ಇರದುದರೆಡೆಗೆ ತುಡಿಯುವುದು ಜೀವನ. ಅರ್ಥವಾಗಲಿಲ್ಲವಾ? ಯಾವುದು ನಮಗೆ ಸಿಗುವುದಿಲ್ಲವೋ ಅದೇ ನಮ್ಮ ಕಣ್ಣಿಗೆ, ಹೃದಯಕ್ಕೆ ತುಂಬಾ ಇಷ್ಟವಾಗಿಬಿಡುತ್ತದಂತೆ.
ನಿನ್ನ ಹಾಗೆ…
ನೀನು ನನಗೆ ಸಿಗುವುದು ತುಂಬಾ ಕಷ್ಟ ಅಂತ ತಿಳಿದಿದ್ದರೂ ಈ ಹುಚ್ಚು ಹೃದಯ ನಿನ್ನನ್ನೇ ಬಯಸುತಿದೆ. ನಿನ್ನ ನೋಡಬೇಕೆಂದು ಚಂಡಿ ಹಿಡಿಯುತ್ತಿದೆ. ಪ್ರೀತಿಗೆ ಯಾವುದೇ ಜಾತಿ,ಧರ್ಮ ಇಲ್ಲ. ಪ್ರೀತಿಯೇ ಒಂದು ಪ್ರತ್ಯೇಕ ಜಾತಿ ಅಂತಾರೆ. ಹಾಗಾಗಿ, ಎರಡು ಹೃದಯಗಳ ಸಂಗಮವೇ ಪ್ರೀತಿ ಅಂತ ನಂಬಿದವಳು ನಾನು. ಆದರೆ ನಮ್ಮಿಬ್ಬರ ಪ್ರೀತಿಗೆ ಜಾತಿಯ ಬೇಲಿಕಟ್ಟಿ ಒಂದಾಗಲು ಈ ಸಮಾಜ ಬಿಡುವುದಿಲ್ಲ ಕಣೋ.
ಏನೇ ಹೇಳು, ಈ ಕಣ್ಣುಗಳಿಗೆ ನಿನ್ನ ಬಿಟ್ಟರೆ ಬೇರೆ ಯಾರೂ ಕಾಣಿಸುತ್ತಿಲ್ಲ. ಕಿವಿಗಳಿಗೆ ನಿನ್ನ ಧ್ವನಿ ಬಿಟ್ಟರೆ ಬೇರೆ ಯಾರ ಧ್ವನಿಯೂ ಕೇಳಿಸುತ್ತಿಲ್ಲ. ಈ ಹೃದಯ ಪ್ರತಿ ದಿನ, ಪ್ರತಿ ಕ್ಷಣ ನಿನ್ನ ಹೆಸರನ್ನೇ ಜಪಿಸುತ್ತಿದೆ.
ನಿನಗೆ, ನನ್ನ ಹೃದಯದ ಕೂಗು ಕೇಳಿಸುತ್ತಿಲ್ಲವೇ? ಕಾದಿರುವೇ ನಾ ಕಡಲಂತೆ , ಬಂದು ಸೇರು ನೀ ನದಿಯಂತೆ , ಪ್ರೀತಿಸುವೆ ನಿನ್ನನ್ನು ಜೀವದಂತೆ, ಹೃದಯ ಬಡಿತದಂತೆ. ನನ್ನೀ ಬದುಕಿನ ಬಂಡಿಯಲ್ಲಿ ನಿನ್ನ ಜೊತೆ ಪ್ರಯಾಣಿಸಲು ಅದೃಷ್ಟ ಇಲ್ಲದೇ ಹೋದರು ಪರವಾಗಿಲ್ಲ ,ನಿನ್ನ ಮನಸ್ಸಿನಲ್ಲಿ ಜಾಗ ಕೊಟ್ಟಿದ್ದೀಯಲ್ಲಾ ಅಷ್ಟು ಸಾಕು ಈ ಪುಟ್ಟ ಹೃದಯಕ್ಕೆ.
ಬದುಕಿನ ವಿಚಿತ್ರ ನಿಯಮ ನನಗೀಗ ತಿಳಿಯುತ್ತಿದೆ ಗೆಳೆಯ. ಇಷ್ಟ ಪಟ್ಟಿರುವುದು ಸಿಗುವುದೇ ಆದರೆ ಕಣ್ಣೀರಿಗೆ ಬೆಲೆ ಎಲ್ಲಿದೆ? ಸಿಗುವುದೆಲ್ಲವನ್ನೂ ಪ್ರೀತಿಸುವುದಾದರೆ ಕಣ್ಣೀರಿಗೆ ಅವಕಾಶವೇ ಇರುವುದಿಲ್ಲ ಅಲ್ಲವೇ? ನನ್ನ ಹೃದಯದ ನೋವನ್ನು ನೀನೇ ಅರ್ಥ ಮಾಡಿಕೊಳ್ಳಬೇಕು ಕಣೋ. ಕಣ್ಣಲ್ಲಿರುವ ಖುಷಿನಾ ಯಾರು ಬೇಕಾದರೂ ನೋಡಬಹುದು, ಆದರೆ ಹೃದಯದಲ್ಲಿರೋ ನೋವು ಯಾರಿಗೂ ಕಾಣೋಲ್ಲ; ಕಂಡರೂ ಅದು ನಿನಗೆ ಮಾತ್ರ.
ನೀನು ಸಿಗೋದಿಲ್ಲ ಅನ್ನೋಕ್ಕಿಂತ, ನನ್ನೊಳಗಿರುವ ನಿನ್ನ ಮರೆಯೋಕೆ ಆಗೊಲ್ಲ ಅನ್ನೋ ನೋವೇ ಪ್ರತಿ ಕ್ಷಣ ನನ್ನ ಸಾಯಿಸುತ್ತಿದೆ. ಒಂದು ಮಾತು ತಿಳ್ಕೊ. ಮಾತು ಬಿಟ್ಟ ಮಾತ್ರಕ್ಕೆ ಪ್ರೀತಿ ಕಡಿಮೆಯೇನೂ ಆಗಿಲ್ಲ. ನಿನ್ನ ನೆನಪೇ ಪ್ರೀತಿಯನ್ನು ಇಮ್ಮಡಿಗೊಳಿಸುತ್ತಿದೆ.
ಇಂತಿ ನಿನ್ನ ಹೃದಯವಾಸಿ
ಚಿನ್ನಿ
ಉಮ್ಮೆ ಅಸ್ಮ ಕೆ. ಎಸ್