ಆಗ್ರಾ: ಒಬ್ಬ ವೈದ್ಯ ಮೀರತ್, ಕಾನ್ಪುರ ಮತ್ತು ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಸುಮಾರು 83 ಆಸ್ಪತ್ರೆ ಗಳನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡ ಪ್ರಕರಣ ನಡೆದಿದೆ.
ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳ ಪರವಾನಗಿ ನವೀಕರಣ ಅರ್ಜಿಗಳ ಪರಿಶೀಲನೆ ವೇಳೆ ಹಗರಣವೊಂದು ಬೆಳಕಿಗೆ ಬಂದಿದೆ.
ಆಗ್ರಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತಮ್ಮ ಹೆಸರಿನಲ್ಲಿ ನೋಂದಾಯಿಸಲಾದ 449 ಸಂಸ್ಥೆಗಳಲ್ಲಿ ಸುಮಾರು 15 ವೈದ್ಯರು ಕಾನೂನುಬಾಹಿರವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೈದ್ಯರಿಗೆ ನೋಟಿಸ್ ಕಳುಹಿಸಲಾಗಿದೆ ಈ ಸಂಬಂಧ ವಿವರವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಮುಖ್ಯ ವೈದ್ಯಾಧಿಕಾರಿ ಅರುಣ್ ಕುಮಾರ್ ಶ್ರೀವಾಸ್ತವ ಹೇಳಿದ್ದಾರೆ.
ಮೂಲಗಳ ಪ್ರಕಾರ, ವೈದ್ಯ ವೃತ್ತಿಗಾರರಲ್ಲದ ಜನರು ಆಸ್ಪತ್ರೆಗಳು, ಕ್ಲಿನಿಕ್‌ಗಳು ಮತ್ತು ಪೆಥಾಲಜಿ ಲ್ಯಾಬ್‌ಗಳನ್ನು ನಿರ್ವಹಿಸಲು ಆರೋಗ್ಯ ಇಲಾಖೆಯಿಂದ ವೈದ್ಯರ ಹೆಸರಿನಲ್ಲಿ ಪರವಾನಗಿ ಪಡೆಯುತ್ತಿದ್ದಾರೆ. ಈ ವರ್ಷ ಉತ್ತರ ಪ್ರದೇಶ ಸರ್ಕಾರವು ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಮಾಡಬೇಕೆಂದು ಆದೇಶಿಸಿದ ನಂತರ ಹಗರಣವು ಬಹಿರಂಗವಾಗಿದೆ.
ಆರೋಪಿತ ವೈದ್ಯಕೀಯ ವೃತ್ತಿಗಾರರ ಪಟ್ಟಿಯಲ್ಲಿ , ಹೃದ್ರೋಗ ತಜ್ಞರು, ಮಕ್ಕಳ ತಜ್ಞರು ಮತ್ತು ಶಸ್ತ್ರಚಿಕಿತ್ಸಕರು ಸೇರಿದ್ದಾರೆ.
ಆರೋಗ್ಯ ಇಲಾಖೆಯ ದಾಖಲೆಗಳ ಪ್ರಕಾರ, 2022-2023ರಲ್ಲಿ 1,269 ವೈದ್ಯಕೀಯ ಕೇಂದ್ರಗಳನ್ನು ನೋಂದಾಯಿಸಲಾಗಿದೆ. ಇವುಗಳಲ್ಲಿ 494 ಆಸ್ಪತ್ರೆಗಳು, 493 ಕ್ಲಿನಿಕ್‌ಗಳು, 170 ಪೆಥಾಲಜಿ ಲ್ಯಾಬ್‌ಗಳು, 104 ಡಯಾಗ್ನೋಸ್ಟಿಕ್ ಸೆಂಟರ್‌ಗಳು, 7 ಮಾದರಿ ಸಂಗ್ರಹ ಕೇಂದ್ರಗಳು ಮತ್ತು ಒಂದು ಡಯಾಲಿಸಿಸ್ ಕೇಂದ್ರ ಸೇರಿವೆ. ಅರ್ಜಿಗಳ ಪರಿಶೀಲನೆಯ ನಂತರ ಆರೋಗ್ಯ ಇಲಾಖೆಯು 2023-24ನೇ ಸಾಲಿಗೆ 570 ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳ ನೋಂದಣಿಯನ್ನು ನವೀಕರಿಸಿದೆ.