Advertisement

ಪಟ್ಟಣದ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಚಿಂತನೆ

07:36 AM Feb 26, 2019 | |

ಚನ್ನರಾಯಪಟ್ಟಣ: ಪಟ್ಟಣದ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಮೈತ್ರಿ ಸರ್ಕಾರದಿಂದ 40 ಕೋಟಿ ರೂ. ಅನುದಾನ ತರಲಾಗುವುದು ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ಭರವಸೆ ನೀಡಿದರು. ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

13 ವರ್ಷದ ಹಿಂದೆ 100 ಹಾಸಿಗೆ ಆಸ್ಪತ್ರೆಯನ್ನಾಗಿ ಅಭಿವೃದ್ಧಿ ಪಡಿಸಲಾಗಿತ್ತು. ಈಗ ಪ್ರತಿನಿತ್ಯ 700 ರಿಂದ 900 ಮಂದಿ ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿರುವುರಿಂದ ಮೇಲ್ದರ್ಜೆಗೇರಿಸುವುದು ಅನಿವಾರ್ಯವಾಗಿದೆ. ಈಗಾಗಲೇ ಮುಖ್ಯ ಮಂತ್ರಿಯೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.

ಆರೋಗ್ಯ ಕೇಂದ್ರಗಳ ಅಭಿವೃದ್ಧಿ: 50 ಲಕ್ಷ ರೂ. ವೆಚ್ಚದಲ್ಲಿ ತಾತ್ಕಾಲಿಕವಾಗಿ ಅಭಿವೃದ್ಧಿ ಮಾಡಲಾಗಿದೆ. ಅಕ್ಕನಹಳ್ಳಿ ಆಸ್ಪತ್ರೆ 1.50 ಕೋಟಿ ರೂ.ಗಳಲ್ಲಿ ನಿರ್ಮಾಣ ಮಾಡಲಾಗುವುದು, ನವಿಲೆ ಆಸ್ಪತ್ರೆ 1.65 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಬೊಳಗಟ್ಟೆ, ಶ್ರೀನಿವಾಸಪುರ ಹಾಗೂ ಬಾಗೂರು ಗ್ರಾಮದಲ್ಲಿನ ಆಸ್ಪತ್ರೆ ಕಟ್ಟಡ ಶಿಥಿಲಗೊಂಡಿರುವುದರಿಂದ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು.

ಹಿರೀಸಾವೆ ಆಸ್ಪತ್ರೆಯ ದಂತವೈದ್ಯ ಸ್ಥಳೀಯರಾಗಿದ್ದು ವಾರಕ್ಕೆ 4 ದಿವಸ ಸೇವೆ ಸಲ್ಲಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಕ್ರಮಕ್ಕೆ ಮುಂದಾಗಬೇಕು ಎಂದರು.

ಆ್ಯಂಬುಲೆನ್ಸ್‌ ಸೇವೆ ನೀಡಿ: ಹಿರೀಸಾವೆಗೆ ಆ್ಯಂಬುಲೆನ್ಸ್‌ ಅವಶ್ಯವಿದೆ. ಈಬಗ್ಗೆ ಜಿಲ್ಲಾ ಮಂತ್ರಿ ರೇವಣ್ಣ ಅವರ ಗಮನಕ್ಕೆ ತರಲಾಗುವುದು. ಚನ್ನರಾಯಪಟ್ಟಣ ಶವಗಾರ ಶಿಥಿಲವಾಗಿದೆ ರಿಪೇರಿ ಮಾಡಿಸಲಾಗುವುದು. ಹಿರೀಸಾವೆ ಹೋಬಳಿ ಕೇಂದ್ರದಲ್ಲಿ ಶವಗಾರ ನಿರ್ಮಾಣ ಮಾಡಲಾಗುವುದು.

Advertisement

ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಅಪಘಾತ ಸಂಖ್ಯೆ ಹೆಚ್ಚುತ್ತಿದ್ದು ಶವಾಗಾರದ ಅಗತ್ಯವಿದೆ ಎಂದು ಹೇಳಿದರು. ಆಡಳಿತ ವೈದ್ಯಾಧಿಕಾರಿ ಡಾ. ಮಹೇಶ್‌ ಮಾತನಾಡಿ, ಶಾಸಕರ ಮುತುವರ್ಜಿಯಿಂದ ತಾಲೂಕು ಕೇಂದ್ರದ ಆಸ್ಪತ್ರೆಗೆ 40 ಲಕ್ಷಗಳ ಉತ್ತಮ ಪರಿಕರಗಳು ನೀಡಲಾಗಿದೆ ಎಂದರು.

ಆಸ್ಪತ್ರೆಗೆ ವಾಷಿಂಗ್‌ ಮಿಷನ್‌, ರಿಪ್ರಿಜೇಟರ್‌ ಬೇಕಾಗಿದೆ, ಒಟಿ ಹಾಗೂ ಎಸಿಯುಗೆ ಎಸಿ ಅಗತ್ಯವಿದೆ, ಬೇಸಿಗೆ ಆರಂಭವಾಗಿರುವುದರಿಂದ 10 ಫ್ಯಾನ್‌ ಬೇಕಾಗಿದೆ ಎಂದು ಬೇಡಿಕೆ ಪಟ್ಟಿ ಸಲ್ಲಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು ಮಾತನಾಡಿ, ಒಂದು ತಿಗಳೊಳಗೆ ಕ್ರೋಮಾ ಸೆಂಟರ್‌ ರಿಪೇರಿ ಮಾಡಲಾಗುವುದು, ಜನರೇಟರ್‌ ವ್ಯವಸ್ಥೆ ಕಲ್ಪಿಸಲಾಗುವುದು. ರಕ್ಷಾಸಮಿತಿಯಲ್ಲಿನ ಹಣದಲ್ಲಿ 15 ಫ್ಯಾನ್‌ ಖರೀದಿಸುವಂತೆ ಸೂಚಿಸಿದರು.

ತಾ ಪಂ ಅಧ್ಯಕ್ಷೆ ರಂಜಿತಾ, ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರಾದ ಸಿ.ಎನ್‌.ಶಶಿಧರ್‌, ಎಂ.ಆರ್‌.ಅನಿಲಕುಮಾರ್‌, ವೆಂಕಟೇಶ್‌, ಜಗದೀಶ್‌, ಮರಿಯಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಕಿಶೋರ್‌ ಇತರ ವೈದ್ಯರು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next