Advertisement

ಹೀಗೊಂದು 3ಡಿ ಗೀತೆ

06:00 AM Sep 28, 2018 | Team Udayavani |

ಸಿನಿಮಾ ಅಂದರೆ ಕೇವಲ ಮನರಂಜನೆ ಮಾತ್ರವಲ್ಲ. ಅಲ್ಲೊಂದಷ್ಟು ಹೊಸ ಪ್ರಯೋಗಗಳೂ ಆಗಾಗ ನಡೆಯುತ್ತಿವೆ. 3ಡಿ ಸಿನಿಮಾಗಳು ಬಂದಿರುವುದು ಗೊತ್ತು. ಆದರೆ, 3ಡಿ ಹಾಡು ಬಂದಿರೋದು ಗೊತ್ತಾ? ಅದಕ್ಕೆ ಉತ್ತರ “ಭೂತಃಕಾಲ’ ಚಿತ್ರ. ಹೌದು, ಬಹುತೇಕ ಹೊಸಬರೇ ಸೇರಿ ಮಾಡಿರುವ ಈ ಚಿತ್ರದಲ್ಲಿ ಮೊದಲ ಸಲ 3ಡಿ ಹಾರರ್‌ ಹಾಡೊಂದು ಮೂಡಿಬಂದಿದೆ. ವಿಜಯಪ್ರಕಾಶ್‌ ಹಾಡಿರುವ ಹಾಡನ್ನು 3ಡಿ ಸ್ಪರ್ಶದೊಂದಿಗೆ ಈಗಾಗಲೇ ಯುಟ್ಯೂಬ್‌ನಲ್ಲಿ ಬಿಡಲಾಗಿದೆ. ಇತ್ತೀಚೆಗೆ ಚಿತ್ರದ ಆಡಿಯೋ ಸಿಡಿ ಬಿಡುಗಡೆ ನಡೆಯಿತು. ಗೀತ ಸಾಹಿತಿ ಕೆ.ಕಲ್ಯಾಣ್‌ ಅವರು ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.

Advertisement

ಸಚಿನ್‌ ಬಾಡ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ ಜವಾಬ್ದಾರಿ ಹೊತ್ತಿರುವ ಇವರಿಗಿದು ಮೊದಲ ಚಿತ್ರ. ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡ ಸಚಿನ್‌ ಬಾಡ, “ಚಿತ್ರದಲ್ಲಿ ಹಲವು ಸಂದೇಶಗಳಿವೆ ಆಸ್ಪತ್ರೆಯಲ್ಲಿ ನಡೆಯುವ ಔಷಧಿ ದಂಧೆ, ಅನಾಥ ಮಕ್ಕಳ ದುರುಪಯೋಗ, ಮಕ್ಕಳನ್ನು ಸ್ವತಂತ್ರವಾಗಿ ಹೊರಗೆ ಹೋಗಲು ಬಿಡದ ಪೋಷಕರ ವರ್ತನೆಯಿಂದ ಏನೆಲ್ಲಾ ಘಟನೆಗಳು ನಡೆಯುತ್ತವೆ ಎಂಬ ಇತ್ಯಾದಿ ವಿಷಯಗಳು ಚಿತ್ರದಲ್ಲಿವೆ. ಮುಖ್ಯವಾಗಿ ಭೂತಃಕಾಲದಲ್ಲಿ ನಡೆದ ಘಟನೆಯನ್ನು ಯುವ ತಂಡವೊಂದು ತನಿಖೆಗೆ ಹೊರಟಾಗ ವರ್ತಮಾನದಲ್ಲಿ ಏನೆಲ್ಲಾ ಆಗಿಹೋಗುತ್ತೆ ಎಂಬುದು ಚಿತ್ರದ ಹೈಲೆಟ್‌’ ಎಂದು ವಿವರ ಕೊಟ್ಟರು ನಿರ್ದೇಶಕರು.

ಕೆ.ಕಲ್ಯಾಣ್‌ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಿ, “ಹೊಸಬರು ಈಗ ಹೊಸ ಪ್ರಯೋಗದತ್ತ ಮುಖ ಮಾಡಿದ್ದಾರೆ. ಪ್ರತಿಯೊಬ್ಬರೂ ಹೊಸಬರನ್ನು ಪ್ರೋತ್ಸಾಹಿಸಬೇಕು. ಈ ಚಿತ್ರಕ್ಕೆ ಗೆಲುವು ಸಿಗಲಿ’ ಎಂಬುದು ಕಲ್ಯಾಣ್‌ ಮಾತು.

ಟೆನ್ನಿಸ್‌ ಕೃಷ್ಣ ಅವರು ಹೊಸಬರ ಜೊತೆ ಕೆಲಸ ಮಾಡಿದ ಬಗ್ಗೆ ಹೇಳಿಕೊಂಡರು. ಸ್ಮಶಾನದಲ್ಲಿ ನಡೆದ ಚಿತ್ರೀಕರಣದ ಅನುಭವ ವಿವರಿಸಿದರು. ಆನಂದ್‌ ಗಣೇಶ್‌ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಅವರಿಗೆ ಇದು ಮೂರನೇ ಸಿನಿಮಾ. ಇನ್ನು, ರಕ್ಷಿತಾ ಬಂಗೇರ ನಾಯಕಿಯಾಗಿ ನಟಿಸಿದ್ದಾರೆ. ಅವರಿಗೆ ಇದು ಮೊದಲ ಚಿತ್ರ. ಚಿತ್ರದಲ್ಲಿ ಅನನ್ಯಾ ಭಟ್‌, ಶ್ರೀನಿವಾಸ ಪ್ರಭು, ತರಂಗ ವಿಶ್ವ, ಹರೀಶ್‌ರಾವ್‌, ರಮೇಶ್‌ ನಾಯಕ್‌ ಇತರರು ನಟಿಸಿದ್ದಾರೆ. ಪ್ರಮೋದ್‌ ಸೂರ್ಯ ಅವರು ಆರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಹಂಸ ಶ್ರೀಕಾಂತ್‌ರಾವ್‌ ನಿರ್ಮಾಪಕರು. ಚಿತ್ರದ ಹಾಡುಗಳನ್ನು ಪಿಆರ್‌ಕೆ ಆಡಿಯೋ ಸಂಸ್ಥೆ ಹೊರತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next