ಬೆಂಗಳೂರು: ಇದು ಬಸವರಾಜ ಬೊಮ್ಮಾಯಿ ಅವರ ಮೊದಲ ಹಾಗೂ ಕಡೇಯ ಬಜೆಟ್ ಆಗಿದೆ. ಅವರು ಚುನಾವಣೆ ಪ್ರಣಾಳಿಕೆಯನ್ನು ಈ ಬಜೆಟ್ ನಲ್ಲಿ ಇಟ್ಟಿದ್ದಾರೆ.
ಅವರ ಬಜೆಟ್ ಮಂಡನೆಯಲ್ಲಿ ಆತ್ಮಬಲ ಕುಗ್ಗಿತ್ತು. ಅವರ ಮಾತಿನಲ್ಲಿ ತಾನು ಮಂಡನೆ ಮಾಡುತ್ತಿರುವ ಬಜೆಟ್ ಜಾರಿ ಮಾಡಲು ಅಸಾಧ್ಯ ಎಂಬ ಅಳುಕು ಎದ್ದು ಕಾಣುತ್ತಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಾವು ಒಂಬತ್ತು ದಿನ ಪಾದಯಾತ್ರೆ ಮಾಡಿ ಬಂದಿದ್ದೇವೆ. ಪಾದಯಾತ್ರೆ ಮಾಡಿದರೆ ನೀರು ಹರಿಯುತ್ತಾ ಎಂದು ಟೀಕೆ ಮಾಡಿದ್ದರು. ನಮ್ಮ ಪಾದಯಾತ್ರೆ ಸರಿ ಇಲ್ಲ ಎಂದ ಮೇಲೆ, ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ ಘೋಷಣೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು.
ಹೋರಾಟಕ್ಕೆ ಸಹಕರಿಸಿದ ರೈತರು, ಬೆಂಗಳೂರಿನ ನಾಗರೀಕರು, ಮಹಿಳೆಯರು ಹಾಗೂ ಎಲ್ಲ ವರ್ಗದವರ ಒತ್ತಾಯ, ಜನಬೆಂಬಲಕ್ಕೆ ಮಣಿದು ರಾಜ್ಯ ಸರ್ಕಾರ 1 ಸಾವಿರ ಕೋಟಿ ರೂ. ಕೊಟ್ಟು ಇದು ಪ್ರಮುಖ ಯೋಜನೆ ಎಂದು ಒಪ್ಪಿಕೊಂಡಿದೆ ಎಂದು ಹೇಳಿದರು.
ಈ ರಾಜ್ಯದ ಯುವಕರಿಗೆ ನಿಮ್ಮ ಯೋಜನೆ ಏನು, ಉದ್ಯೋಗ ಸೃಷ್ಟಿಗೆ ನಿಮ್ಮ ಕ್ರಮ ಏನು, ವಿದ್ಯಾವಂತ ನಿರುದ್ಯೋಗಿಗಳಿಗೆ ಸಹಾಯ ಏನು, ಉದ್ಯೋಗ ನೀಡುವವರಿಗೆ, ಉದ್ಯೋಗ ಪಡೆಯುವವರಿಗೆ ಏನೂ ನೆರವು, ಯೋಜನೆ ಇಲ್ಲ. ಈ ರೀತಿ ಯುವಕರನ್ನು ನಿರ್ಲಕ್ಷ್ಯ ಮಾಡಿದ ಬಜೆಟ್ ಇದೇ ಮೊದಲು ಎಂದು ಟೀಕಿಸಿದರು.
ಇದು ಚುನಾವಣೆಗಾಗಿ ಮಂಡನೆಯಾಗಿರುವ ಬಜೆಟ್. ಇದರಿಂದ ಜನರಿಗೆ ಯಾವುದೇ ಸಹಾಯವಾಗುವುದಿಲ್ಲ. ಇದರಿಂದ ನಮಗೆ ನಿರಾಸೆಯಾಗಿದೆ. ಕಳೆದ ವರ್‌ಷ ಇದೇ ರೀತಿ ತೋರಿಸಿದ ಬಜೆಟ್ ಅನ್ನು ನೀವು ಕಾರ್ಯರೂಪಕ್ಕೆ ತರಲು ಆಗಿಲ್ಲ. ನೀವು ನಿಮಗೆ ಬೇಕಾದವರಿಗೆ ಮಾತ್ರ ಸ್ವಲ್ಪ ಹಣ ನೀಡಿದ್ದು, ಕಾಂಗ್ರೆಸ್ ಹಾಗೂ ದಳದವರನ್ನು ಉಪೇಕ್ಷೆ ಮಾಡಿದ್ದೀರಿ ಎಂದು ಹೇಳಿದರು.