ಮುಂಬಯಿ: ಮುಂಬಯಿ-ನಾಸಿಕ್ ಮತ್ತು ಮುಂಬಯಿ-ಪುಣೆ ಮಾರ್ಗಗಳಲ್ಲಿ ಉಪನಗರ ಲೋಕಲ್ ರೈಲು ಸೇವೆಗಾಗಿ ಕಾಯುತ್ತಿರುವ ಪ್ರಯಾಣಿಕರಿಗೆ ಮಧ್ಯ ರೈಲ್ವೇಯು ನಿರಾಶಾದಾಯಕ ಸುದ್ದಿಯನ್ನು ನೀಡಿದೆ.
ಮಧ್ಯ ರೈಲ್ವೇಯು ಈ ಎರಡು ಅಂತರ್-ನಗರ ಮಾರ್ಗಗಳಲ್ಲಿ ಉಪನಗರ ರೈಲುಗಳನ್ನು ಓಡಿಸುವ ತನ್ನ ಯೋಜನೆಯನ್ನು ಕೈಬಿಟ್ಟಿದೆ. ಹಿಂದೂಸ್ಥಾನ್ ಟೈಮ್ಸ್ ಪ್ರಕಾರ, ಇದರ ಕಾರ್ಯಸಾಧ್ಯತೆ ಪರೀಕ್ಷೆಯು ತಾಂತ್ರಿಕ ಸಮಸ್ಯೆಗಳನ್ನು ಎತ್ತಿ ಹಿಡಿದ ಅನಂತರ ಮಧ್ಯ ರೈಲ್ವೇ ಮುಂಬಯಿ-ನಾಸಿಕ್ ಮತ್ತು ಮುಂಬಯಿ-ಪುಣೆ ಮಾರ್ಗಗಳಲ್ಲಿ ಉಪನಗರ ರೈಲು ಸೇವೆಗಳನ್ನು ಓಡಿಸುವ ತನ್ನ ಯೋಜನೆಯನ್ನ ಕೈಬಿಟ್ಟಿದೆ. ಆದರೆ ಈಗ ಅದಕ್ಕೆ ಬದಲಾಗಿ ಮಧ್ಯ ರೈಲ್ವೇಯು ಈ ಎರಡು ಇಂಟರ್-ಸಿಟಿ ಮಾರ್ಗಗಳಲ್ಲಿ ಸುಧಾರಿತ ಮೆಮು (ಮೈನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್) ರೈಲುಗಳನ್ನು ಓಡಿಸಲು ಚಿಂತನೆ ನಡೆಸಿದೆ.
ಎಕ್ಸ್‌ಪ್ರೆಸ್ ರೈಲುಗಳಿಗಿಂತಲೂ ಅಗಲವಾಗಿರುವ ಉಪನಗರ ಲೋಕಲ್ ರೈಲುಗಳು ದೀರ್ಘ ಗಂಟೆಗಳ ಕಾಲದ ಪ್ರಯಾಣಕ್ಕೆ ಸೂಕ್ತವಲ್ಲ ಮತ್ತು ಸುರಂಗಗಳ ಮೂಲಕ ಹಾದುಹೋಗಲು ಅವುಗಳಿಗೆ ಸಾಧ್ಯವಾಗದಿರಬಹುದು ಎಂದು ಮಧ್ಯ ರೈಲ್ವೇಯ ಕಾರ್ಯಸಾಧ್ಯತಾ ಪರೀಕ್ಷೆಯಲ್ಲಿ ಕಂಡುಕೊಳ್ಳಲಿದೆ.
ಮೆಮು ರೈಲುಗಳು ಲಘುವಾಗಿದ್ದು, ಇವು ಮಧ್ಯಮ -ದೂರದ ಮಾರ್ಗಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ದೂರದ ರೈಲು ಗಳಂತೆ ಇವು ಶೌಚಾಲಯಗಳನ್ನು ಹೊಂದಿವೆ. ಈ ರೈಲುಗಳು ಔಟ್‌ಸ್ಟೇಶನ್ ರೈಲುಗಳಿಗೆ ಹೋಲುವಂತೆ ಮೆಟ್ಟಿಲುಗಳನ್ನು ಹೊಂದಿವೆ.
ಮುಂಬಯಿ-ನಾಸಿಕ್ ಮತ್ತು ಮುಂಬಯಿ-ಪುಣೆ ಮಾರ್ಗಗಳಲ್ಲಿ ಸುಧಾರಿತ ಮೆಮು ರೈಲುಗಳ ಕಾರ್ಯಾ ಚರಣೆಯು ಕಾರ್ಯಸಾಧ್ಯವಾಗಿದೆ ಎಂದು ಮಧ್ಯ ರೈಲ್ವೇಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಸಕ್ತ ವರ್ಷದ ಅಂತ್ಯದ ಒಳಗಾಗಿ ಮಧ್ಯ ರೈಲ್ವೇ ಎಂಟು ಭೋಗಿಗಳ 12 ಮೆಮು ರೈಲುಗಳನ್ನು ಸ್ವೀಕರಿಸಲಿದೆ.
ಪ್ರಸ್ತುತ, ಮೆಮು ರೈಲುಗಳು ಪನ್ವೇಲ್-ಡಹಾಣು ರೋಡ್, ವಿರಾರ್-ಡಹಾಣು ರೋಡ್, ದಾದರ್-ಡಹಾಣು ರೋಡ್ ಮತ್ತು ವಸಾಯಿ ರೋಡ್-ರೋಹಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸುಧಾರಿತ ಮೆಮು ರೈಲುಗಳು 2,400 ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಎಂಟು ಭೋಗಿಗಳನ್ನು ಹೊಂದಲಿವೆ. ಈ ರೈಲುಗಳು ಆರಾಮದಾಯಕ ಸೀಟುಗಳು, ಸ್ವಯಂಚಾಲಿತ ಬಾಗಿಲುಗಳು, ಸಿಸಿಟಿವಿ ಕ್ಯಾಮೆರಾಗಳು ಮತ್ತು ಜಿಪಿಎಸ್ ವ್ಯವಸ್ಥೆಗಳನ್ನು ಹೊಂದಿರಲಿವೆ.