ದೇಶವ್ಯಾಪಿ ಲಾಕ್ ಡೌನ್ ಸ್ಥಿತಿಯಿಂದಾಗಿ ದೇಶದೆಲ್ಲೆಡೆ ಇರುವ ಪೊಲೀಸ್ ಸಿಬ್ಬಂದಿಗಳಿಗೆ ಬಿಡುವಿಲ್ಲದ ಕೆಲಸ. ಕಟ್ಟುನಿಟ್ಟಿನ ಎಚ್ಚರ ವಿಧಿಸಿ ಜನರು ಮನೆಗಳಿಂದ ಹೊರಬಂದು ಸುಖಾಸುಮ್ಮನೆ ರಸ್ತೆಗಳಲ್ಲಿ ತಿರುಗಾಡದಂತೆ ಮಾಡುವಷ್ಟರಲ್ಲಿ ನಮ್ಮ ಪೊಲೀಸರ ಬೆವರು ಕಿತ್ತು ಬರುತ್ತದೆ ಮತ್ತು ಕೆಲವೊಮ್ಮೆ ತಾಳ್ಮೆಯ ಕಟ್ಟೆಯೂ ಒಡೆದು ಹೋಗಿರುತ್ತದೆ.
ಹೀಗೆ ಕರ್ತವ್ಯದ ಜಂಜಾಟದಲ್ಲಿ ಮೈ-ಮನ ದಣಿಯುವ ಪೊಲೀಸರಿಗೆ ರಿಲ್ಯಾಕ್ಸ್ ಆಗಲು ಏನಾದರೊಂದು ಉಲ್ಲಾಸ ಕೊಡುವ ವಿಷಯ ಅಗತ್ಯವಿರುತ್ತದೆ.
ಬೆಂಗಳೂರು ನಗರದ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಇಲ್ಲೊಂದು ಮನಸ್ಸಿಗೆ ಮುದ ನೀಡುವ ವಿಚಾರವಿದೆ. ಅದುವೇ ಸುಂದರವಾದ ಗಂಡು ಕರು! ಆಶ್ಚರ್ಯವಾಯಿತೇ? ಹೌದು, ವಾಹನ ತಪಾಸಣೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಿಕ್ಕಿದ ಸಣ್ಣ ಕರುವನ್ನು ತಂದು ಠಾಣೆಯಲ್ಲಿ ಸಾಕುತ್ತಿರುವ ಇಲ್ಲಿನ ಪೊಲೀಸರು ಅದರ ತುಂಟಾಟದಲ್ಲಿ ತಮ್ಮ ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳುತ್ತಿದ್ದಾರೆ.
ಅದರಲ್ಲೂ ಇಲ್ಲಿನ ಠಾಣಾ ಇನ್ ಸ್ಪೆಕ್ಟರ್ ಮಹಮ್ಮದ್ ರಫಿ ಅವರಿಗೂ ಈ ಕರುವಿಗೂ ಅದೇನೋ ಪರಮಾಪ್ತ ನಂಟು. ಮಾರ್ಚ್ 30ರಂದು ವಾಹನ ತಪಾಸಣೆಯ ಸಂದರ್ಭದಲ್ಲಿ ಠಾಣಾ ಸಬ್ ಇನ್ ಸ್ಪೆಕ್ಟರ್ ನಾಗರಾಜ್ ಹಾಗೂ ಕಾನ್ ಸ್ಟೇಬಲ್ ಗುರ್ಕಿ ಅವರಿಗೆ ಕಾರೊಂದರಲ್ಲಿ ಸಂಶಯಾಸ್ಪದವಾಗಿ ಸಾಗಾಟ ಮಾಡುತ್ತಿದ್ದ ನವಜಾತ ಗಂಡು ಕರು ಒಂದು ಸಿಗುತ್ತದೆ.
ಅದನ್ನು ಠಾಣೆಗೆ ತಂದು ಅದರ ಪಾಲನೆಯನ್ನು ಮಾಡಲಾರಂಭಿಸುತ್ತಾರೆ. ಈ ನಡುವೆ ಇನ್ ಸ್ಪೆಕ್ಟರ್ ಮಹಮ್ಮದ್ ರಫಿ ಅವರಿಗೆ ಬಹಳ ಆಪ್ತವಾಗುವ ಈ ಕರುವಿಗೆ ಅವರು ‘ಭೀಮ’ ಎಂದು ಹೆಸರಿಟ್ಟು ಮುದ್ದಿನಿಂದ ಸಾಕತೊಡಗುತ್ತಾರೆ.
ಪ್ರತೀದಿನ ಬೆಳಿಗ್ಗೆ ಹಾಗೂ ಸಾಯಂಕಾಲ ಎರಡು ಲೀಟರ್ ಹಾಲು ಕೊಡ್ತಾ ಇದ್ದು ಕರು ಬೆಳವಣಿಗೆಯಾದ ಮೇಲೆ ಇದೀಗ ಪ್ರತೀದಿನ 15 ಲೀಟರ್ ಹಾಲನ್ನು ಆ ಕರುವಿಗೆ ಪೊಲೀಸರು ನೀಡುತ್ತಿದ್ದಾರೆ. ಜೊತೆಗೆ ಕಡ್ಲೆಕಾಳು, ಬೆಲ್ಲವನ್ನೂ ಸಹ ಆಹಾರವಾಗಿ ನೀಡುತ್ತಿದ್ದಾರೆ.
ಇಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರತೀದಿನ ‘ಭೀಮ’ನನ್ನು ಮುದ್ದಾಡಿ ಮಾತನಾಡಿಸಿಯೇ ತಮ್ಮ ಕರ್ತವ್ಯಕ್ಕೆ ತೆರಳುವಷ್ಟರಮಟ್ಟಿಗೆ ಈ ಮುದ್ದಿನ ಕರು ಇವರೆಲ್ಲರ ಹೃದಯ ಗೆದ್ದಿದ್ದಾನೆ.
ಇದೀಗ ಲಾಕ್ ಡೌನ್ ಕರ್ತವ್ಯದ ಒತ್ತಡದ ನಡುವೆಯೂ ಮುದ್ದಾದ ‘ಭೀಮ’ ತನ್ನ ತುಂಟಾಟಗಳ ಮೂಲಕ ಇಲ್ಲಿನ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ರಿಲ್ಯಾಕ್ಸ್ ನೀಡುತ್ತಿದ್ದಾನೆ.
ಈ ಸಂದರ್ಭದಲ್ಲಿ ದೇಶಾದ್ಯಂತ ಪೊಲೀಸರ ಮಾನವೀಯ ಮುಖಗಳು ವಿವಿಧ ಘಟನೆಗಳ ಮೂಲಕ ನಮ್ಮ ಗಮನಕ್ಕೆ ಬರುತ್ತಲೇ ಇರುತ್ತದೆ. ಅಲ್ಲೆಲ್ಲೋ ಒಂದು ಕಡೆ ಪೊಲೀಸ್ ಅಧಿಕಾರಿಯೊಬ್ಬರು ಗಾಡಿಯಲ್ಲಿ ಮೇವು ತರಿಸಿ ಬೀದಿ ದನಗಳಿಗೆ ಹಾಕುತ್ತಾರೆ. ಇನ್ನೆಲ್ಲೋ ಮನೆಯಲ್ಲಿರುವ ವೃದ್ಧರ ಮನವಿಗೆ ಸ್ಪಂದಿಸಿ ಪೊಲೀಸರು ಅಗತ್ಯ ಔಷಧಿಯನ್ನು ಅವರಿಗೆ ತಲುಪಿಸುವ ಕೆಲಸ ಮಾಡುತ್ತಾರೆ. ಇನ್ನೊಂದು ಕಡೆ ಬೀದಿ ಬದಿಯಲ್ಲಿ ಹಸಿದ ಹೊಟ್ಟೆಗಳಿಗೆ ಪೊಲೀಸರು ಉಣಬಡಿಸುವ ದೃಶ್ಯ ನಮಗೆ ಸಾಮಾಜಿಕ ಜಾಲತಾಣಗಳ ಮೂಲಕ ನೋಡಲು ಸಿಗುತ್ತದೆ.
ಹೀಗೆ, ನಿತ್ಯ ಹತ್ತಾರು ಘಟನೆಗಳ ಮೂಲಕ, ಪೊಲೀಸರೆಂದರೆ ಬರೀ ದರ್ಪ ತೋರುವವರು, ಧಿಮಾಕು ಮಾತನಾಡುವವರು ಸುಖಾಸುಮ್ಮನೆ ಲಾಠಿ ಬೀಸುವವರು ಎಂಬ ಜನಸಾಮಾನ್ಯರಲ್ಲಿರುವ ತಪ್ಪು ಕಲ್ಪನೆಗಳು ಈ ಸಂಕಟದ ಸಂದರ್ಭದಲ್ಲಿ ಒಂದೊಂದಾಗಿ ಸುಳ್ಳೆಂದು ಸಾಬೀತುಗೊಳಿಸುತ್ತಿರುವ ನಮ್ಮ ದೇಶದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮಾನವೀಯ ಕೆಲಸಕ್ಕೊಂದು ನಮ್ಮ ಸಲಾಂ.
ವಿಡಿಯೋ-ಮಾಹಿತಿ: ಫಕ್ರುದ್ದೀನ್