ಕೊಟ್ಟೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಯೋಚಿಸಿದ್ದು, ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಭಾರತೀಯ ಜನ ಶಕ್ತಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅನುಪಮಾ ಶೆಣೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಚುನಾವಣೆ ಆಯೋಗದಲ್ಲಿ ನಮ್ಮ ಪಕ್ಷ ನೋಂದಣಿಯಾಗಿದ್ದು, ಬಹುಶಃ ಇನ್ನೆರಡು ದಿನಗಳಲ್ಲಿ ನಮ್ಮ ಪಕ್ಷಕ್ಕೆ ಚಿಹ್ನೆ ದೊರಕಲಿದೆ ಎಂದರು.
ಜನ ಶಕ್ತಿ ಕಾಂಗ್ರೆಸ್‌ನಿಂದ ರಾಜ್ಯವನ್ನು ಆರು ವಲಯಗಳನ್ನಾಗಿ ವಿಂಗಡಿಸಿದ್ದು, ವಲಯಕ್ಕೆ ಒಬ್ಬೊಬ್ಬ ಉಪಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಇವರಲ್ಲಿ ಮೂರು ಉಪಾಧ್ಯಕ್ಷರನ್ನು ಎಂಇಪಿ ಪಕ್ಷ ಹೈಜಾಕ್ ಮಾಡಿತು. ದೊಡ್ಡ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಹೊಡೆತ ಬೀಳುತ್ತದೆ ಎಂಬ ನಿರೀಕ್ಷೆ ಹುಸಿಯಾಗಿ ಎಂಇಪಿದಿಂದ ನಮ್ಮ ಪಕ್ಷಕ್ಕೆ ಹೊಡೆತ ಬಿತ್ತು ಎಂದರು.
ಕೆಲವರು ನಮ್ಮ ಪಕ್ಷದಿಂದ ಆರ್ಥಿಕ ನೆರವು ಸಿಗುತ್ತದೆ ಎಂಬ ವಿಶ್ವಾಸದಿಂದ ಆಗಮಿಸಿದ್ದರು. ಆದರೆ, ಹಣಕಾಸಿನ ನೆರವು ಸಿಗುವುದಿಲ್ಲ ಎಂದು ಸ್ಪಷ್ಟವಾಗುತ್ತಿದ್ದಂತೆ ಪಕ್ಷದಿಂದ ದೂರವಾದರು. ಬಳ್ಳಾರಿ ಜಿಲ್ಲೆಯಲ್ಲಿ ಭಾರತೀಯ ಜನ ಶಕ್ತಿ ಕಾಂಗ್ರೆಸ್‌ದಿಂದ ಸ್ಪರ್ಧಿಸಲು ವ್ಯಕ್ತಿಯೊಬ್ಬರು ಇಚ್ಛಿಸಿದ್ದಾರೆ. ಆದರೆ, ಅವರನ್ನು ಬೆಂಬಲಿಸುವಷ್ಟು ಆರ್ಥಿಕ ಸಂಪನ್ಮೂಲ ನಮ್ಮಲ್ಲಿ ಇಲ್ಲ. ಅವರಲ್ಲಿ ಸ್ಪರ್ಧಿಸುವ ಎಲ್ಲ ಶಕ್ತಿ ಇದ್ದರೆ ಅವರನ್ನು ನಾವು ಬೆಂಬಲಿಸಲಿದ್ದೇವೆ ಎಂದು ತಿಳಿಸಿದರು.
ನಮ್ಮ ಪಕ್ಷದಿಂದ ಸ್ಪರ್ಧಿಸುವವರು ಕನಿಷ್ಟ ಸಂಪನ್ಮೂಲ ಹೊಂದಿರಬೇಕೆ ವಿನಾ ನಮ್ಮ ಪಕ್ಷದಿಂದ ಅಭ್ಯರ್ಥಿಗಳಿಗೆ ಯಾವುದೇ ಆರ್ಥಿಕ ನೆರವು ನೀಡಲಾಗುವುದಿಲ್ಲ. ಪಕ್ಷದ ಅಭಿವೃದ್ಧಿಗಾಗಿ ಅವರಿವರನ್ನು ದೇಣಿಗೆ ಕೇಳುತ್ತೇವೆ. ಇದಕ್ಕಾಗಿ ವಿಶೇಷ ಕಾರ್ಯಕ್ರಮ ರೂಪಿಸಿ ಹಣ ಸಂಗ್ರಹಿಸುವ ಚಿಂತನೆ ಇದೆ ಎಂದರು.
ಇದಲ್ಲದೆ ನಮ್ಮ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿ ತನ್ನ ಕ್ಷೇತ್ರದ ಚುನಾವಣಾ ಪ್ರಣಾಳಿಕೆಯನ್ನು ಅವರೇ ಸಿದ್ಧಪಡಿಸಿಕೊಂಡು ಬರಬೇಕು. ಅಂತಹವರನ್ನು ಬೆಂಬಲಿಸುತ್ತೇವೆ. ಯಾವುದೇ ಕ್ಷೇತ್ರದಲ್ಲಿ ಏನಾದರೂ ಸಮಸ್ಯೆಗಳಿದ್ದು ನಮ್ಮನ್ನು ಆಹ್ವಾನಿಸಿದರೆ ನಾನು ಬಂದು ಹೋರಾಟ ಮಾಡುವುದಾಗಿ ತಿಳಿಸಿದರು.