Advertisement

ಮಲೆನಾಡು-ಕಾಡು ಜಲಾವೃತ!

11:57 AM Aug 11, 2019 | Team Udayavani |

ತೀರ್ಥಹಳ್ಳಿ: ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯ ರುದ್ರನರ್ತನಕ್ಕೆ ಮಲೆನಾಡಿ ಗರು ಬೆಚ್ಚಿ ಬಿದ್ದಿದ್ದಾರೆ. ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ಸತತ ಮೂರನೇ ದಿನವೂ ಶ್ರೀ ರಾಮಮಂಟಪದ ಮೇಲೆ 3 ಅಡಿ ನೀರು ಹರಿಯುತ್ತಿದೆ. ಆಗುಂಬೆ ಭಾಗದ ಮಾಲತಿ ನದಿ ಉಕ್ಕಿ ಅಡಕೆ ತೋಟ- ಗದ್ದೆಗಳು ಜಲಾವೃತಗೊಂಡಿವೆ. ತುಂಗಾನದಿಯಲ್ಲಿ ನೀರಿನ ಮಟ್ಟ 90 ಅಡಿ ಸಮೀಪಿಸುತ್ತಿದೆ. ತಾಲೂಕಿನಲ್ಲಿ 20ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಮಂಡಗದ್ದೆ ಸಮೀಪದ ಶಿಂಗನಬಿದರೆ, ಹೆಗಲತ್ತಿ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ ಅಡಕೆ ತೋಟ- ಗದ್ದೆಗಳಿಗೆ ಅಪಾರ ಹಾನಿಯಾಗಿದೆ. ತಾಲೂಕಿನ ಹಲವೆಡೆ ರಸ್ತೆಗಳು, ಸೇತುವೆಗಳು ಅಪಾಯದ ಸ್ಥಿತಿಯಲ್ಲಿವೆ. ಹಲವು ಗ್ರಾಮಗಳಲ್ಲಿ ವಿದ್ಯುತ್‌ ಕಂಬ ಹಾಗೂ ವಿದ್ಯುತ್‌ ತಂತಿ ನೆಲಕ್ಕೆ ಅಪ್ಪಳಿಸಿದೆ.

Advertisement

ತಾಲೂಕಿನ ಕನ್ನಂಗಿ ಸಮೀಪದ ಅತ್ತಿಗದ್ದೆಯ ನಿರ್ಮಲಮ್ಮ ಎಂಬುವವರ ಮನೆಯೊಂದಕ್ಕೆ ನೀರು ನುಗ್ಗಿ 8 ಜಾನುವಾರುಗಳು ಹಾಗೂ ಗೀತಾ ಎಂಬುವವರ ಮನೆಯ 5 ಜಾನುವಾರುಗಳು ಕೊಚ್ಚಿ ಹೋಗಿ ಮೃತಪಟ್ಟಿವೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ.

ಕುಂಭದ್ರೋಣ ಮಳೆಗೆ ತೀರ್ಥಹಳ್ಳಿ ಪಟ್ಟಣದಲ್ಲಿ ಜನ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಮುಂಜಾನೆ ತಾಲೂಕಿಗೆ ಬರಬೇಕಾದ ಹಾಲು, ತರಕಾರಿ, ಪತ್ರಿಕೆಗಳ ಸರಬರಾಜು ವಾಹನಗಳು ಬಾರದೇ ಪರದಾಡುತ್ತಿದ್ದಾರೆ. ತಾಲೂಕಿನಾದ್ಯಂತ ವಿದ್ಯುತ್‌ ವ್ಯತ್ಯಯದಿಂದ ಸಂಪೂರ್ಣ ಕತ್ತಲು ಆವರಿಸಿದೆ.

ಶಿವಮೊಗ್ಗ- ತೀರ್ಥಹಳ್ಳಿ- ಉಡುಪಿಯ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್‌ ಆಗಿದೆ. ಮಂಡಗದ್ದೆ- ತೂದೂರು- ಬೆಜ್ಜವಳ್ಳಿ- ಕುಡುಮಲ್ಲಿಗೆ- ತೀರ್ಥಹಳ್ಳಿ- ಶಿವರಾಜಪುರ- ರಂಜದಕಟ್ಟೆ- ಕಲ್ಮನೆ ಮುಂತಾದ ಕಡೆ ರಸ್ತೆಯ ಮೇಲೆ 3 ಅಡಿ ನೀರು ನಿಂತಿದ್ದು, ವಾಹನ ಸಂಚಾರವಿಲ್ಲದೇ ಜನ ಪರಿತಪಿಸುವತಾಗಿದೆ. ತಾಲೂಕಿನ ಹಲವು ಗ್ರಾಮಗಳು ದ್ವೀಪದಂತಾಗಿವೆ. ಅಡಕೆ ತೋಟಗಳು ಹಾಗೂ ಗದ್ದೆಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶದಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದೆ. ತೀರ್ಥಹಳ್ಳಿ- ಕೊಪ್ಪ ರಸ್ತೆಯಲ್ಲಿ ಸಹ ಕುಶಾವತಿಯಲ್ಲಿ ನೀರು ಆವರಿಸಿ ವಾಹನ ಸಂಚಾರ ಸ್ಥಬ್ಧವಾಗಿದೆ. ಕನ್ನಂಗಿ ಪಂಚಾಯತ್‌ನ ಅತ್ತಿಗದ್ದೆ ಸೇತುವೆ ಸಂಪೂರ್ಣ ನಾಶವಾಗಿದೆ. ಪಟ್ಟಣದ ತಾಲೂಕು ಕಚೇರಿ ಹಿಂಭಾಗದ ಗೋಡೆ ಭಾರೀ ಮಳೆಗೆ ಕುಸಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next