ಮಾನವ ಸಂಬಂಧ ಮತ್ತು ಬದುಕಿನ ಮೌಲ್ಯ ಕುರಿತು ಅನೇಕ ಚಿತ್ರಗಳು ಬಂದಿವೆ. ಆ ಸಾಲಿಗೆ “ಆರೋಹಣ’ ಚಿತ್ರವೂ ಒಂದು. ಇಲ್ಲಿ ಬದುಕಿನ ಹೆಜ್ಜೆ ಗುರುತನ್ನು ದಾಖಲಿಸುವ ಪ್ರಯತ್ನವಿದೆ. ಮನುಷ್ಯ ದಿನ ನಿತ್ಯವೂ ಬದುಕಿನ ಜೊತೆ ಯುದ್ಧ ಮಾಡುತ್ತಲೇ ಇರುತ್ತಾನೆ. ಅಂತಹ ಜೀವನದಲ್ಲಿ ಎದುರಾಗುವ ಯುದ್ಧದಲ್ಲಿ ಹೇಗೆ ಗೆದ್ದು ಹೊರಗೆ ಬರುತ್ತಾನೆ ಅನ್ನೋದೇ “ಆರೋಹಣ’ದ ಕಥೆ.
ಇದು ಸಂಪೂರ್ಣ ಹೊಸಬರೇ ಸೇರಿ ಮಾಡಿರುವ ಚಿತ್ರ. ಎಲ್ಲರಿಗೂ ಇದು ಮೊದಲ ಅನುಭವ. ಈ ಚಿತ್ರದ ಮೂಲಕ ಸುಶೀಲ್ ನಾಯಕರಾದರೆ, ಪ್ರೀತಿ ಯಶ್ ನಾಯಕಿ. ಶ್ರೀಧರ್ ಶೆಟ್ಟಿಗೂ ಇದು ಮೊದಲ ನಿರ್ದೇಶನದ ಚಿತ್ರ. ಛಾಯಾಗ್ರಾಹಕ ಶಿವಪುತ್ರ ಮತ್ತು ಸಂಗೀತ ನಿರ್ದೇಶಕ ಉತ್ತಮ್‌ರಾಜ್ ಅವರಿಗೂ ಮೊದಲ ಸಿನಿಮಾ. ಹಾಗಾಗಿ, ಎಲ್ಲರಿಗೂ ಸಿನಿಮಾ ಯುದ್ಧದಲ್ಲಿ ಗೆಲ್ಲುವ ಅತೀವ ನಂಬಿಕೆ.
ಅಂದಹಾಗೆ, “ಆರೋಹಣ’ ಆ.31 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದು ಪಕ್ಕಾ ಹಳ್ಳಿ ಸೊಗಡಿನ ಕಥೆ. ಅದರಲ್ಲೂ ಅಪ್ಪ ಮತ್ತು ಮಗನ ನಡುವಿನ ಚಿತ್ರಣ ಇಲ್ಲಿದೆ. ಸಾಕಷ್ಟು ಅಪ್ಪ, ಮಗನ ಕುರಿತ ಚಿತ್ರಗಳು ಬಂದಿವೆ. ಆದರೆ, ಇಲ್ಲಿರುವ ಅಪ್ಪ, ಮಗನ ಬಾಂಧವ್ಯ ಹೊಸದಾಗಿರಲಿದೆ ಎಂಬುದು ಚಿತ್ರತಂಡದ ಮಾತು. ಸೆಂಟಿಮೆಮಟ್, ಪ್ರೀತಿ, ಗೆಳೆತನ ಇದು “ಆರೋಹಣ’ದ ಹೈಲೆಟ್.
ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಒಂದೊಂದು ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ಅಂತಹವರಿಗೆ ಆ ಸಮಸ್ಯೆಯಿಂದ ಹೇಗೆ ಹೊರಬರಬೇಕು ಎಂಬ ಪರಿಹಾರ ಇಲ್ಲಿ ಸಿಗಲಿದೆ. ಕೇವಲ ಇದು ಪರಿಹಾರ ಸೂಚಿಸುವ ಚಿತ್ರವಲ್ಲ ಎನ್ನುವ ನಾಯಕ ಸುಶೀಲ್, ಇಲ್ಲೊಂದು ಸಂದೇಶವೂ ಇದೆ. ಅದು ಬದುಕಿಗೆ ಸಂಬಂಧಿಸಿದ್ದು. ಅದನ್ನು ಅರಿತರೆ, ಬದುಕಲ್ಲಿ ಒಂದಷ್ಟು ಸಮಸ್ಯೆಗಳನ್ನು ದೂರ ಇಡಲು ಸಾಧ್ಯವಾಗುತ್ತೆ ಎನ್ನುತ್ತಾರೆ.
ಚಿತ್ರಕ್ಕೆ ಕೆ.ಕಲ್ಯಾಣ್ ಮೂರು ಗೀತೆಗಳನ್ನು ರಚಿಸಿದ್ದಾರೆ. ಜಗ್ಗಿ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ. ಇನ್ನು, ಎರಡು ಭರ್ಜರಿ ಫೈಟ್‌ಗಳೂ ಇಲ್ಲಿವೆ. ವಿಶೇಷವೆಂದರೆ, ರವಿಶಂಕರ್‌ಗೌಡ ಅವರು ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ. “ಆರೋಹಣ’ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಈ ಹಿಂದೆಯೇ ಪ್ರೇಕ್ಷಕರ ಮುಂದೆ ಬರಬೇಕಿತ್ತು. ಆದರೆ, ಒಂದಷ್ಟು ಸಮಸ್ಯೆಗಳನ್ನು ಪರಿಹರಿಸಿಕೊಂಡು ಬರುವ ಹೊತ್ತಿಗೆ ಇಷ್ಟು ತಡವಾಗಿದೆ. ಬೆಂಗಳೂರು, ಸಕಲೇಶಪುರ, ರಾಮನಗರ ಮತ್ತು ಬಿಡದಿ ಸೇರಿದಂತೆ ಇತರೆಡೆ ಚಿತ್ರೀಕರಣವಾಗಿದೆ.