ಹೆಸರು ತಿಳಿದುಕೊಳ್ಳಲು ಬಹು ಕಷ್ಟವಾಗುತ್ತಿತ್ತು. ನಿಸರ್ಗದ ಬಗ್ಗೆ ಪುಸ್ತಕಗಳೂ ವಿರಳ. ಜೇಬಿನಲ್ಲಿರುತ್ತಿದ್ದ ಪುಟ್ಟ ಟಿಪ್ಪಣಿ ಪುಸ್ತಕದಲ್ಲಿ ಅವುಗಳ ಬಣ್ಣ, ಗಾತ್ರ, ಅಳತೆ, ಆಕಾರವನ್ನೆಲ್ಲ ಬರೆದಿಟ್ಟುಕೊಂಡು ಆನಂತರ ಪರಿಣತರನ್ನು ಕೇಳಿ ಕಲಿಯಬೇಕಾಗಿತ್ತಷ್ಟೆ.
Advertisement
“ಯಾವುದಾದರೂ ಅಸಾಂಪ್ರದಾಯಿಕ ವೃತ್ತಿಯನ್ನು ಕೈಗೊಂಡರೆ ಆ ವ್ಯಕ್ತಿಗೆ ಆ ವಿಷಯದಲ್ಲಿ ಆಸಕ್ತಿ ಬಂದದ್ದು ಹೇಗೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಕುತೂಹಲ ಹುಟ್ಟಿಸುವ ವಿಷಯ. ನನಗೂ ಹಲವರು ಕೇಳುತ್ತಾರೆ: “ನಿಮಗೆ ವನ್ಯಜೀವಿಗಳ ಬಗ್ಗೆ ಆಸಕ್ತಿ ಬಂದದ್ದು ಹೇಗೆ?’ ಎಂದು. ಎಲ್ಲೋ ಹೇಗೋ ನನಗೆ ನಿಸರ್ಗದ ಬಗ್ಗೆ ಆಸಕ್ತಿ, ಅಭಿರುಚಿ ಪ್ರಾರಂಭವಾಯಿತು. ಅದಕ್ಕೆ ಕಾರಣ ಹುಡುಕುವುದು ಸೂಕ್ತವೆನಿಸುತ್ತದೆ.
Related Articles
Advertisement
ಮಕ್ಕಳಿಗೆ ಹೇಳಿದರೆ ಸಾಕೆ? ಹಳ್ಳಿಯ ಜನರಿಗೆ ನಮ್ಮ ಜ್ಞಾನವನ್ನು ಪಸರಿಸಬಾರದೇ? ಸರಿ, ಸ್ನೇಹಿತರೊಬ್ಬರು ಕೊಟ್ಟಿದ್ದ ಆಗಿನ ಕಾಲಕ್ಕೆ ಬಹು ಆಧುನಿಕ ಸಲಕರಣೆಯಾಗಿದ್ದ ಸ್ಲೆ„ಡ್ ಪ್ರಾಜೆಕ್ಟರ್ ಒಂದನ್ನು ಅಣ್ಣನ ಲೂನಾಕ್ಕೆ ಕಟ್ಟಿಕೊಂಡು ಸಂಜೆಯ ವೇಳೆ ಹಳ್ಳಿಗಳಿಗೆ ಹೋಗಿ ಉಪದೇಶ ಮಾಡುವ ಕಾರ್ಯಕ್ರಮ ಪ್ರಾರಂಭವಾಯಿತು. “ಅದ್ಕಣÕರಿ ಸಾಮಿ, ರಾತ್ರಿ ಒತ್ತು ಹೊಲ್ಗುಳ್ಗೆ ಹಂದಿ, ನರಿ, ಕರಡಿ ಬತ್ತವಲ್ಲ ಅದ್ಕೆàನು ಮಾಡ್ತೀರಾ?’ ಅಂತ ಮುಖಕ್ಕೆ ಮಂಗಳಾರತಿ ಆದಾಗ ವನ್ಯಜೀವಿಗಳನ್ನು ಹಳ್ಳಿಯ ಜನ ಯಾವ ದೃಷ್ಟಿಕೋನದಲ್ಲಿ ನೋಡುತ್ತಾರೆಂಬ ಮಹತ್ವದ ಪಾಠಗಳನ್ನು ಕಲಿತೆವು.
ಮನೆಯ ಹತ್ತಿರದಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಿದ್ದ ಮಾಜಿ ಪುರಸಭಾ ಸದಸ್ಯರಾದ ಲಕ್ಷಿ ¾àನರಸಿಂಹಯ್ಯ ಅವರ ಇನ್ನೊಂದು ವೃತ್ತಿಯಾದ ಬಾಡಿಗೆ ಸೈಕಲ್ ಅಂಗಡಿಯಲ್ಲಿ ಗಂಟೆಗೆ ಹದಿನೈದು ಪೈಸೆ ಲೆಕ್ಕದಲ್ಲಿ ಅಟ್ಲಾಸ್ ಸೈಕಲ್ ಬಾಡಿಗೆಗೆ ಪಡೆದು ಹೊರಟರೆ ಊರಿನಿಂದ ಸ್ವಲ್ಪ$ದೂರವಿದ್ದ ಸ್ವಾನಂದೇನಳ್ಳಿ, ಗೂಳೂರು, ಮೈದಾಳ, ಬಸ್ತಿಬೆಟ್ಟ ಇನ್ನಿತರ ಜಾಗಗಳಿಗೆ ಗಂಟೆಗಟ್ಟಲೆ ವಿಹಾರವಾಗುತ್ತಿತ್ತು. ಹಳ್ಳಿಯ ಸುತ್ತಮುತ್ತಲಿದ್ದ ವ್ಯವಸಾಯಕ್ಕೆ ಯೋಗ್ಯವಲ್ಲದ “ಖರಾಬು’ ಜಮೀನಿನಲ್ಲಿ ಬೆಳೆಯುತ್ತಿದ್ದ ಈಚಲು ಮರದ ಮುಳ್ಳು ಗರಿಗಳ ತುದಿಯಲ್ಲಿದ್ದ ಗೀಜಗ ಪಕ್ಷಿಗಳ ಗೂಡುಗಳು ಸ್ವಲ್ಪ ಗಾಳಿ ಬಂದರೂ ಹೊಯ್ದಾಡಿ, ಗೂಡುಗಳು ಕಿತ್ತು ಸೂತ್ರವಿಲ್ಲದೆ ಹಾರಿ ಹೋಗುವ ಗಾಳಿಪಟದ ಹಾಗೆ ತೊಯ್ದಾಡುತ್ತವೇನೋ ಎನಿಸುತ್ತಿತ್ತು. ಈಚಲುಮರಗಳಲ್ಲಿ ಹೆಂಡಕ್ಕಾಗಿ ಕಟ್ಟಿದ್ದ ಮಣ್ಣಿನ ಕುಡಿಕೆಗಳು ಸಹ ಆ ಮರಗಳ ಮುಖ್ಯ ಲಕ್ಷಣಗಳ ಒಂದು ಭಾಗವೇ ಆಗಿತ್ತು.
ಅಡಿಕೆ ತೋಟ ಮತ್ತು ಹೊಲಗ¨ªೆಗಳ ಮಧ್ಯದಲ್ಲಿ ಮರಳು ತುಂಬಿದ, ಒಣಗಿದ, ನೀರಿನ ಕಾಲುವೆಗಳೆಲ್ಲ ಸೀಗೇಮೆಳೆಗಳಿಂದ ತುಂಬಿ, ಹಲವು ವನ್ಯಜೀವಿಗಳಿಗೆ ಮನೆಯಾಗಿದೆಯೆಂದು ತಿಳಿಯಿತು. ಅಲ್ಲಿ ಇರುತ್ತಿದ್ದ ಸಣ್ಣಗೆ, ಉದ್ದನೆಲೆಯ ಚಿಕ್ಕಮರಗಳನ್ನು, ಆ ಬೀಳಿನ ಮಧ್ಯೆ ಯಾಕೆ ಹೋಗುತ್ತೀರಿ ಎಂದು ಬೈದು, ಬೆಪ್ಪಾಲೆ ಎಂದು ಕರೆಯುತ್ತಾರೆಂದು ತೋಟದ ಮಾಲೀಕರು ಕೊಟ್ಟ ಜ್ಞಾನ ಈಗಲೂ ಈ ಮರವನ್ನು ಸುಲಭವಾಗಿ ಗುರುತಿಸಲು ಸಹಕಾರಿ ಯಾಗಿದೆ. ಸಂಜೆ ಕತ್ತಲಾದ ಮೇಲೆ ಟಾರ್ಚಿನ ಬೆಳಕಿನಲ್ಲಿ ಆ ಸೀಗೇ ಮೆಳೆಗಳ ಮಧ್ಯೆ ನಡೆದರೆ ಹೊಳೆಯುವ ಕಣ್ಣುಗಳ ಮೂಲಕ ತಾನೂ ಅಲ್ಲಿದ್ದೇನೆಂದು ತಿಳಿಸುತ್ತಿದ್ದ ಕಾಡುಪಾಪಗಳು ಅಷ್ಟು ವಿರಳವೇನಲ್ಲ ವೆಂದು ಅರಿತೆವು. ಹೆಚ್ಚಾಗಿ ಯಾರೂ ಹೋಗದ ಈ ಸಿಗೇಮೆಳೆಗಳ ಮೂಲಕ ಒಂದು ಗುಡ್ಡದಿಂದ ಇನ್ನೊಂದು ಗುಡ್ಡಗಳಿಗೆ ಚಿರತೆಗಳು ಹಾದು ಹೋಗಲು ಉಪಯೋಗಿಸುವ ಸಾಧ್ಯತೆಗಳೂ ಇವೆ.
ಇನ್ನು ತೋಟಗಳ, ಹೊಲಗಳಲ್ಲಿರುವ ದೊಡ್ಡ ಬಾವಿಗಳು ಹತ್ತಾರು ಪ್ರಾಣಿಪಕ್ಷಿಗಳ ಜೀವಸೆಲೆ. ಬಾವಿಯಲ್ಲಿ ಬಾಗಿರುವ ಮರಗಳಿದ್ದರೆ ಅಲ್ಲಿ ಮತ್ತದೇ ಗೀಜಗಗಳ ಗೂಡು, ಬಾವಿಯ ಇಕ್ಕೆಲಗಳಲ್ಲಿ ಬೆಳೆದಿರುವ ಕುರುಚಲಿನಲ್ಲಿ ದರ್ಜಿ ಹಕ್ಕಿಗಳ ಕಲರವ, ಬಾಯಲ್ಲಿ ಹಸಿ ಹುಲ್ಲನ್ನು ಕಚ್ಚಿ, ಬ್ಯಾಲೆ ಹುಡುಗಿಯರು ರಿಬ್ಬನ್ ಹಿಡಿದು ನರ್ತಿಸುವ ಹಾಗೆ ಹಾರಿ ಬರುವ ಗುಬ್ಬಿಗಿಂತಲೂ ಚಿಕ್ಕದಿರುವ ರಾಟವಾಳ ಹಕ್ಕಿ.
ಮಳೆಗಾಲ ಪ್ರಾರಂಭವಾಗುವ ಸಮಯದಲ್ಲಿ ಹೊಲಗಳ ಬಳಿ ಹೈಸ್ಕೂಲ್ ವಯಸ್ಸಿನ ಹುಡುಗರು ಚಾವಿ ಬೆಂಕಿಪೆಟ್ಟಿಗೆಗಳಲ್ಲಿ ಹಿಡಿದಿಟ್ಟುಕೊಂಡಿರುತ್ತಿದ್ದ ಗಾಢ ಹಸಿರು ಮತ್ತು ಹಳದಿ ಬಣ್ಣದ, ಹೊಳಪು ಮೈಯ, ಸುಮಾರು ಎರಡರಿಂದ ಮೂರು ಇಂಚಿನ ದೊಡ್ಡ ಜೀರುಂಡೆಹುಳಗಳನ್ನು “ಜ್ಯೂಯಲ್ ಬೀಟಲ್’ ಎಂದು ಕರೆಯುತ್ತಾರೆಂದು ಅದನ್ನು ನೋಡಿದ ಎಷ್ಟೋ ವರ್ಷಗಳ ನಂತರ ತಿಳಿದುಕೊಂಡೆ. ಅದರ ಕಾಲಿಗೆ ಬಿಳಿದಾರ ಕಟ್ಟಿ ಅವುಗಳನ್ನು ಗಾಳಿಪಟದ ಹಾಗೆ ಹಾರಿಸಲು ಯತ್ನಿಸುತ್ತಿದ್ದ ಹುಡುಗರಿಗೆ ಪ್ರಾಣಿದಯೆಯ ಬಗ್ಗೆ ಒಂದೆರೆಡು ವಾಕ್ಯಗಳನ್ನು ಬೋಧಿಸುವುದು ಕೂಡ ಆಗುತ್ತಿತ್ತು.
ಆಗೆಲ್ಲ ಅಂತರ್ಜಾಲ, ಆ್ಯಪ್, ಗೂಗಲ್, ಅನಿಮಲ್ ಪ್ಲಾನೆಟ್ ಇಲ್ಲದಿದ್ದ ಸಮಯ. ಹೊಸಪಕ್ಷಿ, ಚಿಟ್ಟೆ, ಗಿಡಗಳ ಹೆಸರು ಕಲಿಯಲು ಬಹು ಕಷ್ಟವಾಗುತ್ತಿತ್ತು. ನಿಸರ್ಗದ ಬಗ್ಗೆ ಪುಸ್ತಕಗಳೂ ವಿರಳ. ಜೇಬಿನಲ್ಲಿರುತ್ತಿದ್ದ ಪುಟ್ಟ ಟಿಪ್ಪಣಿ ಪುಸ್ತಕದಲ್ಲಿ ಅವುಗಳ ಬಣ್ಣ, ಗಾತ್ರ, ಅಳತೆ, ಆಕಾರವನ್ನೆಲ್ಲ ಬರೆದಿಟ್ಟುಕೊಂಡು ಆನಂತರ ಪರಿಣತರನ್ನು ಕೇಳಿ ಕಲಿಯಬೇಕಾಗಿತ್ತಷ್ಟೆ. ಈಗ, ಮನೆಯಲ್ಲಿ ಹತ್ತಾರು ವರ್ಷ ಬರೆದಿಟ್ಟ ಈ ಪುಟ್ಟ ಪುಸ್ತಕಗಳ ಸಣ್ಣ ಗ್ರಂಥಾಲಯವೇ ಇದೆ. ಇವೊಂದು ಮಾಹಿತಿಯ ಖಜಾನೆಯೇ ಆಗಿವೆ. ಎÇÉೆಲ್ಲಿ ಯಾವ್ಯಾವ ಪ್ರಾಣಿಪಕ್ಷಿಗಳನ್ನು ನೋಡಿದ್ದೇವೆಂಬ ದಾಖಲೆಗಳಿವೆ. ಇವೆಲ್ಲ ಕಳೆದುಹೋದ ದಿನಗಳ ಮತ್ತು ಆಧುನಿಕವಲ್ಲದ ಪ್ರಾಕೃತಿಕ ಚರಿತ್ರಾ (ನ್ಯಾಚುರಲ್ ಹಿಸ್ಟರಿ) ಕಥನಗಳು. ಅದ್ಯಾಕೋ, ದುರ್ಬೀನಿನಲ್ಲಿ ಪ್ರಾಣಿ, ಪಕ್ಷಿ ನೋಡಿದಷ್ಟು ನೆಮ್ಮದಿ, ಸಂತೋಷ, ಆಧುನಿಕ ಕ್ಯಾಮೆರಾಗಳಲ್ಲಿ ಬಹು ಸುಂದರ ಚಿತ್ರ ತೆಗೆದರೂ ಆಗುವುದಿಲ್ಲ.
ಈಗ ಬಿಳಿ ಬಣ್ಣದ ಹೆಂಡವೂ ಇಲ್ಲ, ಹಳ್ಳಿಗಳ ಸುತ್ತಮುತ್ತ ಇರುತ್ತಿದ್ದ ಖರಾಬು ಜಮೀನೂ ಅಪರೂಪ, ಈಚಲು ಮರಗಳು ಕಾಣುವುದು ಬಹುವಿರಳ. ಇನ್ನೆಲ್ಲಿ ಗೀಜಗ ಪಕ್ಷಿಗಳ ಗೂಡುಗಳು? ಈಗ ಹಳ್ಳಿಗಳ ಕಡೆ ಚಾವಿ ಬೆಂಕಿ ಪೆಟ್ಟಿಗೆಯಲ್ಲಿ ಆ ದೊಡ್ಡ ಜೀರುಂಡೆಯನ್ನು ಹಿಡಿದಿಟ್ಟುಕೊಂಡು ಓಡಾಡುವ ಹುಡುಗರೂ ಕಡಿಮೆ. ಬಹುಶಃ ಈಗವರನ್ನು ಕಂಡರೆ ಅರಣ್ಯ ಇಲಾಖೆಯವರು ಬಂಧಿಸಿದರೂ ಆಶ್ಚರ್ಯವಿಲ್ಲ. ಏನು ಮಾಡುವುದು ಸ್ವಾಮಿ ಕಾನೂನೇ ಹಾಗೆ. ದಾಖಲೆ ತಿರುಚಿ, ಸುಳ್ಳು ಮಾಹಿತಿ ನೀಡಿ ಹತ್ತಾರು ಎಕರೆ ಕಾಡು ಕಡಿದು ಅಭಿವೃದ್ಧಿಯ ಹೆಸರಿನಲ್ಲಿ ಯೋಜನೆಗಳನ್ನು ನಿರ್ಮಿಸಿದ ಪ್ರಭಾವಿ ವ್ಯಕ್ತಿಗಳಾ ಇವರು?
ದಶಕದ ಹಿಂದೆ ಬೆಂಗಳೂರೆಂಬ ಮಹಾನಗರವನ್ನು ಸೇರಾಗಿದೆ. ಇನ್ನೆಲ್ಲಿ ಗೀಜಗದ ಗೂಡುಗಳಿರುವ ತೋಟಗಳು, ಗ¨ªೆಗಳು, ಜುಳು ಜುಳು ನೀರು ಹರಿಯುವ ಅಡಿಕೆ ತೋಟಗಳು, ಅದರಲ್ಲಿ ತಟ್ಟನೆ ಮಾಯವಾಗುವ ಏಡಿಗಳು? ಈಗನಿಸುತ್ತದೆ ಹೊಲ, ಗ¨ªೆ, ಅಡಿಕೆತೋಟ, ಸೀಗೇಮೆಳೆ, ಕುರುಚುಲು ಗುಡ್ಡಗಳೇ ನನ್ನ ಮೊದಲ ನಿಸರ್ಗಪಾಠದ ಶಾಲೆಗಳೆಂದು. ನಾವು ಉಪದೇಶ ನೀಡಲು ಹೋದ ಹಳ್ಳಿಗಳಲ್ಲಿ ಕೆಲವೊಮ್ಮೆ ಯಾಗ್ಗಮುಗ್ಗ ಬಯ್ದು ಮಾನವ-ವನ್ಯಜೀವಿ ಸಂಘರ್ಷದ ಮೊದಲ ಪಾಠಗಳನ್ನು ನಮಗೆ ಹೇಳಿಕೊಟ್ಟ ರೈತರು, ನಮಗೆ ವಿಜ್ಞಾನ ಕಲಿಸಿದ್ದಕ್ಕಿಂತ ಹೆಚ್ಚು ಪ್ರಾಪಂಚಿಕ ಜ್ಞಾನ ನೀಡಿದವರು. ಈಗ ಅದನ್ನು ಮಾನವ-ವನ್ಯಜೀವಿ ಹೊಂದಿಕೆಯೆಂಬ (ಹ್ಯೂಮನ್- ವೈಲ್ಡ್ ಲೈಫ್ ಇಂಟರಾಕ್ಷನ್) ಹೊಸ ನಮೂನೆಯ ಪದಗಳನ್ನು ವಿವಿಗಳಲ್ಲಿ ಹೇಳಿಕೊಡುತ್ತಾರೆ.
ಮಹಾನಗರಗಳಿಂದ ಬರುವ ತಜ್ಞರು ಜಗತ್ತಲ್ಲಿ ತಮಗೇ ಈ ವಿಚಾರ ಮೊದಲು ಜ್ಞಾನೋದಯವಾದ ಹಾಗೆ ಗಂಟೆಗಟ್ಟಲೆ ಭಾಷಣ ಕೊರೆಯುತ್ತಾರೆ. ವನ್ಯಜೀವಿಗಳ ಬಗ್ಗೆ ಅರಿಯಲು ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದಕ್ಕಿಂತ, ಹೊರಾಂಗಣದಲ್ಲಿ ಕಲಿಯಲು ಬಹಳಷ್ಟಿದೆ, ಅದಿಲ್ಲದೆ ಉಳಿದದ್ದು ಪುಸ್ತಕದ ಬದನೆಕಾಯಿ ಆಗಬಹುದು.
ಹಲವಾರು ಪ್ರಶ್ನೆಗಳ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿಸಿದ ಮಕ್ಕಳೇ ನಮಗೆ ಒಂದು ಮಾದರಿಯ ಗುರುಗಳು. ಇಂದು ಪ್ರಪಂಚದ ಹಲವಾರು ಮೂಲೆಗಳಲ್ಲಿರುವ ನಿಮಗೆ ನನ್ನ ವಂದನೆಗಳು. ಇವರಲ್ಲಿ ನನಗೆ ಹತ್ತಿರವಾದ ಸುಷ್ಮಾ, ಅಜಯ… ದುರಾದೃಷ್ಟವಶಾತ್ ಚಿಕ್ಕ ವಯಸ್ಸಿನಲ್ಲಿಯೇ ನಮ್ಮನ್ನಗಲಿ¨ªಾರೆ. ನೀವೆಲ್ಲಿದ್ದರೂ ನಿಮಗೆ ನನ್ನ ಧನ್ಯವಾದಗಳು.
(ಇಲ್ಲಿಗೆ “ಕಾಡಿನಲ್ಲೊಂದು ದಿನ’ ಲೇಖನಮಾಲೆ ಮುಕ್ತಾಯವಾಯಿತು)
– ಸಂಜಯ್ ಗುಬ್ಬಿ