Advertisement
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಶೇಷವಾಗಿ ಲೈಂಗಿಕ ಅಲ್ಪ ಸಂಖ್ಯಾತರಿಗೆ ಸರ್ಕಾರಿ ಸವಲತ್ತುಗಳನ್ನು ಒದಗಿಸುವ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಒಂದು ಹಂತದಲ್ಲಿ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡುವ ಕುರಿತು ಸಭೆಯಲ್ಲಿ ಪ್ರಸ್ತಾಪವಾಯಿತಾದರೂ, ಮೊದಲು ಪ್ರತ್ಯೇಕ ನೀತಿಯನ್ನು ಜಾರಿಗೊಳಿಸಿ, ಅಗತ್ಯ ಕಾನೂನು ರೂಪಿಸಿ ಮೀಸಲಾತಿ ಸೌಲಭ್ಯವನ್ನು ಜಾರಿಗೊಳಿಸುವ ನಿರ್ಧಾರಕ್ಕೆ ಸಂಪುಟ ಸಭೆ ಬಂದಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.
Related Articles
Advertisement
ಮಂಗಳ ಮುಖಿಯರಿಗೆ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಲು ಶಿಷ್ಯವೇತನ ನೀಡುವುದು. ಆರೋಗ್ಯ ಸೇವೆ ಪಡೆಯಲು ಕಾರ್ಡ್ ನೀಡುವುದು ಅಲ್ಲದೇ ಸರ್ಕಾರದ ಎಲ್ಲ ಸವಲತ್ತುಗಳು ಅವರಿಗೆ ದೊರೆಯುವಂತೆ ಕ್ರಮ ಕೈಗೊಳ್ಳಲು ನೂತನ ನೀತಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಮಂಗಳಮುಖಿಯರ ಶ್ರೇಯೋಭಿವೃದ್ಧಿಗಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆ ಅಡಿಯಲ್ಲಿ ಪ್ರತ್ಯೇಕ ನಿರ್ದೇಶನಾಲಯ ತೆರೆಯುವುದು. ಜಿಲ್ಲಾ ಮಟ್ಟದಲ್ಲಿ ಕೌನ್ಸೆಲಿಂಗ್ ಕೇಂದ್ರಗಳನ್ನು ತೆರೆದು ಅವರಿಗೆ ಮನೋಸ್ಥೈರ್ಯ ತುಂಬುವ ಕಾರ್ಯ ಮಾಡಲು ನೂತನ ನೀತಿಯಲ್ಲಿ ತಿಳಿಸಲಾಗಿದೆ.
ಮಂಗಳ ಮುಖಿಯರ ಶ್ರೇಯೋಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸ್ವ ಸಹಾಯ ಸಂಘಗಳ ರಚನೆ ಮಾಡುವುದು. ಸಾರಿಗೆ ಇಲಾಖೆ ಚಾಲನಾ ಪರವಾನಗಿಯನ್ನು ನೀಡುವುದು. ಕಾರ್ಮಿಕ ಇಲಾಖೆ ಮಂಗಳ ಮುಖಿಯರಿಗೆ ಆಭರಣ ತೈಯಾರಿಕೆ, ಹೊಲಿಗೆ, ಪ್ರಸಾದನ, ಕಲೆ ಮುಂತಾದ ತರಬೇತಿ ನೀಡಿ ಸ್ವಯಂ ಉದ್ಯೋಗ ಕೈಗೊಳ್ಳಲು ನೆರವು ನೀಡುವುದು. ಅಲ್ಲದೇ ಪ್ರತಿ ಐಟಿಐಗಳಲ್ಲಿ 5 ಸ್ಥಾನಗಳನ್ನು ಮಂಗಳ ಮುಖಿಯರಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ಐಐಟಿ ಮತ್ತು ಪಾಲಿಟೆಕ್ನಿಕ್ ಕೋರ್ಸ್‌ಗಳಲ್ಲಿಯೂ ಐದು ಸ್ಥಾನ ಮೀಸಲಿಡುವಂತೆ ಹೊಸ ನೀತಿಯಲ್ಲಿ ಸೇರಿಸಲಾಗಿದೆ.
ವಿಶೇಷ ಘಟಕ ಸ್ಥಾಪನೆಮಂಗಳ ಮುಖಿಯರನ್ನು ಮುಖ್ಯವಾಹಿನಿಗೆ ತರಲು ವಿಶೇಷ ಘಟಕ ಸ್ಥಾಪನೆ ಮಾಡುವ ಕುರಿತು ಸಂಪುಟ ತೀರ್ಮಾನಿಸಿದೆ. ಆದರೆ, ಹಣಕಾಸು ಇಲಾಖೆ ಹೊಸ ನೀತಿ ಜಾರಿಗೆ ತರಬೇಕಾದರೆ, ಹೊಸದಾಗಿ ಯಾವುದೇ ಹುದ್ದೆ ಸೃಷ್ಟಿ ಮಾಡದೇ, ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಸೃಜಿಸಿರುವ ಹುದ್ದೆಗಲ್ಲಿಯೇ ಹೊಸ ನೀತಿ ಜಾರಿಗೊಳಿಸಬೇಕೆಂದು ಹೇಳಿದೆ. ಕಾನೂನು ಇಲಾಖೆ ಈ ನೀತಿ ಕುರಿತು ಅಗತ್ಯ ಕಾನೂನು ತಿದ್ದುಪಡಿ ಮಾಡುವ ಬಗ್ಗೆ ಅಗತ್ಯವಿದೆ ಎಂದಿದ್ದು, ಮಂಗಳ ಮುಖೀಯರಿಗೆ ಸಂಬಂಧಿಸಿದ ಕೆಲವು ಕಾನೂನುಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಅದನ್ನು ತಿದ್ದುಪಡಿ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಕಾನೂನು ಇಲಾಖೆ ಮುಂದಾಗಿದೆ. ಲೈಂಗಿಕ ಅಲ್ಪ ಸಂಖ್ಯಾತರಿಗೆ ಸಮಾಜದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಅಲ್ಲದೇ ಅವರನ್ನು ಕೀಳು ಮಟ್ಟದಿಂದ ನೋಡಲಾಗುತ್ತಿದೆ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಸಮಾಜದಲ್ಲಿ ಅವರೂ ಗೌರವಯುತವಾಗಿ ಬದುಕಲು. ಮತ್ತು ಸಮಾಜದ ಎಲ್ಲ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಳ್ಳಲು ಅನುಕೂಲವಾಗುವಂತಹ ನೀತಿಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.
– ಟಿ.ಬಿ. ಜಯಚಂದ್ರ, ಕಾನೂನು ಸಚಿವ.