ದು ಜನರಲ್ಲಿ ಆಕ್ರೋಶ ಮೂಡಿ ಸಿದೆ ಎಂಬುದು ಫ‌ಲಿತಾಂಶದಿಂದ ಸಾಬೀತಾಗಿದೆ.

ಕಾಂಗ್ರೆಸ್‌ನ ಮತಗಳು ಮಂಡ್ಯ ಹಾಗೂ ತುಮಕೂರಿನಲ್ಲಿ ಜೆಡಿಎಸ್‌ಗೆ ಬಂದಿಲ್ಲ. ಕಾಂಗ್ರೆಸ್‌ ನಾಯಕರ ಒಳ ಏಟು ಸರಿಯಾಗಿಯೇ ಪೆಟ್ಟುಕೊಟ್ಟಿದೆ. ಜೆಡಿಎಸ್‌ ಏಕಾಂಗಿಯಾಗಿಯೇ ಹೋಗಿದ್ದರೆ ಕನಿಷ್ಠ ಮೂರು ಸ್ಥಾನ ಗೆಲ್ಲಬಹುದಿತ್ತು ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.

Advertisement

ಆತಂಕ: ಜೆಡಿಎಸ್‌ ಜತೆಗಿನ ಮೈತ್ರಿಯಿಂದ ಕಾಂಗ್ರೆಸ್‌ಗೆ ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಚಿತ್ರದುರ್ಗ, ಬೆಂಗಳೂರು ಉತ್ತರ, ರಾಯಚೂರು ಕ್ಷೇತ್ರಗಳಲ್ಲಿ ಲಾಭವಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿರುವುದರಿಂದ ಕಾಂಗ್ರೆಸ್‌ ಮೈತ್ರಿ ಕಡಿದುಕೊಂಡರೆ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರುವ ಆತಂಕ ಜೆಡಿಎಸ್‌ಗೆ ಎದುರಾಗಿದೆ.

ಖುದ್ದು ಎರಡು ಸ್ಥಾನದಿಂದ ಒಂದು ಸ್ಥಾನಕ್ಕೆ ಜೆಡಿಎಸ್‌ ಇಳಿದಿದ್ದು, ಕಾಂಗ್ರೆಸ್‌ 10 ರಿಂದ 2ಕ್ಕೆ ಇಳಿದಿದ್ದು ಮೈತ್ರಿ ಮಾಡಿಕೊಂಡಿದ್ದೇ ಕಳಪೆ ಸಾಧನೆಗೆ ಕಾರಣ ಎಂದು ಕಾಂಗ್ರೆಸ್‌ ನಾಯಕರು ಪ್ರತಿಪಾದಿಸಿ ಮೈತ್ರಿ ಕಡಿದುಕೊಳ್ಳಲು ಮುಂದಾದರೆ ಅಥವಾ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಒಂದು ವರ್ಷ ಜನರ ವಿಶ್ವಾಸ ಗಳಿಸಲು ಕುಮಾರಸ್ವಾಮಿ ವಿಫ‌ಲರಾಗಿದ್ದಾರೆ.

ಹೀಗಾಗಿ, ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂದು ಹಠ ಹಿಡಿದರೆ ಜೆಡಿಎಸ್‌ ಇಕ್ಕಟ್ಟಿಗೆ ಸಿಲುಕಲಿದೆ. ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂಬ ನಂಬಿಕೆಯಿಂದ

-ಕಾಂಗ್ರೆಸ್‌ ಹೈಕಮಾಂಡ್‌ ಸಹ ಜೆಡಿಎಸ್‌ ಜತೆ ಮೈತ್ರಿ ಹಾಗೂ ಮುಖ್ಯ ಮಂತ್ರಿ ಸ್ಥಾನ ಜೆಡಿಎಸ್‌ಗೆ ಬಿಟ್ಟುಕೊಡಲು ಒಪ್ಪಿತ್ತು. ಆದರೆ, ಫ‌ಲಿತಾಂಶವು ಜೆಡಿಎಸ್‌ ಜತೆಗಿನ ಮೈತ್ರಿ ಲಾಭ ಕ್ಕಿಂತ ನಷ್ಟವೇ ಹೆಚ್ಚು ಎಂಬುದನ್ನು ಸಾಬೀತುಪಡಿಸಿ ರುವುದರಿಂದ ಜೆಡಿಎಸ್‌ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪುತ್ರನನ್ನು ಗೆಲ್ಲಿಸಿಕೊಂಡ ರೇವಣ್ಣ: ಮಂಡ್ಯ ಹಾಗೂ ತುಮಕೂರಿನಲ್ಲಿ ಜೆಡಿಎಸ್‌ ಸೋತರೂ ಹಾಸನದಲ್ಲಿ ತಮ್ಮ ಪುತ್ರ ಪ್ರಜ್ವಲ್‌ನನ್ನು ಗೆಲ್ಲಿಸಿಕೊಳ್ಳುವಲ್ಲಿ ಸಚಿವ ಎಚ್‌.ಡಿ.ರೇವಣ್ಣ ಯಶಸ್ವಿಯಾಗಿದ್ದಾರೆ.

ಮಾಜಿ ಸಚಿವ ಬಿ.ಶಿವರಾಂ, ಮಾಜಿ ಶಾಸಕ ಪುಟ್ಟೇಗೌಡ ಸೇರಿ ಕಾಂಗ್ರೆಸ್‌ನ ಎಲ್ಲ ಮಾಜಿ ಶಾಸಕರು, ಮುಖಂಡರ ಮನೆಗೆ ಭೇಟಿ ನೀಡಿ ಪುತ್ರನನ್ನೂ ಕರೆದೊಯ್ದು ಆಶೀರ್ವಾದ ಕೋರಿದ್ದರು. ತನ್ನದೇ ಆದ ಕಾರ್ಯತಂತ್ರ ರೂಪಿಸಿ ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಗೆಲುವಿಗೆ ಶ್ರಮಿಸಿದ್ದರು. ತೀವ್ರ ಅಬ್ಬರಕ್ಕೆ ಅವಕಾಶ ಕೊಡದೆ ತೆರೆ ಮೆರೆಯಲ್ಲೇ ತಂತ್ರಗಾರಿಕೆ ಹೆಣೆದಿದ್ದರು. ಒಟ್ಟಾರೆ, ಪ್ರಜ್ವಲ್‌ ಹಾಸನದಲ್ಲಿ ದೇವೇಗೌಡರ ಉತ್ತರಾಧಿಕಾರಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next