Advertisement

ಕೆರೆಯಲ್ಲಿ ನೀರಿದ್ದರೂ ದಾಹ ನೀಗ್ತಿಲ್ಲ !

04:23 PM Jun 29, 2018 | Team Udayavani |

ಬಳ್ಳಾರಿ: ಗಣಿನಗರಿ ಬಳ್ಳಾರಿ ನಗರಕ್ಕೆ ನೀರು ಸರಬರಾಜು ಮಾಡುವ ಪಾಲಿಕೆಯ ಸಮರ್ಪಕ ನಿರ್ವಹಣೆಯ ಕೊರತೆಯೋ ಗೊತ್ತಿಲ್ಲ. ಆದರೆ, ನಗರದ ಜನತೆಗೆ ಕುಡಿವ ನೀರು ಪೂರೈಸುವ ಅಲ್ಲೀಪುರ, ಮೋಕಾ ಕೆರೆಗಳಲ್ಲಿ ಸಮರ್ಪಕ ನೀರು ಸಂಗ್ರಹವಿದ್ದರೂ, ನಗರದ ಜನರು 10-12 ದಿನಗಳಿಗೊಮ್ಮೆ ಕುಡಿವ ನೀರು ಪಡೆಯುವ ಸಮಸ್ಯೆಯಿಂದ ಮಾತ್ರ ಮುಕ್ತಗೊಂಡಿಲ್ಲ. ಚುನಾವಣೆಯಲ್ಲಿ ಗೆದ್ದರೆ 5 ದಿನಕ್ಕೊಮ್ಮೆ ನೀರು ಬಿಡುವುದಾಗಿ ಹೇಳಿದ್ದ ನಗರ ಶಾಸಕ ಜಿ.ಸೋಮಶೇಖರರೆಡ್ಡಿಯವರು ಭರವಸೆಯೂ ಈಡೇರಿಲ್ಲ.

Advertisement

ಹೌದು….! ತುಂಗಭದ್ರಾ ಜಲಾಶಯ ರಾಜ್ಯದ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆ ಸೇರಿ ನೆರೆಯ ಆಂಧ್ರಪ್ರದೇಶ,
ತೆಲಂಗಾಣ ರಾಜ್ಯಗಳ ಅನಂತಪುರ, ಕರ್ನೂಲ್‌ ಜಿಲ್ಲೆಗಳ ಜೀವನಾಡಿ. ಜಲಾಶಯದಿಂದ ನೀರು ಪಡೆಯುವ ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ಪ್ರತಿ ಎರಡು ದಿನಕ್ಕೊಮ್ಮೆ ಕುಡಿವ ನೀರು ಪೂರೈಸಲಾಗುತ್ತದೆ. ಕುಡಿವ ನೀರಿನ ಸಮಸ್ಯೆ ತಲೆದೋರದಂತಹ ರೀತಿಯಲ್ಲಿ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡಲಾಗುತ್ತದೆ ಎನ್ನಲಾಗುತ್ತಿದೆ.

ಆದರೆ, ಬಳ್ಳಾರಿ ನಗರಕ್ಕೆ ಅಂದಾಜು 70 ಕಿ.ಮೀ. ದೂರದಲ್ಲಿ ತುಂಗಭದ್ರಾ ಜಲಾಶಯವಿದೆ. ಜತೆಗೆ ನೀರು ಸಂಗ್ರಹಿಸಲು ನಗರದಲ್ಲಿ ಬೃಹದಾಕಾರದ ಎರಡು ಕೆರೆಗಳಿದ್ದು, ಅವುಗಳಲ್ಲಿ ಸದ್ಯ ಸಮರ್ಪಕ ನೀರೂ ಸಂಗ್ರಹವಿದೆ. ಆದರೂ, ಜನರಿಗೆ ಮಾತ್ರ ಕನಿಷ್ಠ ವಾರಕ್ಕೊಮ್ಮೆ ನೀರು ಸರಬರಾಜು  ಮಾಡುವಲ್ಲಿ ಪಾಲಿಕೆ ವಿಫಲವಾಗಿದೆ. ಜಿಲ್ಲಾ ಕೇಂದ್ರದಲ್ಲೇ ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ, ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನದಿರುವುದು ವಿಪರ್ಯಾಸ.

ಪ್ರಸಕ್ತ ವರ್ಷ ನಿರೀಕ್ಷಿತ ಪ್ರಮಾಣಕ್ಕಿಂತಲೂ ಹೆಚ್ಚು ಮಳೆಯಾಗಿದ್ದು, ಜಲಾಶಯದಲ್ಲೂ ನೀರು ಸಂಗ್ರಹವಾಗುತ್ತಿದೆ. ನಗರದ ಬಹುತೇಕ ಬಡಾವಣೆಗಳಿಗೆ ನೀರು ಪೂರೈಸುವ ಅಲ್ಲೀಪುರ ಕೆರೆಯ ನೀರಿನ ಸಂಗ್ರಹ ಸಾಮರ್ಥ್ಯ 8 ಮೀಟರ್‌ ಇದ್ದು, ಅದರಲ್ಲಿ 7.50 ಮೀಟರ್‌ ವರೆಗೂ ನೀರು ಸಂಗ್ರಹಿಸಲು ಅವಕಾಶವಿದೆ. ಸದ್ಯ 2 ಮೀಟರ್‌ಗೂ ಹೆಚ್ಚು ನೀರು ಸಂಗ್ರಹವಿದ್ದು, ಮುಂದಿನ ಒಂದು ತಿಂಗಳು ಅಂದರೆ ಎಚ್‌ ಎಲ್‌ಸಿ ಕಾಲುವೆಗೆ ಜಲಾಶಯದಿಂದ ನೀರು ಹರಿಸುವವರೆಗೂ ಸಮರ್ಪಕವಾಗಿ ಕುಡಿವ ನೀರನ್ನು ಪೂರೈಸಬಹುದು. ಈ ಕೆರೆಯಿಂದ ಪ್ರತಿದಿನ 55 ಎಂಎಲ್‌ಡಿ ನೀರನ್ನು ಶುದ್ಧಗೊಳಿಸಿ ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. ಮುಂದಿನ ಅಂದಾಜು 30ಕ್ಕೂ ಹೆಚ್ಚು ದಿನಗಳವರೆಗೆ ನೀರು ಸರಬರಾಜು ಮಾಡಬಹುದು.

ಇನ್ನು ಮೋಕಾ ಕೆರೆಯಿಂದ ಪ್ರತಿದಿನ 15-20 ಎಂಎಲ್‌ಡಿ ನೀರನ್ನು ಶುದ್ಧಗೊಳಿಸಿ ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. ಕೆರೆಗಳಲ್ಲಿ ಸಮರ್ಪಕ ನೀರು ಇದ್ದರೂ, ವಿತರಣೆಯಲ್ಲಿ ಲೋಪಗಳಿರುವುದರಿಂದ ನಗರದ ಜನರು ಮಾತ್ರ ಕುಡಿವ ನೀರಿನ ಸಮಸ್ಯೆಯಿಂದ ಮುಕ್ತಗೊಳ್ಳುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.

Advertisement

ಬಳ್ಳಾರಿ ನಗರಕ್ಕೆ ಕುಡಿವ ನೀರು ಸರಬರಾಜು ಮಾಡುವ ಅಲ್ಲೀಪುರ, ಮೋಕಾ ಕೆರೆಯಿಂದ ಪ್ರತಿದಿನ 70 ರಿಂದ
75 ಎಂಎಲ್‌ಡಿ ನೀರನ್ನು ಸರಬರಾಜು ಮಾಡಿದರೂ, ಇಂದಿಗೂ ಹಳೆಯ ಪದ್ಧತಿಯನ್ನೇ ಅನುಸರಿಸುತ್ತಿರುವುದು
ಕುಡಿವ ನೀರಿನ ಸಮಸ್ಯೆಗೆ ಕಾರಣವಾಗಿದೆ. 

ಪ್ರತಿದಿನ ಅಥವಾ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ಕುರಿತು ಹೊಸ ಪದ್ಧತಿಗಳ ಬಗ್ಗೆ ಯಾರೊಬ್ಬರೂ ಚಿಂತನೆ ನಡೆಸುತ್ತಿಲ್ಲ. ನೀರು ಸರಬರಾಜಿನಲ್ಲಿರುವ ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಯಾರೊಬ್ಬರೂ ಚಿಂತನೆ ನಡೆಸುತ್ತಿಲ್ಲ. ರೈಸಿಂಗ್‌ ಪೈಪ್‌, ಒಎಚ್‌ಟಿ ಟ್ಯಾಂಕ್‌ಗಳಿಗೆ ಲೀಕೇಜ್‌ ಸಮಸ್ಯೆಯಿಂದಾಗಿ
ಅವು ಬಳಕೆಯಾಗುತ್ತಿಲ್ಲ. ಇದರಿಂದ ಬೆಳೆಯುತ್ತಿರುವ ನಗರದಲ್ಲಿ ಬಡಾವಣೆಗಳು ವಿಸ್ತಾರಗೊಂಡಿದ್ದು, ಒಂದು ಬಡಾವಣೆಗೆ ಸುಮಾರು 5-6 ತಾಸು ಅಥವಾ ಒಂದು ದಿನ, ಒಂದು ರಾತ್ರಿ ಕಾಲ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ನೀರು ಪೋಲಾಗುವುದೇ ಹೆಚ್ಚಾಗಿದೆ.  ಅಲ್ಲದೇ, ನಗರದಲ್ಲಿ ಕಟ್ಟಡ ನಿರ್ಮಾಣಕ್ಕೂ
ಅಕ್ರಮ ಸಂಪರ್ಕಗಳನ್ನು ಪಡೆದು ಕುಡಿವ ನೀರನ್ನೇ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿದ್ದು,
ಅಧಿಕಾರಿಗಳು, ಜನಪ್ರತಿನಿಧಿಗಳು ಗೊತ್ತು ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಈಡೇರದ ಶಾಸಕರ ಭರವಸೆ ಚುನಾವಣಾ ಪೂರ್ವದಲ್ಲಿ ನಗರದ ಜನರಿಗೆ ಕೊಟ್ಟಿದ್ದ ಮಾತಿನಂತೆ ಇತ್ತೀಚೆಗೆ ಅಲ್ಲೀಪುರ ಕೆರೆಗೆ ಭೇಟಿ ನೀಡಿದ್ದ ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ಸಂಬಂಧಪಟ್ಟ ಪಾಲಿಕೆ, ಜಲಮಂಡಳಿ ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರತಿ ಐದು ದಿನಕ್ಕೊಮ್ಮೆ ಕುಡಿವ ನೀರು ಪೂರೈಸುವುದಾಗಿ ಭರವಸೆ ನೀಡಿದ್ದರು. ಇದರಿಂದ ನಗರದ ಜನರೂ ಕುಡಿವ ನೀರಿನ ಸಮಸ್ಯೆ ಬಗೆಹರಿಯಬಹುದು ಎಂದು ಭಾವಿಸಿದ್ದರು. ಆದರೆ, ಶಾಸಕರು ಭರವಸೆ ನೀಡಿ ತಿಂಗಳಾಗುತ್ತಿದ್ದರೂ, ಸಮಸ್ಯೆ ಮಾತ್ರ ಇತ್ಯರ್ಥವಾಗಿಲ್ಲ. ಇಂದಿಗೂ 10-12 ದಿನಕ್ಕೊಮ್ಮೆ ಕುಡಿವ ನೀರು ಪೂರೈಸಲಾಗುತ್ತಿದೆ. ಹೀಗಾಗಿ ಇನ್ನಾದರೂ, ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ಕೈಗೊಂಡು ಕುಡಿವ ನೀರಿನ ಸಮಸ್ಯೆಯಿಂದ ಮುಕ್ತಗೊಳಿಸಬೇಕಾಗಿದೆ.

24ಗಿ7ಯೋಜನೆ ಮತ್ತೆ ವಿಳಂಬ ನಗರಕ್ಕೆ ದಿನದ 24 ಗಂಟೆಯೂ ಕುಡಿವ ನೀರು ಪೂರೈಸುವ ಸಲುವಾಗಿ 24ಗಿ7
ಕುಡಿವ ನೀರಿನ ಯೋಜನೆ ಜಾರಿಗೆ ತರಲಾಗಿದ್ದು, ಕಳೆದ 2015ರಲ್ಲಿ ಕಾಮಗಾರಿ ಚಾಲನೆ ಪಡೆದುಕೊಂಡಿತ್ತು. 2017 ಆಗಸ್ಟ್‌ ತಿಂಗಳಿಗೆ ಪೂರ್ಣಗೊಳ್ಳಬೇಕಿದ್ದ ಈ ಯೋಜನೆ ಇದೀಗ ಪುನಃ ವಿಳಂಬವಾಗಿದ್ದು, 2018 ಡಿಸೆಂಬರ್‌ ತಿಂಗಳಲ್ಲಿ
ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಹೇಳುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಕುಡಿವ ನೀರಿನ ಸಮಸ್ಯೆ ಜೀವಂತವಾಗಿರಲು ಕಾರಣವಾಗಿದ್ದು, ನಂತರವಾದರೂ ಸಮಸ್ಯೆಯಿಂದ ಜನರು ಮುಕ್ತಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next