Advertisement

ಈ ಆಸ್ಪತ್ರೆಗೆ ಬಂದ್ರೆ ಬರುತ್ತೆ ಮತ್ತಷ್ಟು ರೋಗ!

03:24 PM Jul 08, 2017 | |

ಅಫಜಲಪುರ: ರೋಗ ವಾಸಿಯಾಗುತ್ತದೆ ಎಂದು ಸರ್ಕಾರಿ ಆಸ್ಪತ್ರೆಗೆ ಹಳ್ಳಿಗಾಡಿನ ಬಡ ಜನರು ಹಾತೊರೆದು ಬರುತ್ತಾರೆ. ಆದರೆ ಆಸ್ಪತ್ರೆಗೆ ಬಂದರೆ ಇಲ್ಲಿನ ಅವ್ಯವಸ್ಥೆ ಮತ್ತು ಕಲುಷಿತ ವಾತಾವರಣ ಕಂಡು ಹೌಹಾರಿ ಮತ್ತಷ್ಟು ರೋಗಗಳನ್ನು
ಅಂಟಿಸಿಕೊಳ್ಳುವಂತಾಗಿದೆ. ಗಬ್ಬೆದ್ದು ನಾರುವ ತಾಲೂಕು ಸರ್ಕಾರಿ ಆಸ್ಪತ್ರೆ, ಎಲ್ಲಿ ನೋಡಿದರಲ್ಲಿ ಕಸದ ರಾಶಿ, ಚರಂಡಿ ನೀರಿನಿಂದ
ಆವರಿಸಿಕೊಂಡಿದೆ.

Advertisement

ಇದು ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ತಾಪಂ, ಪುರಸಭೆ ಕಚೇರಿ ಮುಂಭಾಗದಲ್ಲಿರುವ ನೂರು ಹಾಸಿಗೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವಾಸ್ತವ. ಇಲ್ಲಿಗೆ ದಿನಾಲು ಹಲವಾರು ಹಳ್ಳಿಗಳಿಂದ ನೂರಾರು ಜನ ರೋಗಿಗಳು ಬರುತ್ತಾರೆ. ಬರುವ ರೋಗಿಗಳಿಗೆ ಮೊದಲನೇಯದಾಗಿ ವೈದ್ಯರು ಇಲ್ಲದಿರುವ ಸಮಸ್ಯೆ ಎದುರಾಗುತ್ತದೆ. ನಂತರ ಸ್ವತ್ಛವಿಲ್ಲದ ಕೋಣೆಗಳು,
ಸ್ವತ್ಛವಿಲ್ಲದ ಶೌಚಾಲಯ, ಆಸ್ಪತ್ರೆ ಆವರಣ, ಪರಿಸರ ಹೀಗೆ ಎಲ್ಲವೂ ಗಲೀಜುಮಯ. ಹೀಗಾಗಿ ಇಲ್ಲಿ ರೋಗ ವಾಸಿಯಾಗುವ ಬದಲಿಗೆ ಹೆಚ್ಚಾಗುತ್ತಿದೆ.

ಆಸ್ಪತ್ರೆಯ ಡ್ರೆ„ನೇಜ್‌ ಒಡೆದು ಗಬ್ಬು ನಾತ: ನೂರು ಹಾಸಿಗೆಯ ಜರ್ಮನ್‌ ತಂತ್ರಜ್ಞಾನದ ಈ  ಆಸ್ಪತ್ರೆಯಲ್ಲಿನ ಡ್ರೈನೇಜ್‌ ವ್ಯವಸ್ಥೆ ಸಂಪೂರ್ಣ ಒಡೆದು ಎಲ್ಲೆಂದರಲ್ಲಿ ನೀರು ನಿಂತು ಗಬ್ಬು ನಾತ ಬೀರುತ್ತಿದೆ. ಸ್ನಾನದ ಕೋಣೆಗಳು ಮತ್ತು ಶೌಚಕ್ಕೆ ಬಳಸಿದ ನೀರು
ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲ. ಹೀಗಾಗಿ ಎಲ್ಲೆಂದರಲ್ಲಿ ನೀರಿನ ಪೈಪ್‌ಗ್ಳು ಒಡೆದು ಗಲೀಜು ನಿರ್ಮಾಣವಾಗಿದೆ. ಇದನ್ನು ನೋಡಿಕೊಳ್ಳಬೇಕಾಗಿರುವ ಡಿ ಗ್ರೂಪ್‌ ನೌಕರರು ಕಾಲಹರಣ ಮಾಡುತ್ತಿದ್ದಾರೆ. ಎಲ್ಲಿ ನೋಡಿದರೂ ಜಾಲಿ ಮುಳ್ಳು, ಕಸದ
ರಾಶಿ: ಆಸ್ಪತ್ರೆ ಆವರಣ ಸ್ವತ್ಛವಾಗಿದ್ದರೆ ಬರುವ ರೋಗಿಗಳ ರೋಗ ಮಾತ್ರೆ ಕೊಡುವ ಮೊದಲೇ ಅರ್ಧ ವಾಸಿಯಾಗಬೇಕು. ಆದರೆ ಇಲ್ಲಿಗೆ ಬರುವ ರೋಗಿಗಳಿಗೆ ಆಸ್ಪತ್ರೆಯ ಆವರಣ ನೋಡಿ ರೋಗ ಇನ್ನಷ್ಟು ಹೆಚ್ಚಾಗುತ್ತದೆ. ಆಸ್ಪತ್ರೆಯ ಆವರಣದಲ್ಲಿ ಎಲ್ಲಿ ನೋಡಿದರೂ ಬಳ್ಳಾರಿ ಜಾಲಿ ಬೆಳೆದಿದೆ. ಅಲ್ಲದೆ ಕಸದ ರಾಶಿ ಕಾಣುತ್ತದೆ. ಆಸ್ಪತ್ರೆಯ ಆವರಣ ಮತ್ತು ಒಳಾಂಗಣ ಸ್ವತ್ಛಗೊಳಿಸುವ ಗೋಜಿಗೆ ಸಂಬಂಧ ಪಟ್ಟವರು ಹೋಗಿಲ್ಲ.

ಮುರಿದ ವಿದ್ಯುತ್‌ ಕಂಬ: ಆಸ್ಪತ್ರೆಯ ಆವರಣದಲ್ಲಿ ರಾತ್ರಿ ವೇಳೆ ಬೆಳಕು ಕಾಣುವ ದೃಷ್ಟಿಯಿಂದ ವಿದ್ಯುತ್‌ ಕಂಬಗಳು ಮತ್ತು ಮಕೂರಿ ಬಲ್ಬ್ಗಳನ್ನು ಅಳವಡಿಸಲಾಗಿದೆ. ಅವು ಮುರಿದು ಬಿದ್ದಿವೆ. ರಾತ್ರಿ ವೇಳೆ ಆಸ್ಪತ್ರೆಯ ಹಿಂಭಾಗದಲ್ಲಂತೂ ಭಯಾನಕವಾಗಿ ಕಾಣುತ್ತದೆ. ಕತ್ತಲೆ ಆವರಿಸಿ ಜನ ಓಡಾಡದಂತಾಗುತ್ತಿದೆ. ಒಟ್ಟಿನಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳು ಕಾಗದಲ್ಲಿವೆ. ಆದರೆ ವಾಸ್ತವದಲ್ಲಿ ಇಲ್ಲದಂತಾಗಿದೆ. ಇದರಿಂದ ಬರುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಸಂಬಂಧ ಪಟ್ಟವರು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇಲ್ಲಿನ ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ. ಹಂದಿಗಳ ವಾಸಸ್ಥಾನ; ಮಳೆ ಬಂದರೆ ಸಾಕು ಆಸ್ಪತ್ರೆ ಆವರಣದಲ್ಲಿ ಮಳೆ ನೀರು ಚರಂಡಿ ನೀರಿನೊಂದಿಗೆ ಸೇರಿ ನಿಲ್ಲುತ್ತದೆ. ಇದರಲ್ಲಿ ಹಂದಿಗಳು ಒದ್ದಾಡಿ ಮತ್ತಷ್ಟು ವಾತಾವರಣ ಕಲುಷಿತಗೊಳಿಸುತ್ತವೆ. ಹಂದಿಗಳನ್ನು ಹೊರ ಹಾಕಿ ಮಳೆ ಮತ್ತು ಚರಂಡಿ ನೀರು ನಿಲ್ಲದಂತೆ ಮಾಡಲು ಯಾರೂ ಯತ್ನಿಸಿಲ್ಲ.

ಸಮಸ್ಯೆಗೆ ಪುರಸಭೆ ಸ್ಪಂದಿಸಿಲ್ಲ
ತುರ್ತಾಗಿ ಡಿ ಗ್ರೂಪ್‌ ನೌಕರರ ಸಭೆ ಕರೆದು ಮೇಲಾಧಿಕಾರಿಗೆ ಮಾಹಿತಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುತ್ತದೆ.
ಆಸ್ಪತ್ರೆಯ ಮುಂಭಾಗದ ಚರಂಡಿ ಸ್ವತ್ಛ ಮಾಡುವಂತೆ ಪುರಸಭೆಗೆ ಎರಡು ಬಾರಿ ಮನವಿ ಮಾಡಲಾಗಿದೆ ಅವರು ಸ್ಪಂದಿಸಿಲ್ಲ.
ಮಹಾಂತಪ್ಪ ಹಾಳಮಳ್ಳಿ, ಪ್ರಭಾರಿ ಆಡಳಿತ ವೈದ್ಯಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next