Advertisement

ಕಡಬದಲ್ಲಿ ಮೂರನೇ ದಿನದ ಕಾರ್ಯಾಚರಣೆ ಯಶಸ್ವಿ; ಒಂದು ಕಾಡಾನೆ ಸೆರೆ

06:35 PM Feb 23, 2023 | Team Udayavani |

ಸುಬ್ರಹ್ಮಣ್ಯ: ಮೂರನೇ ದಿನದ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಸಂಜೆ ವೇಳೆ ಒಂದು ಕಾಡಾನೆಯನ್ನು ಕಾರ್ಯಾಚರಣೆ ತಂಡ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

Advertisement

ಕಡಬ ತಾಲೂಕಿನ ಐತ್ತೂರು ಗ್ರಾಮದ ಸುಂಕದಕಟ್ಟೆ ಬಳಿಯ ಮುಜೂರು, ಮಂಡೆಕರ ಭಾಗದಲ್ಲಿ ನಾಲ್ಕು ಕಾಡಾನೆ ಇದೆ ಎಂಬ ಮಾಹಿತಿಯಂತೆ ಕಾರ್ಯಾಚರಣೆ ತಂಡ ಪತ್ತೆ ಕಾರ್ಯ ನಡೆಸಿದ್ದರು. ಸುಂಕದಕಟ್ಟೆ-ಕೊಂಬಾರು ರಸ್ತೆಯ ಬಳಿ ಕಾಡಾನೆ ಇರುವುದನ್ನು ತಂಡ ಪತ್ತೆ ಹಚ್ಚಿ ವ್ಯವಸ್ಥಿತವಾಗಿ ಕಾಡಾನೆ ಇರುವಲ್ಲಿ ತೆರಳಿ ವೈದ್ಯರು ಗನ್ ಮೂಲಕ ಅರೆವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಬಳಿಕ ಆನೆಯ ಪ್ರಜ್ಞೆ ಹೋದ ಬಳಿಕ ಕಾಡಾನೆಯನ್ನು ಕಟ್ಟಿ ಹಾಕುವ ಕಾರ್ಯ ನಡೆಸಲಾಗಿದೆ. ಸಾಕಾನೆಗಳ ತಂಡ ಕಾಡಾನೆಯನ್ನು ಪಳಗಿಸಿ ಲಾರಿಗೆ ಹಾಕುವ ಕಾರ್ಯ ನಡೆಯಲಿದೆ ಎಂದು ತಿಳಿದುಬಂದಿದೆ.

ಸೋಮವಾರ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಬಲಿಯಾಗಿದ್ದರು. ಬಳಿಕ ಕಾಡಾನೆ ಸೆರೆಗೆ ಐದು ಸಾಕಾನೆಗಳನ್ನು ತರಿಸಲಾಗಿ, ಮಂಗಳವಾರದಿಂದ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿತ್ತು.

ನಿರ್ಬಂಧ
ಕಾಡಾನೆ ಸೆರೆ ಕಾರ್ಯಾಚರಣೆ ವೀಕ್ಷಣೆಗೆ ಜನರು ಸೇರುವುದರಿಂದ ಕಾರ್ಯಚರಣೆಗೆ ಅಡ್ಡಿಯಾಗುವುದರಿಂದ ಗುರುವಾರ ಕಾರ್ಯಾಚರಣೆ ಬಳಿ ಜನರಿಗೆ ನಿರ್ಬಂಧ ವಿಧಿಸಲಾಗಿತ್ತು, ಅಲ್ಲದೆ ಸುಂಕದಕಟ್ಟೆ-ಕೊಂಬಾರು ರಸ್ತೆಯಲ್ಲಿ ವಾಹನ ಓಡಾಟ ನಿರ್ಬಂಧಿಸಲಾಗಿತ್ತು. ಕಾಡಾನೆ ಸಾಗುವ ಹಾಗೂ ಕಾರ್ಯಚರಣೆ ನಡೆಯುವ ವ್ಯಾಪ್ತಿಯಲ್ಲಿ ಮೆಸ್ಕಾಂ ವತಿಯಿಂದ ಲೈನ್ ಕಡಿತ ಮಾಡುವ ಕಾರ್ಯ ಮಾಡುವ ಮೂಲಕ ಮುಂಜಾಗ್ರತೆ ವಹಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next