Advertisement

Thirupathi Laddu: ದೇಗುಲಗಳು ಸರಕಾರದ ಹಿಡಿತದಿಂದ ಮುಕ್ತವಾಗಲಿ: ಶ್ರೀಸುಬುಧೇಂದ್ರ ಸ್ವಾಮೀಜಿ

10:38 PM Sep 23, 2024 | Team Udayavani |

ರಾಯಚೂರು: ತಿರುಪತಿ ಶ್ರೀನಿವಾಸನ ಸನ್ನಿಧಾನ, ಹಿಂದೂಗಳ ವಿಶಿಷ್ಟ ಶ್ರದ್ಧಾ ಕೇಂದ್ರ. ಪ್ರಸಾದದಲ್ಲಿ ಕಳಪೆ ತುಪ್ಪದ ಮಾಹಿತಿ ಮಾಧ್ಯಮಗಳಲ್ಲಿ, ಜನರ ಬಾಯಲ್ಲಿದೆ. ಈ ಬಗ್ಗೆ ಸರ್ಕಾರಗಳು ಸಮಗ್ರ ತನಿಖೆ ಕೈಗೊಂಡು, ಯಾರ ಅಚಾತುರ್ಯದಿಂದ ನಡೆದಿದೆ? ಯಾವಾಗಿನಿಂದ ನಡೆದಿದೆ? ಅನ್ನೋದು ತನಿಖೆ ನಡೆಸಬೇಕು ಎಂದು ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.

Advertisement

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮುಜರಾಯಿ ಇಲಾಖೆಗಳಿಂದ ದೇಗುಲಗಳನ್ನು ಮುಕ್ತಗೊಳಿಸಿ. ದೇವಸ್ಥಾನ ನಿರ್ವಹಣೆ ಸಂಬಂಧ ಕೇಂದ್ರ ಸರ್ಕಾರ ಹೊಸ ಕಾಯ್ದೆ ಜಾರಿಗೊಳಿಸಲಿ. ಮಠಮಾನ್ಯ, ದೇವಸ್ಥಾನಗಳು ಆಯಾ ಪ್ರಾಂತ್ಯದ ಭಕ್ತರಿಗೆ ಸಂಪ್ರದಾಯಗಳಿಗೆ ಸಂಬಂಧಿಸಿದ ಶ್ರದ್ಧಾಕೇಂದ್ರಗಳು. ಇದನ್ನು ರಾಜ್ಯ ರಾಜಧಾನಿಯಲ್ಲಿ ಕುಳಿತು ನಡೆಸಲಾಗಲ್ಲ. ದೇಗುಲದಲ್ಲಿ ಸಮಸ್ಯೆ, ದೋಷ ಆದಾಗ ಸರ್ಕಾರ ಪರಿಶೀಲಿಸಬೇಕು. ಸುಮೋಟೋ ಹಾಕಿ ಅದನ್ನು ಸರಿಪಡಿಸುವ ಕೆಲಸವಷ್ಟೇ ಮಾಡಬೇಕು. ದೇಗುಲದ ವಿಚಾರದಲ್ಲಿ ಸರ್ಕಾರ ತಲೆಹಾಕುವುದು, ಪಾವಿತ್ರ್ಯತೆ, ಸಂಪ್ರದಾಯಗಳ ಬದಲಾಯಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಸುಬುಧೇಂದ್ರ ತೀರ್ಥರು ತಿಳಿಸಿದರು.

ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದ ತುಪ್ಪದಲ್ಲಿ ಕಲಬೆರಕೆ ಆಗಿದ್ದು ಹೇಯಕೃತ್ಯ, ಅಪಚಾರ. ಪ್ರಸಾದದಲ್ಲಿ ಈ ರೀತಿ ನಡೆದಿದ್ದನ್ನು ಖಂಡಿಸುತ್ತೇವೆ. ತಪ್ಪಿತಸ್ಥರಿಗೆ ಕಾನೂನು ರೀತಿ ಶಿಕ್ಷೆಯಾಗಬೇಕು. ತಿರುಪತಿಯಲ್ಲಿ ಏನೇನು ಕ್ರಮಗಳಿದ್ದಾವೋ ಅವು ನಡೀಬೇಕು. ನಾವೂ ಕೂಡ ಉಳಿದ ಶ್ರೀಗಳಂತೆ ಖಂಡಿಸುತ್ತೇವೆ ಈ ಬಗೆಗಿನ ಚರ್ಚೆಗಳಲ್ಲಿ ಭಾಗಿಯಾಗುತ್ತೇವೆ ಎಂದು ಹೇಳಿದರು.

ಆರಾಧನೆ ವೇಳೆ ತಿರುಪತಿಯಿಂದ ಶೇಷವಸ್ತ್ರ, ಲಡ್ಡು ಬರುತ್ತೆ:
ಆರಾಧನೆ ವೇಳೆ ಮಂತ್ರಾಲಯಕ್ಕೆ ತಿರುಪತಿ ಲಡ್ಡು ಆಗಮಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶ್ರೀನಿವಾಸ ದೇವರ ಶೇಷ ವಸ್ತ್ರ ಬರುವಾಗ ಪ್ರಸಾದ, ಮಂತ್ರಾಕ್ಷತೆ, ಲಡ್ಡು ಎಲ್ಲವೂ ಬರುತ್ತೆ. ಅದು ಸಾರ್ವಜನಿಕರ ವಿತರಣೆಗೆ ಅಲ್ಲ. ಬಂದ ಪ್ರಸಾದ ಗೌರವದಿಂದ ಸ್ವೀಕರಿಸಿದ್ದೇವೆ. ಹಲವು ದೇವಸ್ಥಾನಗಳ ಪ್ರಸಾದ ಬರುತ್ತೆ? ಏನು ಬರುತ್ತೆ ಅದನ್ನ ಪರೀಕ್ಷಿಸಲಾಗಲ್ಲ. ಕೊಡುವವರ, ತರುವವರು, ಅದಕ್ಕೆ ಬೇಕಾದ ಪದಾರ್ಥ ಖರೀದಿಸುವವರು ಅದನ್ನು ಪರಿಶೀಲಿಸಬೇಕು. ಶೇಷವಸ್ತ್ರವನ್ನೇ ಪ್ರಸಾದ ಅಂತ ಸ್ವೀಕರಿಸಿ, ರಾಯರಿಗೆ ಸಮರ್ಪಣೆ ಮಾಡುತ್ತೇವೆ ಎಂದರು.

ಮಂತ್ರಾಲಯಕ್ಕೆ ವಿಜಯಾ ಡೇರಿಯಿಂದ ತುಪ್ಪ ಬರುತ್ತೆ:
ಮಂತ್ರಾಲಯದ ರಾಯರ ಪ್ರಸಾದವಾಗಿ ವಿತರಿಸುವ ಪರಿಮಳ ಪ್ರಸಾದಕ್ಕಾಗಿ ಬಳಸುವ ತುಪ್ಪವು ಆಂಧ್ರದ ಕರ್ನೂಲ್ ಜಿಲ್ಲೆಯ ವಿಜಯಾ ಡೇರಿಯಿಂದ ಮಂತ್ರಾಲಯಕ್ಕೆ ತರಿಸುತ್ತೇವೆ. ಕೊರೊನಾ ಮೊದಲು ನಂದಿನಿ ತುಪ್ಪವನ್ನೇ ತರಿಸುತ್ತಿದ್ದೆವು. ಅಲ್ಲಿಂದ ಪೂರೈಕೆಗೆ ಎರಡು ರಾಜ್ಯಗಳ ದಾಟಿ ಬರಬೇಕು. ಹೀಗಾಗಿ ವಿಜಯಾ ಡೇರಿಯಿಂದ ತರಿಸುತ್ತಿದ್ದೇವೆ. ಎಲ್ಲಿಂದ ವಸ್ತು ಪಡೆಯುತ್ತೇವೆಯೋ ಅದರ ಪರಿಶುದ್ಧತೆಯ ಎಫ್​ಸಿಐ ಪ್ರಯೋಗಾಲಯ ವರದಿ ಪಡೆಯುತ್ತೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next