Advertisement

ಮೂರನೇ ಅಲೆ ತಪ್ಪಿಸಿ : ಅಕ್ಟೋಬರ್‌ ನಲ್ಲಿ ಹಾವಳಿ ಸಾಧ್ಯತೆ, ಎಳೆಯರೇ ಗುರಿ?

07:04 AM May 13, 2021 | Team Udayavani |

ಬೆಂಗಳೂರು : ಸದ್ಯ ಕೊರೊನಾ 2ನೇ ಅಲೆಯಿಂದ ಇಡೀ ದೇಶ ತತ್ತರಿಸುತ್ತಿರುವ ನಡುವೆಯೇ ಮೂರನೇ ಅಲೆಯ ಆತಂಕವೂ ಕಾಡತೊಡಗಿದೆ. ದೇಶದ ಹಿರಿಯ ವೈದ್ಯರು 3ನೇ ಅಲೆ ಬಗ್ಗೆ ಮುನ್ಸೂಚನೆ ನೀಡಿದ್ದು, ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ರಾಜ್ಯ ಹೈಕೋರ್ಟ್‌ ಕೂಡ 3ನೇ ಅಲೆ ಎದುರಿಸಲು ಎಲ್ಲ ವೈದ್ಯಕೀಯ ಮೂಲಸೌಕರ್ಯ ಹೆಚ್ಚಿಸುವಂತೆ ಸೂಚನೆ ನೀಡಿದೆ.

Advertisement

ತಜ್ಞರ ಪ್ರಕಾರ, ಇನ್ನು 3 ತಿಂಗಳುಗಳ ಒಳಗೆ 3ನೇ ಅಲೆ ಅಪ್ಪಳಿಸಲಿದೆ. ಮೊದಲ 2 ಅಲೆಗಳಲ್ಲಿ ಹೆಚ್ಚು ಸೋಂಕಿಗೊಳಗಾಗದ, ಲಸಿಕೆ ಪಡೆಯದ ಮಕ್ಕಳಿಗೆ ಕಾಡುವ ಅಪಾಯವಿದೆ ಎಂದು ವಿಶ್ಲೇಷಿಸಲಾಗಿದೆ.
2ನೇ ಅಲೆ ಜೂನ್‌ ಆಂತ್ಯಕ್ಕೆ ನಿಯಂತ್ರಣಕ್ಕೆ ಬರಲಿದ್ದು, ಅಕ್ಟೋಬರ್‌ ಅಂತ್ಯಕ್ಕೆ 3ನೇ ಅಲೆ ಆರಂಭವಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಯಾಕೆ ಮಕ್ಕಳು ಗುರಿ?
ಒಮ್ಮೆ ಸೋಂಕು ಬಂದವರಿಗೆ 2ನೇ ಬಾರಿ ಸೋಂಕು ತಗಲುವ ಪ್ರಮಾಣ ಶೇ. 5ರಷ್ಟು ಮಾತ್ರ. ವೈರಸ್‌ ರೋಗನಿರೋಧಕ ಶಕ್ತಿ ಕಡಿಮೆ ಇರುವವರನ್ನು ಕಾಡುತ್ತದೆ ಮತ್ತು ಒಂದು ಅಲೆಯಿಂದ ಮತ್ತೂಂದಕ್ಕೆ ಶಕ್ತಿಶಾಲಿಯಾಗುತ್ತದೆ. 2ನೇ ಅಲೆಯಲ್ಲಿ ವಯಸ್ಕರು ಗುರಿಯಾಗಿದ್ದಾರೆ. 3ನೇ ಅಲೆಯಲ್ಲಿ ವೈರಸ್‌ ಇನ್ನಷ್ಟು ಸಾಮರ್ಥ್ಯ ವೃದ್ಧಿಸಿಕೊಂಡು ಮಕ್ಕಳನ್ನು ಕಾಡುವ ಸಾಧ್ಯತೆಗಳಿವೆ ಎಂಬುದು ತಜ್ಞರ ಅಭಿಪ್ರಾಯ.

ಶೇ.1 ಮಕ್ಕಳಲ್ಲಿ ಮಾತ್ರ ತೀವ್ರತೆ
ಮೂರನೇ ಅಲೆ ಮಕ್ಕಳನ್ನು ಗುರಿಪಡಿಸಿದರೂ ಅವರಲ್ಲಿ ಸೋಂಕಿನ ತೀವ್ರತೆ ಸಾಕಷ್ಟು ಕಡಿಮೆ ಇರುತ್ತದೆ. ಶೇ. 1ರಷ್ಟು ಮಕ್ಕಳಿಗೆ ಮಾತ್ರ ಸೋಂಕು ಹೆಚ್ಚು ಹಾನಿ ಮಾಡಲಿದೆ. ಶೇ. 99ರಷ್ಟು ಮಂದಿ 2-3 ದಿನಗಳಲ್ಲಿ ಗುಣಮುಖರಾಗುತ್ತಾರೆ. ಆ ಸಂದರ್ಭದಲ್ಲಿ ಹೆಚ್ಚು ದ್ರವ ಆಹಾರ ಸೇವಿಸಬೇಕು, ಸೂಕ್ತ ಆರೈಕೆ ಬೇಕು. ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಕ್ರಮ, ಯೋಗ, ಪ್ರಾಣಾಯಾಮಗಳು ಮಕ್ಕಳನ್ನು ಸೋಂಕಿನಿಂದ ರಕ್ಷಿಸುತ್ತವೆ ಎಂದು ಮಕ್ಕಳ ತಜ್ಞ ಡಾ| ಪ್ರೀತ್‌ ಶೆಟ್ಟಿ ತಿಳಿಸಿದ್ದಾರೆ.

ಸಮಗ್ರ ಕಾರ್ಯ ಯೋಜನೆ ರೂಪಿಸಿ
ರಾಜ್ಯ ಹೈಕೋರ್ಟ್‌ 3ನೇ ಅಲೆಯ ಗಂಭೀರತೆಯ ಬಗ್ಗೆ ಮಾತನಾಡಿದೆ. ಇದನ್ನು ಸಮರ್ಥವಾಗಿ ಎದುರಿಸಲು ಸಮಗ್ರ ಕಾರ್ಯಯೋ ಜನೆ ರೂಪಿಸುವಂತೆ ಸರಕಾರಕ್ಕೆ ಸೂಚನೆ ನೀಡಿದೆ. 3ನೇ ಅಲೆಯ ವೇಳೆ ಈಗಿರುವಂಥ ಪರಿಸ್ಥಿತಿ ಆಗುವುದು ಬೇಡ. ಈಗಿನಿಂದಲೇ ಬೆಡ್‌, ಆಮ್ಲಜನಕ, ವೈದ್ಯಕೀಯ ಮೂಲ ಸೌಕರ್ಯ, ಸಿಬಂದಿ, ಔಷಧ ಮತ್ತಿತರ ಅಗತ್ಯ ಸೌಕರ್ಯ ಸಿದ್ಧಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ.

Advertisement

ನಾವೇನು ಮಾಡಬೇಕು?
– ಸದ್ಯದ ಮುನ್ನೆಚ್ಚರಿಕೆ ಡಿಸೆಂಬರ್‌ವರೆಗೆ ಪಾಲಿಸಿ.
– ವಯಸ್ಕರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು.
– ರೋಗನಿರೋಧಕ ಶಕ್ತಿ ಹೆಚ್ಚಿಸುವ ಜೀವನಕ್ರಮ ರೂಢಿಸಿಕೊಳ್ಳಬೇಕು.
– ಸಭೆ ಸಮಾರಂಭ, ಧಾರ್ಮಿಕ ಕಾರ್ಯಕ್ರಮ, ಉತ್ಸವ, ಜಾತ್ರೆ, ಮೇಳಗಳಿಂದ ಈ ವರ್ಷ ದೂರವಿರಬೇಕು.

ಸರಕಾರದ ಪಾತ್ರವೇನು?
ಮಕ್ಕಳಿಗೂ ಲಸಿಕೆ ನೀಡಬೇಕು. ಕೇಂದ್ರ ಸರಕಾರ ಈ ಬಗ್ಗೆ ಕಾರ್ಯೋನ್ಮುಖವಾಗಬೇಕು.
– ಗ್ರಾಮೀಣ ಆರೋಗ್ಯ ವ್ಯವಸ್ಥೆ ಬಲಪಡಿಸಿಕೊಳ್ಳಬೇಕು.
– ಮಕ್ಕಳ ಐಸಿಯು ವ್ಯವಸ್ಥೆ ಮಾಡಿಕೊಳ್ಳಬೇಕು.
– ನವೆಂಬರ್‌ ಒಳಗೆ ಮಕ್ಕಳ ಶೈಕ್ಷಣಿಕ ಚಟುವಟಿಕೆ ಪೂರ್ಣಗೊಳಿಸಿ, ಬಳಿಕ ವಿರಾಮ ನೀಡಿ.
– ಒಮ್ಮೆ ಎಲ್ಲದಕ್ಕೂ ಅನುಮತಿ ನೀಡದೆ, ಅನಾವಶ್ಯಕವೆನಿಸುವ ಕಡೆ ನಿರ್ಬಂಧಗಳನ್ನು ಸಾಧ್ಯವಾದಷ್ಟು ಮುಂದುವರಿಸಬೇಕು.

ಹಾಸಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಿ
ಬುಧವಾರದ ಮಾಹಿತಿಯಂತೆ ಆಮ್ಲಜನಕ ಸೌಲಭ್ಯದ 45,754 ಹಾಸಿಗೆ, 5,305 ಐಸಿಯು ಹಾಸಿಗೆ ಮತ್ತು 4,109 ವೆಂಟಿಲೇಟರ್‌ ಹಾಸಿಗೆ ಇವೆ. ಆದರೆ ರಾಜ್ಯದ ಸದ್ಯದ ಸ್ಥಿತಿಗೆ 66,333 ಆಮ್ಲಜನಕ ಹಾಸಿಗೆ, 13,960 ಐಸಿಯು ಹಾಸಿಗೆ ಮತ್ತು 3,882 ವೆಂಟಿಲೇಟರ್‌ ಹಾಸಿಗೆ ಬೇಕು. ಈ ಕೊರತೆ ನೀಗಿಸಲು ರೂಪುರೇಷೆ ಸಿದ್ಧಪಡಿಸುವಂತೆ ಹೈಕೋರ್ಟ್‌ ಆದೇಶಿಸಿದೆ.

ಎರಡನೇ ಅಲೆಯಿಂದ ಮೂರನೇ ಅಲೆಗೆ ನಾಲ್ಕು ತಿಂಗಳ ಅಂತರವಿದೆ. ನವೆಂಬರ್‌ – ಡಿಸೆಂಬರ್‌ನಲ್ಲಿ ಅದು ಬರಲಿದೆ. ಆ ವೇಳೆ ಬಹುತೇಕ ಹಿರಿಯರು, ವಯಸ್ಕರು ಲಸಿಕೆ ಪಡೆಯುವುದರಿಂದ, ಅನೇಕರಿಗೆ ಸೋಂಕು ಬಂದು ಹೋಗಿರುವುದರಿಂದ ಮಕ್ಕಳದು ದುರ್ಬಲ ವರ್ಗವಾಗಿರುತ್ತದೆ. ಮಕ್ಕಳ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು.
– ಡಾ| ಸಿ.ಎನ್‌. ಮಂಜುನಾಥ್‌, ನಿರ್ದೇಶಕರು, ಜಯದೇವ ಹೃದ್ರೋಗ ಸಂಶೋಧನ ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next