Advertisement

ಪ್ರಶಸ್ತಿ ಪುರಸ್ಕೃತರ ಹೆಸರು ಗೌಪ್ಯ

01:47 AM Apr 01, 2019 | Team Udayavani |

ನವದೆಹಲಿ: ಇದೊಂದು ವಿಶಿಷ್ಟ ಪ್ರಶಸ್ತಿ. ಅನುಪಮ ಸಾಧನೆಗೈದ ಈ ಸಾಧಕರನ್ನು ಗುರುತಿಸಿ ರಾಷ್ಟ್ರೀಯ ಪುರಸ್ಕಾರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ, ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ!

Advertisement

ಏಕೆಂದರೆ, ಹಗಲಿರುಳು ದೇಶದ ಪರ ಮಾಹಿತಿ ಸಂಗ್ರಹಿಸುವ ಭಾರತದ ಗುಪ್ತಚರ ದಳಕ್ಕೆ ನೀಡಲಾಗುವ ಪ್ರಶಸ್ತಿ ಇದು. ಗುಪ್ತಚರ ದಳದ 132 ವರ್ಷಗಳ ಗೌಪ್ಯತೆಯ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶೇಷ ಸಾಧನೆಗೈದವರಿಗೆ ಪುರಸ್ಕಾರ
ನೀಡಲು ನಿರ್ಧರಿಸಲಾಗಿದೆ.

ಅಸಾಧಾರಣ ಆಸೂಚನಾ ಕುಶಲತಾ ಪದಕ ಎಂದು ಈ ಪುರಸ್ಕಾರಕ್ಕೆ ಹೆಸರಿಡಲಾಗಿದ್ದು, ಗುಪ್ತಚರ ವಿಭಾಗದ ಅಧಿಕಾರಿಗಳು ಮತ್ತು ರಾಜ್ಯ ಗುಪ್ತಚರ ವಿಭಾಗದಲ್ಲಿ ಅಪರೂಪದ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಮೂವರು ಐಪಿಎಸ್‌ ಅಧಿಕಾರಿಗಳು, 34 ಇತರ ಗುಪ್ತಚರ ದಳದ ಅಧಿಕಾರಿಗಳಿಗೆ ಈ ಪುರಸ್ಕಾರ ನೀಡಲಾಗುತ್ತಿದೆ “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

ಉಗ್ರ ದಾಳಿ ವೇಳೆ ಹೋರಾಡಿದವರು, ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದವರು, ಉಗ್ರರಿಗೆ ಹಣಕಾಸು ನೆರವಿನ ಜಾಡು ಪತ್ತೆ ಹಚ್ಚಿದವರು ಹಾಗೂ ನಕ್ಸಲರು ಹಾಗೂ ಉಗ್ರ ಸಂಘಟನೆಗಳ ವಿರುದ್ಧ ಕಾರ್ಯಾಚರಣೆ ನಡೆಸಿದವರಿಗೆ ಈ ಪುರಸ್ಕಾರ ನೀಡಲು ಗುರುತಿಸಲಾಗಿದೆ. ಆದರೆ ಇವರ ಹೆಸರನ್ನು ಬಹಿರಂಗ ಪಡಿಸಿಲ್ಲ. ಇವರ ಕಾರ್ಯವಿಧಾನವೇ ಗೌಪ್ಯವಾಗಿರುವುದರಿಂದ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು,
ಇತರ ಯಾವುದೇ ವಿವರಗಳನ್ನು ಬಹಿರಂಗ ಪಡಿಸದೇ ಇರಲು ನಿರ್ಧರಿಸಲಾಗಿದೆ.

ಕಳೆದ ಹಲವು ವರ್ಷಗಳಿಂದಲೂ ಗುಪ್ತಚರ ದಳಗಳು ಕಠಿಣ ಪರಿಶ್ರಮ ವಹಿಸಿದ ಅಧಿಕಾರಿಗಳನ್ನು ಗುರುತಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದವು. ಇದಕ್ಕಾಗಿ 2016 ರಲ್ಲಿ ಒಂದು ಸಮಿತಿಯನ್ನು ಕೇಂದ್ರ ಗೃಹ ಸಚಿವಾಲಯವು ನೇಮಿಸಿತ್ತು. ನಂತರ ಕಳೆದ ಜುಲೈನಲ್ಲಿ ಪುರಸ್ಕಾರ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿತ್ತು.

Advertisement

ಗುಪ್ತಚರ ದಳಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಡುತ್ತಾರೆ. ಅವರನ್ನು ನಾವು ಪುರಸ್ಕರಿಸದೇ ಇದ್ದರೆ ಅವರ ಪರಿಣಿತಿ ನಮ್ಮ ಗಮನಕ್ಕೆ ಬರುವುದಿಲ್ಲ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ. ಗುಪ್ತಚರ ಅಧಿಕಾರಿಗಳನ್ನು ಗುರುತಿಸದೇ ಇರುವುದರಿಂದ, ಅಲ್ಲಿಗೆ ನೇಮಕಗೊಳ್ಳಲು ಜನರು ಇಷ್ಟಪಡುವುದಿಲ್ಲ.ಪುರಸ್ಕಾರಗಳನ್ನು ನೀಡುವ ಸಂಪ್ರದಾಯದಿಂದಾಗಿ ಗುಪ್ತಚರ ಅಧಿಕಾರಿಗಳ ವಲಯದಲ್ಲಾದರೂ ಇವರಿಗೆ ಮೆಚ್ಚುಗೆ ವ್ಯಕ್ತವಾಗುತ್ತದೆ ಎಂಬ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next