Advertisement

ಹೀಗೊಂದು ಪರಿಸರ ಸ್ನೇಹಿ ಬಸ್‌

12:45 AM Apr 11, 2019 | Lakshmi GovindaRaju |

ಬೆಂಗಳೂರು: ಈ ಬಸ್‌ನಲ್ಲಿ ಶುದ್ಧ ಕುಡಿಯುವ ನೀರು, ತಂಪಾದ ಗಾಳಿ ಎಲ್ಲವೂ ಇದೆ. ಇದೊಂದು ಅಪ್ಪಟ ಪರಿಸರ ಸ್ನೇಹಿ ಬಸ್‌. ಬನಶಂಕರಿ ಮಾರ್ಗವಾಗಿ ದೊಮ್ಮಲೂರು ಸಂಚರಿಸುವ ಕೆಎ07-ಎಫ್-838 ಬಸ್‌ ಹಸಿರುಮಯವಾಗಿ ಕಂಗೊಳಿಸುತ್ತಿದೆ.

Advertisement

ಈ ಬಸ್‌ ಪರಿಸರ ಸ್ನೇಹಿಯಾಗಿರುವುದರ ಹಿಂದೆ, ಡಿಪೋ 6ರ ಬಸ್‌ ಚಾಲಕ ನಾರಾಯಣಪ್ಪ ಅವರ ಕೊಡುಗೆ ಇದೆ. ಇವರು ಬಸ್‌ನಲ್ಲಿ ಪ್ರಯಾಂಣಿಕರಿಗಾಗಿ ನೀರಿನ ಕ್ಯಾನ್‌ ಅಳವಡಿಸಿದ್ದಾರೆ. ಅಷ್ಟೇ ಅಲ್ಲ, ಮನೆ ಅಂಗಳದಲ್ಲಿ ಬಳಸಬಹುದಾದ 10ಕ್ಕೂ ಹೆಚ್ಚು ಸಸಿಗಳನ್ನು ಬಸ್‌ನಲ್ಲಿ ಇಟ್ಟು ಬಸ್‌ ವಾತಾವರಣವನ್ನು ಹಸಿರಾಗಿಸಿದ್ದಾರೆ.

ಬಸ್‌ಗಳಲ್ಲಿ ಸೂಕ್ತ ಚಿಲ್ಲರೆ ಸಿಗಲಿಲ್ಲ, ಸರಿಯಾದ ಸಮಯಕ್ಕೆ ವಾಹನ ತೆಗೆಯಲಿಲ್ಲ ಎನ್ನುವ ಕಾರಣಗಳಿಗೆ ಸಾರ್ವಜನಿಕರು ಮತ್ತು ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ಉಂಟಾಗುತ್ತಿರುತ್ತದೆ. ಆದರೆ, ಈ ಬಸ್‌ನ ವಾತಾವರಣ ಸಂಪೂರ್ಣ ಭಿನ್ನವಾಗಿದೆ. ಈ ಬಸ್‌ನಲ್ಲಿ ಜನ ಖುಷಿಯಿಂದ ಪ್ರಯಾಣಿಸುತ್ತಾರೆ.

ಮುಳಬಾಗಿಲಿನ ನಾರಾಯಣಪ್ಪ ಕಳೆದ 29 ವರ್ಷಗಳಿಂದ ಬಸ್‌ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ವರ್ಷಗಳಿಂದ ಬಸ್‌ನಲ್ಲಿ ನೀರಿನ ಕ್ಯಾನ್‌ ಮತ್ತು ಸಣ್ಣ ಸಸಿಗಳನ್ನು ಬೆಳಸುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಇದಕ್ಕೆ ಡಿಪೋ ಹಿರಿಯ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಟ್ವಿಟ್ಟರ್‌ನಲ್ಲಿ ನಾರಾಯಣಪ್ಪ ಅವರ ಸೇವೆಗೆ ಮೆಚ್ಚುಗೆ ಸೂಚಿಸಿ ಪುಷ್ಪಪ್ರಿಯಾ ಎನ್ನುವವರು “ಬಸ್‌ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಸಣ್ಣ ಸಸಿಗಳನ್ನು ಇಟ್ಟಿದ್ದಾರೆ. ಬಸ್‌ ವಾತಾವರಣ ಪರಿಸರ ಸ್ನೇಹಿಯಾಗಿದೆ’ ಎಂದು ಟ್ವಿಟ್‌ಮಾಡಿದ್ದಾರೆ.

Advertisement

ಈ ವಿಶೇಷ ಕಾಳಜಿಯ ಪ್ರೇರಣೆ ಬಗ್ಗೆ ಪ್ರತಿಕ್ರಿಯಿಸಿದ ನಾರಾಯಣಪ್ಪ, ಪ್ರತಿ ದಿನ ಬಸ್‌ ಬನಶಂಕರಿ ಮಾರ್ಗವಾಗಿ ದೊಮ್ಮಲೂರು ಸಾಗುತ್ತದೆ. ಬಸ್‌ನಲ್ಲಿ ಒಮ್ಮೆ ತುಂಬ ಬಳಲಿಬಂದ ವಯಸ್ಸಾದ ವೃದ್ಧೆಯೊಬ್ಬರು ನೀರು ಕೇಳಿದರು. ಆ ಕ್ಷಣಕ್ಕೆ ಎಲ್ಲಿ ನೀರು ಹುಡುಕುವುದು ಎಂದೇ ಗೊತ್ತಾಗಲಿಲ್ಲ.

ಬಸ್‌ನಲ್ಲಿ ಗ್ಲಾಸ್‌ ಸ್ವತ್ಛ ಮಾಡುವುದಕ್ಕೆ ಇಟ್ಟಿದ್ದ ನೀರನ್ನೇ ಅವರು ಒಂದು ಗುಟುಕೂ ಬಿಡದಂತೆ ಕುಡಿದು ಬಿಟ್ಟರು! ಅಂದಿನಿಂದಲೇ ಬಸ್‌ನಲ್ಲಿ ನೀರಿನ ಕ್ಯಾನ್‌ ಇಡಲು ಪ್ರಾರಂಭಿಸಿದೆ ಎನ್ನುತ್ತಾರೆ. “ಪ್ರತಿ ದಿನ 30 ರೂಗಳನ್ನು ಕೊಟ್ಟು ನೀರಿನ ಕ್ಯಾನ್‌ ತರುತ್ತೇನೆ.

ಜನ ಖುಷಿಯಿಂದ ನೀರು ಕುಡಿದು ಹೋಗುತ್ತಾರೆ. ಸಸಿಗಳ ಬಗ್ಗೆ ಮೆಚ್ಚುಗೆ ಸೂಚಿಸುತ್ತಾರೆ ಇದಕ್ಕಿಂತ ಇನ್ನೇನು ಬೇಕು’ ಎಂದು ಕೇಳುತ್ತಾರೆ ನಾರಾಯಣಪ್ಪ. ಸಾರ್ವಜನಿಕರೊಂದಿಗೆ ಸೌರ್ಹಾದ ಬೆಸುಗೆಯನ್ನು ಬೆಸೆಯುವ ನಿಟ್ಟಿನಲ್ಲಿ ನಾರಾಯಣ್ಣಪ್ಪ ಅವರು ಮಾಡುತ್ತಿರುವ ಸೇವಾ ಕಾರ್ಯ ಇತರ ಸಿಬ್ಬಂದಿಗಳಿಗೆ ಮಾದರಿಯೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next