Advertisement

ಹೀಗೊಂದು ಶುದ್ಧ ಕನ್ನಡ ಚಿತ್ರ

11:33 AM Sep 29, 2018 | |

“ಬನವಾಸಿ ದೇಶದೊಳ್‌…’ ಇದು ಕವಿ ಪಂಪನ ಮಾತು. ಆ ಪಂಪ ಕವಿಯ ಮಾತಿನ ಸ್ಫೂರ್ತಿ ಪಡೆದ ಚಿತ್ರತಂಡವೊಂದು “ಕನ್ನಡ ದೇಶದೊಳ್‌’ ಎಂಬ ಅಪ್ಪಟ ಶುದ್ಧ ಕನ್ನಡ ಚಿತ್ರವನ್ನು ಸದ್ದಿಲ್ಲದೆಯೇ ಮಾಡಿ ಮುಗಿಸಿದೆ. ಅಷ್ಟೇ ಅಲ್ಲ, ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದೆ. ಈಗಂತೂ ಕನ್ನಡದಲ್ಲಿ ಹೊಸಬರದೇ ಸುದ್ದಿ. ಅದರಲ್ಲೂ ಅಚ್ಚ ಕನ್ನಡ ಕುರಿತ ಮತ್ತು ಕನ್ನಡ ಶೀರ್ಷಿಕೆ ಇಟ್ಟುಕೊಂಡೇ ಚಿತ್ರ ಮಾಡುತ್ತಿದ್ದಾರೆ. ಆ ಸಾಲಿಗೆ “ಕನ್ನಡ ದೇಶದೊಳ್‌’ ಚಿತ್ರವೂ ಸೇರಿದೆ.

Advertisement

ಇನ್ನು, ಈ ಚಿತ್ರಕ್ಕೆ ಅಭಿರಾಮ್‌ ಕಂಠೀರವ ನಿರ್ದೇಶನ ಮಾಡಿದ್ದಾರೆ. ಸಾಯಿಪ್ರಕಾಶ್‌ ಮತ್ತು ಎಎಂಆರ್‌ ರಮೇಶ್‌ ಅವರ ಬಳಿ ಸಹಾಯಕರಾಗಿ ದುಡಿದಿದ್ದ ಅಭಿರಾಮ್‌ ಕಂಠೀರವ, ಈ ಹಿಂದೆ ಸರ್ಕಾರಿ ಶಾಲೆಗಳ ಸ್ಥಿತಿಗತಿ ಕುರಿತಂತೆ “ನೂರಾರು ಕನಸು’ ಎಂಬ ಶೀರ್ಷಿಕೆವುಳ್ಳ ಕಿರುಚಿತ್ರ ನಿರ್ದೇಶಿಸಿದ್ದರು. ಈಗ ಒಳ್ಳೆಯ ಉದ್ದೇಶ ಇಟ್ಟುಕೊಂಡು, ಕನ್ನಡ ಭಾಷೆಗೆ ಸಂಬಂಧಿಸಿದ ಕಥೆ ಬರೆದುಕೊಂಡು ಚಿತ್ರ ಮಾಡಿರುವ ನಿರ್ದೇಶಕರು ಇದಕ್ಕಾಗಿ ಸುಮಾರು ಏಳು ವರ್ಷಗಳ ಕಾಲ ಶ್ರಮಿಸಿದ್ದಾರೆ.

ಇಲ್ಲಿ ಪ್ರಾದೇಶಿಕ ಭಾಷೆಗಳಾದ ತುಳು, ಕೊಡವ, ಕೊಂಕಣಿ ಮತ್ತು ಬಂಜಾರ ಸೇರಿದಂತೆ ರಾಜ್ಯದಲ್ಲಿರುವ ಪ್ರಮುಖ ಭಾಷೆ ಇರುವುದು ವಿಶೇಷ. ಹಾಗಾಗಿ ರಾಜ್ಯದ 30 ಜಿಲ್ಲೆಗಳಲ್ಲೂ ಚಿತ್ರೀಕರಣ ಮಾಡುವ ಮೂಲಕ, ಚಿತ್ರರಂಗದ ಗಣ್ಯರಿಂದ ಮೆಚ್ಚುಗೆಯನ್ನೂ ಪಡೆದಿದೆ. ಇನ್ನು, ನವೆಂಬರ್‌ 1 ರಂದು ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ನಿರ್ದೇಶಕರದ್ದು.

“ಕನ್ನಡದಲ್ಲಿ ಕನ್ನಡಿಗನೇ ಕಂಠೀರವ’ ಎಂಬ ಅಡಿಬರಹ ಇರುವ ಈ ಚಿತ್ರಕ್ಕೆ ವೆಂಕಟೇಶ್‌, ವಿನೋದ್‌, ವಿಶ್ವನಾಥ್‌, ಪ್ರಕಾಶ್‌ ನಿರ್ಮಾಪಕರು. ಇವರೆಲ್ಲರಿಗೂ ಇದು ಮೊದಲ ಅನುಭವ.  ಚಿತ್ರದಲ್ಲಿ ಹೊಸ ಪ್ರತಿಭೆಗಳಾದ ಶರತ್‌, ಸನತ್‌, ಹರೀಶ್‌, ಶಿವು, ಟೆನ್ನಿಸ್‌ ಕೃಷ್ಣ, ಸುಚೇಂದ್ರ ಪ್ರಸಾದ್‌ ಮತ್ತು ರೇಖಾದಾಸ್‌ ನಟಿಸಿದ್ದಾರೆ. ಸೋನಲ್‌ ರಾಜ್‌ ಹಾಗೂ ಸಾತ್ವಿಕ್‌ ಸಂಗೀತ ನೀಡಿದ್ದಾರೆ. ಶರತ್‌ ಕುಮಾರ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next