Advertisement
ಉದ್ಘಾಟನಾ ಕಾರ್ಯಕ್ರಮದ ನಂತರ ಬೃಹತ್ ವೇದಿಕೆಯಲ್ಲಿ ಸ್ಥಳೀಯ ಆದಿವಾಸಿ ಹಾಡಿಯ ಮಕ್ಕಳು, ಟಿಬೆಟ್ ಮಕ್ಕಳು ಹಾಗೂ ಹುಣಸೂರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಲವಾರು ರಂಗು ರಂಗಿನ ನೃತ್ಯ ಪ್ರದರ್ಶನಗಳ ಮೂಲಕ ನೆರೆದಿದ್ದ ಜನರನ್ನು ಸಾಂಸ್ಕೃತಿಕ ಲೋಕಕ್ಕೆ ಕರೆದೊಯ್ದರು.
Related Articles
Advertisement
ಹುಣಸೂರಿನ ಸಂತಜೋಸಫರ ಪಿ.ಯು.ಕಾಲೇಜಿನ ಎಕೋ ಕ್ಲಬ್‌ನ ವಿದ್ಯಾರ್ಥಿಗಳು ಅಡವಿದೇವಿಯ ಹಾಡಿಗೆ ಗಿರಿಜನರ ವೇಷ ಧರಿಸಿ ಪ್ರಸ್ತುತ ಪಡಿಸಿದ ನತ್ಯ, ಅದುಲಾಂ ಶಾಲೆಯ ವಿದ್ಯಾರ್ಥಿಗಳು ಹಿಂದಿ ಹಾಡಿಗೆ ಹೆಜ್ಜೆ ಹಾಕಿ ನೆರೆದಿದ್ದವರ ಮನಸ್ಸನ್ನು ಮುದಗೊಳಿಸಿದರು. ಗುರುಪುರ ಟಿಬೇಟಿಯನ್ ಕೇಂದ್ರೀಯ ಶಾಲೆ ವಿದ್ಯಾರ್ಥಿಗಳು ತಮ್ಮದೇ ಭಾಷೆ-ಸಂಸ್ಕೃತಿಗೆ ಪೂರಕವಾದ ಹಾಡಿನೊಂದಿಗೆ ನೃತ್ಯ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿದರು.
ಸಾಂಸ್ಕೃತಿಕ ಸ್ವಾಗತ: ಗಜಪಯಣಕ್ಕೆ ಬೆಳಗಿನಿಂದಲೇ ಆಗಮಿಸಿದ ಸುತ್ತಮುತ್ತಲ ಹಳ್ಳಿಯವರು ಹಾಗೂ ಅನತಿ ದೂರದಿಂದ ಬಂದ ಪ್ರವಾಸಿಗರು, ವಿದೇಶಿಯರಿಗೆ ನಾಗರಹೊಳೆ ಮುಖ್ಯರಸ್ತೆಯಲ್ಲಿ ಭವ್ಯವಾಗಿ ನಿರ್ಮಿಸಿದ್ದ ಗಜಪಯಣಕ್ಕೆ ಚಾಲನೆ ನೀಡುವ ಸ್ವಾಗತ ಕಮಾನಿನ ಬಳಿ ಡೊಳ್ಳುಕುಣಿತ, ವೀರಗಾಸೆ ಕುಣಿತ, ಬೊಂಬೆ ಕುಣಿತದ ಮೂಲಕ ಸಾಂಸ್ಕೃತಿಕ ರಂಗು ಮೆರೆದರು.
ಆನಂತರ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಶಾಸಕ ಎಚ್.ಪಿ.ಮಂಜುನಾಥ್, ಮೇಯರ್ ರವಿಕುಮಾರ್, ಜಿಪಂ ಅಧ್ಯಕ್ಷೆ ನಯಿಮಾಸುಲ್ತಾನಾ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವೃದದವರನ್ನು ಪೂರ್ಣಕುಂಭ ಹಾಗೂ ಸಾಂಸ್ಕೃತಿಕ ವೈಭವದಿಂದ ಬರಮಾಡಿಕೊಳ್ಳಲಾಯಿತು.
ಬಾರದ ಭೀಮ: ಇದೇ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಮತ್ತಿಗೋಡು ಆನೆ ಶಿಬಿರದ 17 ವರ್ಷದ ಬಲಭೀಮನ ನಿರೀಕ್ಷೆಯಲ್ಲಿದ್ದ ಜನರಿಗೆ ಗಜಪಯಣಕ್ಕಾಗಮಿಸದೆ ನಿರಾಸೆ ಕಾದಿತ್ತು. ಈ ಹಿಂದೆ ಮೊದಲ ಹಂತದಲ್ಲೇ ಹೊರಡುತ್ತಾನೆಂಬ ಮಾಹಿತಿ ನೀಡಿದ್ದ ಅರಣ್ಯಾಧಿಕಾರಿಗಳು ಇಲ್ಲಿಗೆ ಕರೆತರದೆ ನೇರವಾಗಿ ಲಾರಿ ಮೂಲಕ ಮೈಸೂರಿಗೆ ಕರೆದೊಯ್ಯಲಾಗುವುದೆಂದು ತಿಳಿಸಿದರು.
ಸಂಭ್ರಮಿಸಿದ ವಿದೇಶಿಗರು: ಗಜಪಯಣವನ್ನು ವೀಕ್ಷಿಸಲು ಆಗಮಿಸಿದ್ದ ಕೀನ್ಯಾ ದೇಶದ ವಿದ್ಯಾರ್ಥಿಗಳು ಇದೊಂದು ಸಾಂಸ್ಕೃತಿಕ ವೈಭವವೆಂದು ಹೇಳಿ ಸಂತಸ ವ್ಯಕ್ತಪಡಿಸಿದರು.
ಗಜಯಾನದ ಹೈಲೆಟ್ಸ್: ಗಜಪಯಣಕ್ಕೆ ಚಾಲನೆ ನೀಡಲು ಆಗಮಿಸುವ ಗಣ್ಯರನ್ನು ಸ್ವಾಗತಿಸಲು ಒಂದನೇ ಪಕ್ಷಿರಾಜಪುರದ ಹಕ್ಕಿಪಿಕ್ಕಿ ಜನಾಂಗದ ಕಾವೇರಿ ಸ್ವ ಸಹಾಯ ಸಂಘದ ಹಾಗೂ ಅಂಬೇಡ್ಕರ್ ನಗರದ ಕಾಳಿಕಾಂಬ ಸ್ತ್ರೀ ಶಕ್ತಿ ಸಂಘದ ನೂರಕ್ಕೂ ಹೆಚ್ಚು ಮಹಿಳೆಯರು ಸಮವಸ್ತ್ರ ಧರಿಸಿ ಪೂರ್ಣಕುಂಭ ಸ್ವಾಗತ ನೀಡಿದ್ದು ಗಜಪಯಣಕ್ಕೆ ಕಳಶವಿದ್ದಂತಿತ್ತು.
ವಿಶ್ವ ಆನೆ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ ಗಜ ಎಂಬ 6 ನಿಮಿಷಗಳ ಸಾûಾÂಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಗಜಪಯಣಕ್ಕೆ ಚಾಲನೆ ನೀಡಿದ ನಂತರ ಲಾರಿಗೆ ಆನೆಗಳನ್ನು ಹತ್ತಿಸುವ ವೇಳೆ ನೆರೆದಿದ್ದ ನೂರಾರು ಮಂದಿ ಆನೆಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
* ಸಂಪತ್‌ಕುಮಾರ್