ಉಡುಪಿ: ನೀಲಾವರ ಗೋಶಾಲೆಯ ವಿಸ್ತೀರ್ಣ ಸುಮಾರು 40 ಎಕ್ರೆ. ಇಲ್ಲಿ ಒಂದಿಷ್ಟು ಜಾಗದಲ್ಲಿ ಗೋಶಾಲೆಯನ್ನು ನಿರ್ಮಿಸಿದರೆ ಇನ್ನೊಂದಿಷ್ಟು ಜಾಗದಲ್ಲಿ ಸಹಜವಾಗಿದ್ದ ಕಾಡನ್ನು ಹಾಗೆಯೇ ಬೆಳೆಯಲು ಬಿಡಲಾಗಿದೆ. ಇಲ್ಲಿ ಹಗಲಿನಲ್ಲಿ ದನಕರುಗಳು ಮೇಯುತ್ತವೆ.
ಈಗ ಗೋಶಾಲೆಯ ಸ್ಥಾಪಕ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗೋಶಾಲೆಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡ ಕಾರಣ ಅವರು ಕಾಡುಗಳಲ್ಲಿ ತಿರುಗಾಡುವುದು ಇದೆ. ಮಠದ ವಿದ್ಯಾರ್ಥಿ ಗಳೊಂದಿಗೆ ಅವರು ಕಾಡಿಗೆ ತಿರುಗಾಡಲು ಹೋದಾಗ ಅವರಿಗೆ ವಿಚಿತ್ರವಾದ ಹಣ್ಣುಗಳು ಕಣ್ಣಿಗೆ ಬಿದ್ದವು. ವಿದ್ಯಾರ್ಥಿಗಳು ಚಿತ್ರಗಳನ್ನೂ ಸೆರೆ ಹಿಡಿದರು.
ಇದು ದ್ರಾಕ್ಷಿಯ ಜಾತಿಗೆ ಸೇರಿದೆ. ಇದರ ಹೆಸರು ಕಾಡು ದ್ರಾಕ್ಷಿ. ಇದನ್ನು ವನದ್ರಾಕ್ಷಿ ಎಂದೂ ಕರೆಯುತ್ತಾರೆ. ಜನಪದ ವೈದ್ಯರಿಗೆ ಈ ಹಣ್ಣುಗಳ ಜ್ಞಾನವಿದೆ. ಇದನ್ನು ತಿನ್ನಬಹುದು. ಸ್ವಲ್ಪ ಜಾಗ್ರತೆಯಲ್ಲಿ ಸ್ವಲ್ಪ ಮಾತ್ರ ತಿನ್ನಬೇಕು. ಇದು ಚರ್ಮರೋಗ, ಅರಸಿನ ಕುತ್ತ (ಜಾಂಡಿಸ್), ಹೊಟ್ಟೆಯೊಳಗಿನ ಗಾಯ ಮೊದಲಾದ ಆರೋಗ್ಯ ಸಮಸ್ಯೆಗಳ ವಾಸಿಗೆ ಪ್ರಯೋಜನಕಾರಿ. ಹಳ್ಳಿ ವೈದ್ಯರು ಇದರ ಪ್ರಯೋಜನ ಗೊತ್ತಿದ್ದರೂ ಅವರೂ ಕ್ರಮಬದ್ಧವಾಗಿ ಉಪಯೋಗಿಸುತ್ತಿಲ್ಲ ಎನ್ನು ತ್ತಾರೆ ಜನಪದ ವೈದ್ಯಕೀಯ ಪರಿಣತ ಡಾ| ಶ್ರೀಧರ ಬಾಯರಿಯವರು.
ಹಿಂದೆ ಉದ್ಯಾವರದ ಆಯುರ್ವೇದ ಕಾಲೇಜಿನ ಜನಪದ ವೈದ್ಯಕೀಯ ವಿಭಾಗದಲ್ಲಿದ್ದಾಗ ಮಂದಾರ್ತಿ ಬಳಿ ಈ ಹಣ್ಣುಗಳು ದೊರಕಿದ್ದವು. ಕಾಲೇಜಿನಲ್ಲಿ ಇದರ ಜೂಸ್ ಮಾಡಿ ಕುಡಿದಿದ್ದೆವು ಎಂಬುದನ್ನು ನೆನಪಿಸಿಕೊಳ್ಳುವ ಡಾ| ಬಾಯರಿಯವರು ಇದರ ಬಗ್ಗೆ ಸಾಕಷ್ಟು ಅಧ್ಯಯನ, ಸಂಶೋಧನೆಗಳು ನಡೆಯಲು ಅವಕಾಶಗಳಿವೆ, ಎಂದವರು ಅಭಿಪ್ರಾಯಪಡುತ್ತಾರೆ.
ಚಾತುರ್ಮಾಸ್ಯ ವ್ರತದಲ್ಲಿರುವುದ ರಿಂದ ಸ್ವಾಮೀಜಿ ಇದನ್ನು ತಿಂದಿಲ್ಲ. ಏಕೆಂದರೆ ಚಾತುರ್ಮಾಸ್ಯದ ಮೊದಲ ತಿಂಗಳಲ್ಲಿ ಇಂತಹ ಯಾವುದೇ ಹಣ್ಣುಗಳನ್ನೂ ತಿನ್ನಬಾರದೆಂಬ ಧಾರ್ಮಿಕ ಚೌಕಟ್ಟು ಇದೆ.
ಹಣ್ಣು ರುಚಿಯಾಗಿರುವುದಿಲ್ಲ
ಕಾಡುದ್ರಾಕ್ಷಿಯ ಹಣ್ಣು ರುಚಿಯಾಗಿರುವುದಿಲ್ಲ. ಆದರೆ ತಿನ್ನಲು ಆಗುತ್ತದೆ. ಕಾಯಿಯಾಗಿದ್ದರೆ ಉಪ್ಪಿನಕಾಯಿ ಮಾಡಲು ಬಳಸುತ್ತಾರೆ. ಇದರ ಸಸ್ಯಶಾಸ್ತ್ರೀಯ ಹೆಸರು ಅಂಪೆಲೊಚಿಸಸ್ ಲ್ಯಾಟಿಫೋಲಿಯ.
-ಡಾ| ಗೋಪಾಲಕೃಷ್ಣ ಭಟ್, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ