Advertisement

ಮಿಂಚಿದ ಫಿಂಚ್‌, ಮ್ಯಾಕ್ಸ್‌ ವೆಲ್‌, ಅಗರ್‌; ಗೆಲುವಿನ ಖಾತೆ ತೆರೆದ ಆಸ್ಟ್ರೇಲಿಯ

11:24 PM Mar 03, 2021 | Team Udayavani |

ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡ್‌ ಎದುರಿನ ತೃತೀಯ ಟಿ20 ಪಂದ್ಯದಲ್ಲಿ ಆರನ್‌ ಫಿಂಚ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಸ್ಫೋಟಕ ಬ್ಯಾಟಿಂಗ್‌ ಹಾಗೂ ಆ್ಯಶನ್‌ ಅಗರ್‌ ಅವರ ಘಾತಕ ಬೌಲಿಂಗ್‌ ದಾಳಿಯ ನೆರವಿನಿಂದ ಆಸ್ಟ್ರೇಲಿಯ ಗೆಲುವಿನ ಖಾತೆ ತೆರೆದಿದೆ. 5 ಪಂದ್ಯಗಳ ಸರಣಿಯೀಗ ಜೀವಂತವಾಗಿ ಉಳಿದಿದೆ.

Advertisement

ಬುಧವಾರ ವೆಲ್ಲಿಂಗ್ಟನ್‌ ಅಂಗಳದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 4 ವಿಕೆಟಿಗೆ 208 ರನ್‌ ಪೇರಿಸಿತು. ಜವಾಬಿತ್ತ ನ್ಯೂಜಿಲ್ಯಾಂಡ್‌ 17.1 ಓವರ್‌ಗಳಲ್ಲಿ 144ಕ್ಕೆ ಆಲೌಟ್‌ ಆಯಿತು. ಮೊದಲೆರಡು ಪಂದ್ಯಗಳಲ್ಲಿ ಕಿವೀಸ್‌ ಜಯ ಸಾಧಿಸಿತ್ತು.

ಬಹಳ ಸಮಯದಿಂದ ಬ್ಯಾಟಿಂಗ್‌ ಬರಗಾಲ ಅನುಭವಿಸುತ್ತಿದ್ದ ನಾಯಕ ಆರನ್‌ ಫಿಂಚ್‌ ಇಲ್ಲಿ ಈ ವೈಫ‌ಲ್ಯವನ್ನು ಹೊಡೆದೋಡಿಸಿ 44 ಎಸೆತಗಳಿಂದ 69 ರನ್‌ ಸಿಡಿಸಿದರು (8 ಬೌಂಡರಿ, 2 ಸಿಕ್ಸರ್‌).

ಐಪಿಎಲ್‌ನಲ್ಲಿ ದೊಡ್ಡ ಮೊತ್ತಕ್ಕೆ ಹರಾಜಾಗಿ ಅಚ್ಚರಿ ಹುಟ್ಟಿಸಿದ್ದ ಮ್ಯಾಕ್ಸ್‌ವೆಲ್‌ ಬರೀ 31 ಎಸೆತ ಎದುರಿಸಿ 70 ರನ್‌ ಬಾರಿಸಿದರು. 5 ಭರ್ಜರಿ ಸಿಕ್ಸರ್‌, 8 ಬೌಂಡರಿ ಸಿಡಿಸಿ ಟೀಕಾಕಾರರಿಗೆ ಬ್ಯಾಟಿನ ಮೂಲಕವೇ ಜವಾಬಿತ್ತರು. ಕೊನೆಯ 9 ಎಸೆತಗಳಲ್ಲಿ ಮ್ಯಾಕ್ಸಿ ಸಿಡಿಸಿದ್ದು ಭರ್ತಿ 40 ರನ್‌. ನೀಶಮ್‌ ಅವರ ಒಂದೇ ಓವರಿನಲ್ಲಿ 28 ರನ್‌ ಸೂರೆಗೈದರು.

ಚೇಸಿಂಗಿಗೆ ಇಳಿದ ಕಿವೀಸ್‌ಗೆ ಎಡಗೈ ಸ್ಪಿನ್ನರ್‌ ಆ್ಯಶrನ್‌ ಅಗರ್‌ ಸಿಂಹಸ್ವಪ್ನರಾದರು. ಅವರು 30 ರನ್ನಿಗೆ 6 ವಿಕೆಟ್‌ ಕಿತ್ತು ಜೀವನಶ್ರೇಷ್ಠ ಸಾಧನೆಗೈದರು.

Advertisement

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯ- 4 ವಿಕೆಟಿಗೆ 208 (ಮ್ಯಾಕ್ಸ್‌ವೆಲ್‌ 70, ಫಿಂಚ್‌ 69, ಸೋಧಿ 32ಕ್ಕೆ 2). ನ್ಯೂಜಿಲ್ಯಾಂಡ್‌-17.1 ಓವರ್‌ಗಳಲ್ಲಿ 144 (ಗಪ್ಟಿಲ್‌ 43, ಕಾನ್ವೆ 38, ಅಗರ್‌ 30ಕ್ಕೆ 6, ಮೆರೆಡಿತ್‌ 24ಕ್ಕೆ 2). ಪಂದ್ಯಶ್ರೇಷ್ಠ: ಆ್ಯಶrನ್‌ ಅಗರ್‌.

ಮ್ಯಾಕ್ಸ್‌ವೆಲ್‌ ಸಿಕ್ಸರ್‌ ಮಹಿಮೆ; ಮುರಿದ ಕುರ್ಚಿ ಹರಾಜಿಗೆ!
ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಅವರ ಸಿಕ್ಸರ್‌ ಮತ್ತೆ ಸುದ್ದಿಗೆ ಬಂದಿದೆ. ಬುಧವಾರದ ಟಿ20 ಪಂದ್ಯದ ವೇಳೆ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ಮ್ಯಾಕ್ಸ್‌ವೆಲ್‌ ಸಿಕ್ಸರ್‌ಗಳ ಸುರಿಮಳೆಗೈದರು. ಇವರ ಒಂದು ಸಿಕ್ಸರ್‌ ಹೊಡೆತಕ್ಕೆ ಸ್ಟೇಡಿಯಂನಲ್ಲಿದ್ದ ಕುರ್ಚಿಯೊಂದು ಮುರಿದೇ ಹೋಯಿತು!

ಕೂಡಲೇ “ವೆಲ್ಲಿಂಗ್ಟನ್‌ ರೀಜನಲ್‌ ಸ್ಟೇಡಿಯಂ’ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇನ್‌ ಹಾರ್ಮನ್‌ ಒಂದು ಉಪಾಯ ಮಾಡಿದರು. ಈ ಮುರಿದ ಆಸನವನ್ನು ಹರಾಜು ಹಾಕಲು ನಿರ್ಧರಿಸಿದರು. ಇದರ ಮೇಲೆ ಮ್ಯಾಕ್ಸ್‌ವೆಲ್‌ ಅವರಿಂದ ಸಹಿಯನ್ನೂ ಹಾಕಿಸಿಕೊಂಡರು. ಈ ಕುರ್ಚಿ ಕೆಲವೇ ದಿನಗಳಲ್ಲಿ ಆನ್‌ಲೈನ್‌ ಮೂಲಕ ಹರಾಜಾಗಲಿದೆ. ಇದರ ಮೊತ್ತವನ್ನು “ವೆಲ್ಲಿಂಗ್ಟನ್‌ ಹೋಮ್‌ಲೆಸ್‌ ವುಮೆನ್ಸ್‌ ಟ್ರಸ್ಟ್‌’ ಸಹಾಯಾರ್ಥ ನಿಧಿಗೆ ನೀಡಲಾಗುವುದು ಎಂದು ಹಾರ್ಮನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next