ನಂಜನಗೂಡು: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಯಾವಾಗ ಬೇಕಾದರೂ ಬಿದ್ದು ಹೋಗಬಹುದು. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಹೆಣಗುತ್ತಿದ್ದರೆ, ಇತ್ತ ಕಾಂಗ್ರೆಸ್ ಸೋಲಿನ ಭಯದಿಂದ ಕಂಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಕನಸಿನ ಮಾತಾಗಿದೆ. ರಾಜ್ಯದಲ್ಲಿ ಆಡಳಿತ ರಹಿತ ಸರ್ಕಾರ ಇದೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಟೀಕಿಸಿದರು.
ನಗರದಲ್ಲಿ ಬುಧವಾರ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಮೊದಲು ದೈನಂದಿನ ಜಗಳವನ್ನು ಸರಿಪಡಿಸಿ ನಂತರ ಗ್ರಾಮ ವಾಸ್ತವ್ಯ ಹೂಡುವುದು ಸೂಕ್ತವಾಗಿದೆ. ಜೆಡಿಎಸ್‌ನ ಬಹುತೇಕ ಶಾಸಕರಿಗೆ ಇಂದಿಗೂ ಕಾಂಗ್ರೆಸ್‌ಗಿಂತ ಬಿಜೆಪಿ ಜೊತೆಗಿನ ಹೊಂದಾಣಿಯೇ ಸೂಕ್ತ ಎಂಬ ಅಭಿಪ್ರಾಯ ಹೊಂದಿದ್ದಾರೆ. ಇದು ಆ ಪಕ್ಷದ ವರಿಷ್ಠರಿಗೂ ಅರ್ಥವಾಗಬೇಕಿದೆ ಎಂದರು.
ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ 35 ಸಾವಿರ ಮತಗಳ ಅಂತರದಿಂದ ಹೀನಾಯ ಸೋಲು ಕಂಡಿದ್ದರೂ ಇನ್ನೂ ಪಾಠ ಕಲಿತಿಲ್ಲ. ರಾಜ್ಯದಲ್ಲಿ ಇದೀಗ ಅವರ ನೇತೃತ್ವದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದಂಕಿ ತಲುಪಿದೆ ಎಂದು ಹರಿಹಾಯ್ದರು.
ರಾಜ್ಯದಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆಯಾಗಿದ್ದರೂ ತಮಗೇ ಏನು ಆಗಿಲ್ಲ ಎಂಬಂತೆ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ. ಸೋಲಿನಿಂದ ಇನ್ನೂ ಪಾಠ ಕಲಿತಿಲ್ಲ. ಕುಟುಂಬ ರಾಜಕಾರಣಕ್ಕೆ ಈ ಚುನಾವಣೆ ತಕ್ಕ ಪಾಠ ಕಲಿಸಿದೆ ಎಂದು ಟೀಕಿಸಿದರು.
ಯಾವ ಸಮಯದಲ್ಲಿ ಏನೂ ಬೇಕಾದರೂ ಆಗಬಹುದು. 10-12 ಮಂದಿ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರಿಗೆ ಅವಮಾನ ಕಿರುಕುಳದ ಅಧಿಕಾರಕ್ಕಿಂತ ಸ್ವಾಭಿಮಾನವೇ ಮುಖ್ಯ ಎಂದೆನಿಸಿದಾಗ ಈ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.