Advertisement

ತಿಂಥಣಿ ಮೌನೇಶ್ವರ ಜಾತ್ರೆ ಸಿದ್ಧತೆಗೆ ಸೂಚನೆ

01:27 PM Jan 23, 2020 | Naveen |

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕು ತಿಂಥಣಿ ಗ್ರಾಮದಲ್ಲಿ ಫೆಬ್ರವರಿ 3ರಿಂದ 8ರ ವರೆಗೆ ನಡೆಯುವ ಮೌನೇಶ್ವರ ದೇವಸ್ಥಾನದ ಜಾತ್ರೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಿಂಥಣಿ ಮೌನೇಶ್ವರ ದೇವಸ್ಥಾನದ ಜಾತ್ರೆ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾತ್ರೆಗೆ ರಾಜ್ಯದ ಹಲವು ಜಿಲ್ಲೆಗಳು ಹಾಗೂ ಬೇರೆ ರಾಜ್ಯಗಳ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಚರಂಡಿ ಮತ್ತು ಇನ್ನಿತರ ಸ್ಥಳಗಳಲ್ಲಿ ಬ್ಲೀಚಿಂಗ್‌ ಪೌಡರ್‌ ಹಾಕಿ ಸ್ವಚ್ಚತೆ ಕಾಪಾಡಬೇಕು. ಸಾರಿಗೆ ಬಸ್‌ಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ, ವಿದ್ಯುತ್‌, ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಈ ಬಗ್ಗೆ ಗ್ರಾಪಂ ಸಾಮಾನ್ಯ ಸಭೆ ಕರೆದು ನಿರ್ಣಯ ತೆಗೆದುಕೊಳ್ಳಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಎನ್‌. ಹಳ್ಳಿ ಅವರಿಗೆ ನಿರ್ದೇಶಿಸಿದರು.

ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಜಾತ್ರೆಯಲ್ಲಿ ಸ್ಥಾಪಿಸುವ ವಿವಿಧ ಅಂಗಡಿಗಳ ಮಾಲೀಕರು
ತಮ್ಮ ಅಂಗಡಿಗಳ ಪಕ್ಕದಲ್ಲಿ ಕಸದ ಬುಟ್ಟಿ ಇಟ್ಟುಕೊಳ್ಳಬೇಕು. ಯಾವುದೇ ತರಹದ
ತ್ಯಾಜ್ಯಗಳನ್ನು ಅದರಲ್ಲಿ ಹಾಕಿಸುವ ವ್ಯವಸ್ಥೆ ಮಾಡಬೇಕು. ಅಂಗಡಿಗಳ ಮಾಲೀಕರು ಸ್ವತ್ಛತೆ ಕಾಪಾಡದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಜಾತ್ರೆ ಸಮಯದಲ್ಲಿ ದೇವಸ್ಥಾನದ ಆವರಣದಲ್ಲಿ ಕೌಂಟರ್‌ ನಿರ್ಮಿಸಿ ಗಣಕಯಂತ್ರದ ಮೂಲಕ ಭಕ್ತರಿಗೆ ರಸೀದಿ ನೀಡಲು ಒಬ್ಬ ಸಿಬ್ಬಂದಿಯನ್ನು ನೇಮಿಸಲಾಗುವುದು. ಇದಕ್ಕಾಗಿ
ದೇವಸ್ಥಾನದ ನಿಧಿಯಿಂದ ಗೌರವ ಧನ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಭಕ್ತರು ಹೊಸದಾಗಿ ವಸತಿಗೃಹಗಳನ್ನು ಕಟ್ಟಿಸಲು ಮುಂದೆ ಬರುತ್ತಿರುವುದಾಗಿ
ದೇವಸ್ಥಾನ ಸಮಿತಿಯವರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಒಂದು ಕೋಣೆ ನಿರ್ಮಾಣಕ್ಕೆ ತಗುಲುವ ವೆಚ್ಚವನ್ನು ವಿವಿಧ ತಾಂತ್ರಿಕ ಇಲಾಖೆ ಅಧಿಕಾರಿಗಳೊಂದಿಗೆ
ಚರ್ಚಿಸಿ 2 ಲಕ್ಷ ರೂ. ನಿಗದಿಪಡಿಸಿದರು.

Advertisement

ಜಾತ್ರೆ ಸಮಯದಲ್ಲಿ ಮಾಂಸ, ಮದ್ಯ ಮಾರಾಟ ನಿಷೇಧಿಸಬೇಕು. ಯಾವುದೇ
ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್‌ ಇಲಾಖೆ ಅಗತ್ಯ ಮುಂಜಾಗ್ರತೆ ವಹಿಸಬೇಕು.
ದೇವಸ್ಥಾನ ಆವರಣ, ನದಿ ದಂಡೆ ಹಾಗೂ ಬಸ್‌ ನಿಲುಗಡೆ ಸ್ಥಳದಲ್ಲಿ ಜನದಟ್ಟಣೆ ಹೆಚ್ಚಾಗಿರುತ್ತದೆ. ಜನದಟ್ಟಣೆ ನಿಯಂತ್ರಿಸಲು ಸೂಕ್ತ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಜಾತ್ರೆಯಲ್ಲಿ ಮಕ್ಕಳು ತಪ್ಪಿಸಿಕೊಂಡಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿ ಪೋಷಕರಿಗೆ ಒಪ್ಪಿಸುವ ಜವಾಬ್ದಾರಿಯನ್ನು ಪೊಲೀಸ್‌ ಮತ್ತು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ವಹಿಸಿದರು.

ಜಾತ್ರೆ ಮುಗಿಯುವವರೆಗೆ ತುರ್ತು ಆರೋಗ್ಯ ಸೇವೆಗಳಿಗಾಗಿ ತಾಲೂಕು ಆರೋಗ್ಯ
ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಉಚಿತ ಆರೋಗ್ಯ ತಪಾಸಣೆ ಶಿಬಿರ,
ರಕ್ತದಾನ ಶಿಬಿರ ಆಯೋಜಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, 108 ಆಂಬುಲೆನ್ಸ್‌ ಮತ್ತು ಅಗ್ನಿಶಾಮಕ ದಳದ ವಾಹನ ಸ್ಥಳದಲ್ಲಿರಬೇಕು ಎಂದು ಸೂಚಿಸಿದರು.

ದೇವಸ್ಥಾನದ ನದಿ ತೀರದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿ ವತಿಯಿಂದ ನಿರ್ಮಿಸಿದ ಸ್ನಾನ
ಘಟ್ಟ ಉತ್ತಮವಾಗಿದೆ. ಇದು ಶಾಶ್ವತವಾಗಿ ಉಳಿಯುವಂತೆ ನೋಡಿಕೊಳ್ಳಲು ಇದರ ಮೇಲೆ ಕಾಂಕ್ರಿಟ್‌ ಮಾಡಿಸಲು ಟೆಂಡರ್‌ ಕರೆಯಲಾಗಿದೆ. ಭಕ್ತರಿಗೆ ಕುಡಿಯುವ ನೀರಿನ ತೊಂದರೆ ಆಗಬಾರದು. ಈ ನಿಟ್ಟಿನಲ್ಲಿ ವಿವಿಧ ಸ್ಥಳಗಳಲ್ಲಿ ನೀರಿನ ಟ್ಯಾಂಕರ್‌ ನಿಲ್ಲಿಸಿ ಭಕ್ತರಿಗೆ ಕುಡಿಯುವ ನೀರು ಕಲ್ಪಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಭಗವಾನ್‌ ಸೋನವಣೆ ಮಾತನಾಡಿ, ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ಜಾತ್ರೆ ನಡೆಯುವ ಸ್ಥಳ, ದೇವಸ್ಥಾನ ಆವರಣ, ಬಸ್‌ ನಿಲುಗಡೆ ಸ್ಥಳ, ನದಿ ದಂಡೆ ಹಾಗೂ ಇತರೆ ಪ್ರದೇಶಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ಪೊಲೀಸ್‌
ಸಿಬ್ಬಂದಿಯನ್ನು ನೇಮಿಸಲಾಗುವುದು. ಜಾತ್ರೆ ಆವರಣದವರೆಗೆ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದರೆ ಭಕ್ತರಿಗೆ ತೊಂದರೆಯುಂಟಾಗುತ್ತದೆ. ಹಾಗಾಗಿ,
ದೇವಸ್ಥಾನದಿಂದ 1 ಕಿಮೀ ದೂರದಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಬಾಲ ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುವೀರ್‌ಸಿಂಗ್‌
ಠಾಕೂರ್‌ ಸಭೆಯ ನಡಾವಳಿ ಓದಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್‌. ಸೋಮನಾಳ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೋಗೇರಿ, ತಾಪಂ ಇಒ ಅಮರೇಶ, ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಹಣಮಂತಪ್ಪ, ಜೆಸ್ಕಾಂ ಎಇಇ ಈರಣ್ಣ, ದೇವಸ್ಥಾನ ಸಮಿತಿ ಸದಸ್ಯರಾದ ಸಣ್ಣಮಾನಯ್ಯ ಬಂಡೊಳ್ಳಿ,
ಗಂಗಾಧರ ನಾಯಕ, ಹಣಮಂತ ತಿಂಥಣಿ, ಬಸವರಾಜ ದೊಡ್ಡಮನಿ, ಚಿನ್ನಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next