ಹಾಸನ: ದೆಹಲಿಯಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ತೃತೀಯ ರಾಜಕೀಯ ಶಕ್ತಿಯ ಚರ್ಚೆ ನಡೆಯಲಿದೆ ಎಂದು ಜೆಡಿಎಸ್ ವರಿಷ್ಠ, ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು. ದೆಹಲಿಯಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ತೃತೀಯ ರಾಜಕೀಯ ಶಕ್ತಿಯ ಚರ್ಚೆ ನಡೆಯಲಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಾರಥ್ಯದಲ್ಲಿ ಸಭೆ ನಡೆಯಲಿದೆ. ಆದರೆ, ಸಭೆಯ ಕಾರ್ಯಸೂಚಿ, ಸಭೆಯಲ್ಲಿ ಯಾವ, ಯಾವ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂಬ ಬಗ್ಗೆ ತಮಗೆ ಮಾಹಿತಿಯಿಲ್ಲ. ಆದರೆ, ತಾವು ಸಭೆಯಲ್ಲಿ ಪಾಲ್ಗೊಳ್ಳುವುದು ಖಚಿತ ಎಂದರು.
ಕಳೆದ ನಾಲ್ಕೂವರೆ ವರ್ಷಗಳಲ್ಲಿ ಉತ್ತಮ ಸಾಧನೆ ಮಾಡಿದ ವಿಶ್ವಾಸವಿದ್ದರೆ ಚುನಾವಣೆ ಹೊಸ್ತಿಲಿನಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ವಿಷಯ ಪ್ರಸ್ತಾಪ ಮಾಡಿಕೊಂಡು ಜನರತ್ತ ಹೋಗುವ ಅಗತ್ಯವೇಕೆ ಕೇಂದ್ರ ಸರ್ಕಾರಕ್ಕೆ ಬರುತ್ತಿತ್ತು. ಚುನಾವಣೆ ಬಂದ ತಕ್ಷಣ ಬಿಜೆಪಿಯವರಿಗೆ ಶ್ರೀ ರಾಮ ಮಂದಿರ ವಿಷಯ ಧುತ್ತನೆ ಎದುರಾಗುತ್ತದೆ. ದಕ್ಷಿಣದಲ್ಲಿ ಶಬರಿಮಲೆ, ಉತ್ತರದಲ್ಲಿ ಶ್ರೀರಾಮನ ವಿಷಯವಷ್ಟೆ ಬಿಜೆಪಿಯವರಿಗೆ ಆಧಾರ. ಧರ್ಮದ ವಿಷಯದಲ್ಲಿ ರಾಜಕಾರಣ ಮಾಡಿ, ಲಾಭ ಮಾಡಿಕೊಳ್ಳುವ ಕಲೆಗಾರಿಕೆ ಬಿಜೆಪಿಗೆ ಗೊತ್ತಿದೆ ಎಂದು ಆಪಾದಿಸಿದರು.
“ನಾನು ಮುಖ್ಯಮಂತ್ರಿಯಾಗಿದ್ದಾಗ ಹುಬ್ಬಳಿಯ ಈದ್ಗಾ ಮೈದಾನ ವಿವಾದ ಬಗೆಹರಿಸಿದೆ. ನಂತರ, ದತ್ತಪೀಠ ವಿವಾದ ಶುರು ಮಾಡಿಕೊಂಡು ಚಿಕ್ಕಮಗಳೂರು ಮತ್ತು ಕರಾವಳಿ ಭಾಗದಲ್ಲಿ ಬಿಜೆಪಿಯವರು ರಾಜಕೀಯ ಲಾಭ ಮಾಡಿಕೊಂಡರು’ ಎಂದು ಹೇಳಿದರು. ನೋಟುಗಳ ಅಮಾನ್ಯದಿಂದ ಎಷ್ಟು ಕಪ್ಪು ಹಣ ಪತ್ತೆಯಾಯಿತು ಎಂಬುದು ಗೊತ್ತಿಲ್ಲ ಎಂದು ಆರ್‌ಬಿಐನವರೇ ಹೇಳುತ್ತಿದ್ದಾರೆ. ಇನ್ನು, ಸಿಬಿಐ ಘನತೆಯನ್ನೇ ಅವರು ಮುಗಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ವಿಧಾನಪರಿಷತ್ ಸಭಾಪತಿ ಆಯ್ಕೆಯ ಬಗ್ಗೆ ಚರ್ಚೆ ನಡೆದಿದೆ. ಆದರೆ, ಯಾವ ಪಕ್ಷದವರು ಸಭಾಪತಿಯಾಗಬೇಕು ಎಂಬುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಅದನ್ನು ಇತ್ಯರ್ಥಪಡಿಸುತ್ತೇವೆ. ಸಮನ್ವಯ ಸಮಿತಿಯಲ್ಲಿ ಚರ್ಚೆ ಆಗಿರುವಂತೆ ಡಿ.22ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಜೆಡಿಎಸ್ ಕಡೆಯಿಂದ ಸಂಪುಟ ವಿಸ್ತರಣೆಗೆ ಯಾವುದೇ ಅಡಚಣೆ ಇಲ್ಲ, ಆದರೆ, ಕಾಂಗ್ರೆಸ್‌ನಲ್ಲಿ ಸ್ವಲ್ಪ ಕಷ್ಟವಿದೆ. ಆ ಪಕ್ಷದ ಮುಖಂಡರು ಅದನ್ನು ನಿವಾರಿಸಲಿದ್ದಾರೆಂಬ ವಿಶ್ವಾಸವಿದೆ. ನಿಗಮ, ಮಂಡಳಿ ಅಧ್ಯಕ್ಷರ ನೇಮಕಾತಿಯೂ ನಡೆಯಲಿದೆ. ಜೆಡಿಎಸ್‌ಗೆ 10 ಹಾಗೂ ಕಾಂಗ್ರೆಸ್‌ಗೆ 20 ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಸಿಗಲಿದೆ. ಸಂಸದೀಯ ಕಾರ್ಯದರ್ಶಿಗಳ ನೇಮಕಾತಿಯೂ ನಡೆಯಲಿದೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ದಕ್ಷ ಆಡಳಿಗಾರ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಕ್ಷತೆಯಿಂದ ಆಡಳಿತ ನಡೆಸಿದ್ದಾರೆ. ಅವರ ಅಧಿಕಾರಾವಧಿಯಲ್ಲಿ 35ಸಾವಿರ ಕೋಟಿ ರೂ.ಅಕ್ರಮಕ್ಕೆ ಅವರು ಅವಕಾಶ ಕೊಟ್ಟಿಲ್ಲ ಎಂದು ದೇವೇಗೌಡ ಅಭಿಪ್ರಾಯಪಟ್ಟರು. ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡರು ಮಾಡಿರುವ ಅಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲೆಕ್ಕಪರಿಶೋಧನೆ (ಸಿಎಜಿ) ವರದಿಯಲ್ಲಿ ಕಠಿಣ ಪದ ಬಳಸಿರಬಹುದು. ಹಾಗೆಂದು ಭಾರೀ ಪ್ರಮಾಣದ ಅಕ್ರಮ ನಡೆದಿದೆ ಎಂದು ಹೇಳಲಾಗದು ಎಂದರು.
ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಹಿಡಿಯುವ ಅವಕಾಶ ಹೆಚ್ಚಿದೆ. ತೆಲಂಗಾಣದಲ್ಲಿ ಟಿಆರ್‌ಎಸ್‌ಗೆ ಮತ್ತೂಮ್ಮೆ ಅವಕಾಶ ಸಿಗುವ ಸಾಧ್ಯತೆಯಿದೆ. ಇನ್ನುಳಿದ ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇದೆ. ಐದೂ ರಾಜ್ಯಗಳಲ್ಲಿ ಯಾವುದಾದರೂ ಒಂದೇ ಪಕ್ಷಕ್ಕೆ ಬಹುಮತ ಬಂದರೆ ಮಾತ್ರ 2019ರ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ.
– ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.