ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತದ ಪದಕಗಳ ಸಂಖ್ಯೆ ಮೂರಕ್ಕೇರಿದೆ. 50 ಮೀ ರೈಫಲ್ 3 ಪೊಸಿಶನ್ ವಿಭಾಗದಲ್ಲಿ ಯುವ ಶೂಟರ್ ಸ್ವಪ್ನಿಲ್ ಕುಸಾಲೆ ಅವರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಬುಧವಾರದ ಅರ್ಹತಾ ಸುತ್ತಿನಲ್ಲಿ 7ನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದ್ದ ಸ್ವಪ್ನಿಲ್ ಗುರುವಾರ (ಆ 1) ನಡೆದ ಫೈನಲ್ ನಲ್ಲಿ ಮೂರನೇ ಸ್ಥಾನಿಯಾದರು.
ನೀಲಿಂಗ್ ಸುತ್ತಿನ ಬಳಿಕ 6ನೇ ಸ್ಥಾನದಲ್ಲಿದ್ದ ಸ್ವಪ್ನಿಲ್ ಮುಂದಿನ ಸುತ್ತಿನಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದರು. ಫೈನಲ್ ನಲ್ಲಿ ಒಟ್ಟು 451.4 ಅಂಕ ಸಂಪಾದಿಸಿ ಕಂಚಿನ ಪದಕ ಗೆದ್ದರು.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಮೂರನೇ ಕಂಚಿನ ಪದಕ ಗೆದ್ದಿದೆ. ಎಲ್ಲವೂ ಶೂಟರ್ ಗಳೇ ಗೆದ್ದಿರುವುದು ವಿಶೇಷ.
ಯಾರು ಈ ಸ್ವಪ್ನಿಲ್
29 ವರ್ಷದ ಸ್ವಪ್ನಿಲ್ ಕುಸಾಲೆ ಮಹಾರಾಷ್ಟ್ರ ದವರು. ಕೊಲ್ಹಾಪುರದಲ್ಲಿ ತೇಜಸ್ವಿನಿ ಸಾವಂತ್ ಅವರಿಂದ ತರಬೇತಿ ಪಡೆದಿದ್ದಾರೆ. ಇವರ ಮೊದಲ ಕೋಚ್ ದೀಪಾಲಿ ದೇಶಪಾಂಡೆ.
ಭೋಪಾಲ್ನಲ್ಲಿ ನಡೆದ ಕೊನೆಯ ಅರ್ಹತಾ ಸುತ್ತಿನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಪಡೆದ ಸ್ವಪ್ನಿಲ್, 2015ರ ಕುವೈಟ್ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನ 50 ಮೀ. ರೈಫಲ್ ಪ್ರೋನ್ 3 ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. 59ನೇ ಹಾಗೂ 61ನೇ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲೂ ಬಂಗಾರಕ್ಕೆ ಗುರಿ ಇರಿಸಿದ್ದಾರೆ. ಕಳೆದ ಏಷ್ಯಾಡ್ನಲ್ಲಿ 4ನೇ ಸ್ಥಾನಕ್ಕೆ ಕುಸಿದು ಪದಕ ವಂಚಿತರಾಗಿದ್ದರು.
ಧೋನಿಯಂತೆ ಟಿಕೆಟ್ ಕಲೆಕ್ಟರ್!
ಕೊಲ್ಹಾಪುರ ಸಮೀಪದ ಕಂಬಲ್ವಾಡಿ ಗ್ರಾಮದ ಮಹಿಳಾ ಸರಪಂಚರೊಬ್ಬರ ಮಗನಾಗಿರುವ ಸ್ವಪ್ನಿಲ್ ಕುಸಾಲೆ ಒಲಿಂಪಿಕ್ಸ್ನ 50 ಮೀ. ರೈಫಲ್ 3 ಪೊಸಿಶನ್ನಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಶೂಟರ್. ಇವರಿಗೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯೇ ಸ್ಫೂರ್ತಿ. ಕಾಕತಾಳೀಯವೆಂಬಂತೆ ಧೋನಿ ಅವರಂತೆ ಸ್ವಪ್ನಿಲ್ ಕೂಡ ಆರಂಭದ ದಿನಗಳಲ್ಲಿ ರೈಲ್ವೇ ಟಿಕೆಟ್ ಕಲೆಕ್ಟರ್ ಆಗಿದ್ದರು. 2015ರಲ್ಲಿ ಅವರು ಸೆಂಟ್ರಲ್ ರೈಲ್ವೇ ಉದ್ಯೋಗಿಯಾಗಿದ್ದರು.
ಧೋನಿ ಅವರ ಜೀವನಕಥನವನ್ನು ಅನೇಕ ಸಲ ವೀಕ್ಷಿಸಿದ ಸ್ವಪ್ನಿಲ್ ಮೇಲೆ ಈ ಚಾಂಪಿಯನ್ ಕ್ರಿಕೆಟಿಗ ಗಾಢ ಪ್ರಭಾವ ಬೀರಿದ್ದರು. ಆದರೆ, 2012ರಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಣಿಸಿಕೊಂಡರೂ ಒಲಿಂಪಿಕ್ಸ್ ಪ್ರವೇಶಕ್ಕಾಗಿ ಮತ್ತೆ 12 ವರ್ಷ ಕಾಯಬೇಕಾಯಿತು.
“ನಾನು ಶೂಟಿಂಗ್ನಲ್ಲಿ ಯಾರನ್ನೂ ಅನುಸರಿಸಿಲ್ಲ. ಅದರಾಚೆ ಹೇಳುವುದಾದರೆ ಧೋನಿ ನನ್ನ ಅಚ್ಚುಮೆಚ್ಚು ಹಾಗೂ ಸ್ಫೂರ್ತಿ. ಅವರ ಶಾಂತ ಸ್ವಭಾವ ನನಗಿಷ್ಟ. ಅವರ ಲೈಫ್ಸ್ಟೋರಿಯಿಂದ ಗಾಢ ಪ್ರಭಾವಿತನಾಗಿದ್ದೇನೆ. ಅವರಂತೆ ನಾನು ಕೂಡ ರೈಲ್ವೇಯಲ್ಲಿ ಟಿಕೆಟ್ ಕಲೆಕ್ಟರ್ ಆಗಿ ದುಡಿದಿದ್ದೆ” ಎಂಬುದಾಗಿ ಸ್ವಪ್ನಿಲ್ ಹೇಳಿದರು.
ಪ್ಯಾರಿಸ್ನಲ್ಲಿ ರಾಷ್ಟ್ರೀಯ ಕೋಚ್ ಮನೋಜ್ ಕುಮಾರ್ ಒಹ್ಲಿಯಾನ್ ಅವರು ಸ್ವಪ್ನಿಲ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ.