Advertisement

ದೇಶವನ್ನು  ಮತ್ತಷ್ಟು ಪ್ರೀತಿಸುವಂತೆ ಮಾಡಿತು ಈ ಕಾಯಕ

01:00 AM Feb 06, 2019 | Harsha Rao |

ಕಟಪಾಡಿ: ಉದ್ಯಾವರ ಪಿತ್ರೋಡಿಯ ಬಾಲಚಂದ್ರ ಪ್ರೌಢ ಶಾಲೆಯ ಮೆಟ್ಟಿಲೇರಿದಾಗಲೇ ಎನ್‌ಸಿಸಿಗೂ ಸೇರಿಕೊಂಡಿದ್ದರು. ಅಲ್ಲಿ ಪಡೆದ ತರಬೇತಿ, ಗಳಿಸಿದ ಶಿಸ್ತು, ಸೈನಿಕ ಜೀವನದ ಮಾಹಿತಿಗಳು ಅವರಲ್ಲಿ ಯೋಧನಾಗುವ ಕನಸನ್ನು ಮೊಳೆಯಿಸಿದವು.

Advertisement

ಆ ಕನಸು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆಯುವ ತನಕ ಅವಕಾಶಕ್ಕಾಗಿ ಕಾಯುತ್ತಲೇ ಇತ್ತು. 2002ರ ಒಂದು ದಿನ ಮಾಧ್ಯಮಗಳಲ್ಲಿ ಸೇನಾ ನೇಮಕಾತಿ ರ್ಯಾಲಿಯ ಪ್ರಕಟನೆ ಬಂದಾಗ ಗರಿ ಬಿಚ್ಚಿತು. ಕಾರವಾರದಲ್ಲಿ ನಡೆದ ರ್ಯಾಲಿಯಲ್ಲಿ ಪಾಲ್ಗೊಂಡು ಸೇನೆಗೆ ಆಯ್ಕೆಯಾದರು. 

ಮೀನುಗಾರಿಕೆ ವೃತ್ತಿಯವರಾದ ಉದ್ಯಾವರ ಪಿತ್ರೋಡಿಯ ದಿ| ಧನಂಜಯ ಎಂ. ಪುತ್ರನ್‌ – ಸಿಂಧು ಮೈಂದನ್‌ ದಂಪತಿಯ ಮೂವರು ಮಕ್ಕಳಲ್ಲೊಬ್ಬರು ಬಾಲಚಂದ್ರ. ಮನೆಗೆ ಒಬ್ಬನೇ ಮಗ, ಉಳಿದಿಬ್ಬರು ಪುತ್ರಿ ಯರು. ಏಕೈಕ ಪುತ್ರನನ್ನು ದೇಶಸೇವೆಗೆ ಕಳುಹಿಸಿಕೊಟ್ಟ ಹಿರಿಮೆ ಹೆತ್ತವರದು.

ಆಟವಾಡಿ ದೇಹದಾಡ್ಯì
ಬಾಲಚಂದ್ರ ಅವರು ಪ್ರಾಥಮಿಕ ಶಿಕ್ಷಣವನ್ನು ಸದಿಯ ಸೌಕಾರ ಪ್ರಾಥ ಮಿಕ ಶಾಲೆಯಲ್ಲಿ ಹಾಗೂ ಹೈಸ್ಕೂಲ್‌ ಶಿಕ್ಷಣವನ್ನು ಪಿತ್ರೋಡಿಯ ಸರಕಾರಿ ಮೀನುಗಾರಿಕಾ ಶಾಲೆಯಲ್ಲಿ ಪೂರೈಸಿ ದ್ದರು. ಶಾಲಾ ದಿನಗಳಲ್ಲಿ ಆಟೋಟ
ಗಳಲ್ಲಿ ಸಕ್ರಿಯರಾಗಿದ್ದ ಅವರ ದೇಹ ದಾಡ್ಯì ಚೆನ್ನಾಗಿತ್ತು. ಬಿಕಾಂ ಪದವಿ ಮುಗಿಸಿ ಇನ್ನೇನು ನೌಕರಿ ಗಿಟ್ಟಿಸಿಕೊಳ್ಳುವ ತವಕದಲ್ಲಿದ್ದಾಗ ಪತ್ರಿಕೆಯಲ್ಲಿ ಕಾಣಿಸಿದ ಸೇನಾ ನೇಮಕಾತಿ ರ್ಯಾಲಿ ಪ್ರಕಟನೆ ಸೆಳೆಯಿತು.

Advertisement

ಆಗ ಅವರಿಗೆ ಕೇವಲ ಇಪ್ಪತ್ತೆರಡೂವರೆ ವರ್ಷ ವಯಸ್ಸು. ಇನ್ನು ಯೋಚಿಸಿ ಕುಳಿತರೆ ವಯಸ್ಸು ಮೀರುವುದು, ಸೇನೆ ಸೇರುವ ಅವಕಾಶ ಕೈತಪ್ಪುವುದು ಎಂದು ಅರಿತು ಸೇನಾ ರ್ಯಾಲಿಯಲ್ಲಿ ಭಾಗವಹಿಸಿದರು. ದೈಹಿಕ ಕ್ಷಮತೆ ಅವರಿಗೆ ವರವಾಯಿತು. 

ನೇರವಾಗಿ ಆಯ್ಕೆಯಾದ ಬಾಲಚಂದ್ರ ಅವರ ವಿದ್ಯಾರ್ಹತೆಯೂ ಪರಿಗಣನೆಯಾಗಿ ಸೇನೆಯ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿಭಾಯಿಸಲು ಅವಕಾಶ ಲಭಿಸಿತು.

ದೇಶಭಕ್ತಿಯ ಸುಲಭ ಕಾಯಕ
ಪ್ರತಿಕೂಲ ಹವಾಮಾನ, ಪ್ರಕೃತಿ ವಿಕೋಪಗಳ ನಡುವೆಯೂ ದೇಶಕ್ಕಾಗಿ ಕರ್ತವ್ಯ ನಿಭಾಯಿಸುವುದು ಬಹಳಷ್ಟು ಖುಷಿ ಕೊಡುತ್ತದೆ. ದೇಶದ ಮೇಲಿನ ಪ್ರೀತಿ, ಮಮತೆಗಳಿಂದ ಮಾತ್ರ ಸೇನಾ ಕಾಯಕ ಸುಲಭವಾಗುತ್ತದೆ.
-ಬಾಲಚಂದ್ರ

ಸಂವಹನ ಪರಿಣತ
ಗೋವಾದ ಮಡ್‌ಗಾಂವ್‌ನಲ್ಲಿ  ಒಂದೂವರೆ ವರ್ಷ ತರಬೇತಿ ಪಡೆದರು.  ಈಗ ಸೇನೆಯ ಕಮ್ಯೂನಿಕೇಶನ್‌ ಗ್ರೂಪ್‌ನಲ್ಲಿ ತಾಂತ್ರಿಕ ತಜ್ಞನಾಗಿ 17 ವರ್ಷಗಳ ಸೇವೆಯನ್ನು ಪೂರೈಸಿದ್ದಾರೆ. ಪ.ಬಂಗಾಲ, ಜಮ್ಮು ಕಾಶ್ಮೀರ, ಪಂಜಾಬ್‌, ಮಧ್ಯಪ್ರದೇಶ ಮೊದಲಾದೆಡೆ ಸೇವೆಯನ್ನು ಸಲ್ಲಿಸಿದ್ದಾರೆ. ಪ್ರಸ್ತುತ ಅಸ್ಸಾಂನಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಹವಾಲ್ದಾರ್‌ ಆಗಿರುವ ಬಾಲಚಂದ್ರ ಸೇನೆಯ ಕಮ್ಯುನಿಕೇಶನ್‌ ಕೋಡಿಂಗ್‌- ಡಿಕೋಡಿಂಗ್‌, ಟ್ರಾನ್ಸ್‌ಫರಿಂಗ್‌, ಸಿಗ್ನಲ್‌ ಕೆಲಸಗಳಲ್ಲಿ ಪರಿಣಿತರು.  ಬಾಲಚಂದ್ರ ಅವರ ಪತ್ನಿ ಆಶಾಲತಾ ಹೆಬ್ರಿಯ ಎಸ್‌ಆರ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ಅಧ್ಯಾಪಕಿ. 2012ರಲ್ಲಿ ಅವರ ಮದುವೆಯಾಯಿತು. ಪುತ್ರ ಪುಟಾಣಿ ಅನುÏ. ಮಗನ ಏಳ್ಗೆ, ದೇಶಸೇವೆಯನ್ನು ಕಣ್ಣಾರೆ ಕಾಣುವ ಭಾಗ್ಯ ತಾಯಿ ಸಿಂಧು ಅವರದು. 

ಇಂಥ ಪತಿ ನನ್ನ ಸೌಭಾಗ್ಯ
ತುಂಬಾ ಶಿಸ್ತುಬದ್ಧ ಸರಳ ಜೀವನ ಅವರದು. ಸದಾ ದೇಶದ ಬಗ್ಗೆ ಚಿಂತಿಸುತ್ತಾರೆ, ಮಿತಭಾಷಿ. ಇಂಥ ಪತಿಯನ್ನು ಪಡೆದಿರುವುದು ನನ್ನ ಭಾಗ್ಯ. 
-ಆಶಾಲತಾ, ಬಾಲಚಂದ್ರ ಅವರ ಪತ್ನಿ

ಮಗ ಸೇನೆ ಸೇರಿದ್ದು ಹೆಮ್ಮೆ
ಒಬ್ಬನೇ ಪುತ್ರನನ್ನು ಸೇನೆಗೆ ಕಳುಹಿಸುವ ಸಂದರ್ಭ ಸ್ವಲ್ಪ ಹಿಂಜರಿಕೆಯಿತ್ತು. ಆದರೆ ಅವನು ದೇಶ ಸೇವೆಯ ಕಿಚ್ಚು ಹೊಂದಿದ್ದ. ಬಹಳಷ್ಟು ಕ್ರಿಯಾಶೀಲನಾಗಿದ್ದು ಈಗ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವುದು ಬಹಳಷ್ಟು ಹೆಮ್ಮೆಯ ವಿಚಾರ.
– ಸಿಂಧು ಮೈಂದನ್‌,  ಬಾಲಚಂದ್ರ ಅವರ ತಾಯಿ

–  ವಿಜಯ ಆಚಾರ್ಯ, ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next