ಬೆಂಗಳೂರು: ನಗರದ ರೈಲ್ವೆ ಅಂಡರ್ ಪಾಸ್‌ಗಳ ಬಳಿ ರೈಲು ಹಾದು ಹೋಗುವ ಸಂದರ್ಭದಲ್ಲಿ ತ್ಯಾಜ್ಯ ನೀರು ರಸ್ತೆಗೆ ಸೋರುವ ಸಮಸ್ಯೆಗೆ ಮುಕ್ತಿ ನೀಡಲು ರೈಲ್ವೆ ಇಲಾಖೆ ಕಡೆಗೂ ಮುಂದಾಗಿದೆ. ರೈಲು ಸಂಚಾರ ಸಂದರ್ಭದಲ್ಲಿ ರೈಲ್ವೆ ಅಂಡರ್‌ಪಾಸ್‌ಗಳಿಂದ ಕೆಳಗಡೆ ಬೀಳುತ್ತಿದ್ದ ತ್ಯಾಜ್ಯ ನೀರು ವಾಹನ ಸವಾರರು ಹಾಗೂ ಪಾದಚಾರಿಗಳ ಮೈ ಮೇಲೆ ಬಿದ್ದು ಕಿರಿಕಿರಿ ಅನುಭವಿಸುವಂತಾಗಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು.
ಬಿಬಿಎಂಪಿ ಮೇಯರ್ ಸಹ ಈ ಕುರಿತು ಕೇಂದ್ರ ಸಚಿವರ ಗಮನಕ್ಕೆ ತಂದು ನಗರದಲ್ಲಿ ನಿತ್ಯ ಸಾವಿರಾರು ಜನ ತೊಂದರೆ ಹಾಗೂ ಕಿರಿಕಿರಿ ಅನುಭವಿಸುತ್ತಿರುವ ಬಗ್ಗೆ ಗಂಭೀರವಾಗಿ ಪರಿಗಣಿಸಲು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಈ ಸಮಸ್ಯೆ ನಿವಾರಣೆಗೆ ಮುಂದಾಗಿರುವ ರೈಲ್ವೆ ಇಲಾಖೆ, ತ್ಯಾಜ್ಯ ನೀರು ಸೋರದಂತೆ ಅಂಡರ್‌ಪಾಸ್‌ಗಳ ಕೆಳಗೆ ಪ್ಲಾಸಿಕ್ ಶೀಟ್ ಜೋಡಣೆ ಯೋಜನೆ ರೂಪಿಸಿದೆ.
ನಗರದ ಎಂಟು ಕಡೆ ಪ್ಲಾಸ್ಟಿಕ್ ಶೀಟ್ ಜೋಡಣೆಗೆ ನಿರ್ಧರಿಸಲಾಗಿದ್ದು, ಮೊದಲಿಗೆ ಶೇಷಾದ್ರಿಪುರ ರಸ್ತೆಯಲ್ಲಿರುವ ಮೇಲ್ಸೇತುವೆಯಲ್ಲಿ ಶೀಟ್ ಜೋಡಣೆ ಮಾಡಿ ರೈಲು ಸಂಚಾರದ ಅವಧಿಯಲ್ಲಿ ತ್ಯಾಜ್ಯ ನೀರು ಕೆಳಗೆ ಬೀಳದಂತೆ ತಡೆಯೊಡ್ಡಲಾಗಿದೆ. ನಗರದಲ್ಲಿರುವ ಇನ್ನೂ 7 ರೈಲ್ವೆ ಅಂಡರ್‌ಪಾಸ್‌ಗಳನ್ನು ಪ್ಲಾಸ್ಟಿಕ್ ಶೀಟ್ ಜೋಡಣೆಗೆ ಗುರುತಿಸಲಾಗಿದ್ದು, ಆಗಸ್ಟ್ ಮಾಸಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ.
30 ಲಕ್ಷ ರೂ. ವೆಚ್ಚ: ಜೀವನಹಳ್ಳಿ, ಮಿಲ್ಲರ್ ರಸ್ತೆ, ಕೆಂಪಾಂಬುಧಿ ಕೆರೆ ರಸ್ತೆ, ಬಿನ್ನಿಮಿಲ್ ರಸ್ತೆ, ಕಿನೊ ಟಾಕೀಸ್ ರಸ್ತೆ, ಅರಮನೆ ರಸ್ತೆ, ಟ್ಯಾನರಿ ರಸ್ತೆ, ವಿಂಡ್‌ಸನ್ ಮ್ಯಾನರ್ ಹೋಟೆಲ್ ಸಮೀಪದ ರಸ್ತೆ ಸೇರಿ 8 ಕಡೆ ರೈಲ್ವೆ ಅಂಡರ್‌ಪಾಸ್/ಮೇಲ್ಸೇತುವೆಗಳ ತಡೆಗೋಡೆ ನಿರ್ಮಾಣಕ್ಕೆ ಇಲಾಖೆ 30 ಲಕ್ಷ ರೂ. ವೆಚ್ಚ ಮಾಡುತ್ತಿದೆ. ರೈಲ್ವೆ ಹಳಿಗಳ ಪಕ್ಕ ಮತ್ತು ಕೆಳ ಭಾಗದಲ್ಲಿ ಶೀಟ್‌ಗಳನ್ನು ಹಾಕಲಾಗಿದ್ದು, ಸಂಗ್ರಹವಾಗುವ ತ್ಯಾಜ್ಯ ನೀರು ಪಕ್ಕದ ಚರಂಡಿಗೆ ಹೋಗುವಂತೆ ಕಾಮಗಾರಿ ನಡೆಸಲಾಗಿದೆ ಎಂದು ಅಧಿಕಾರೊಬ್ಬರು ತಿಳಿಸಿದ್ದಾರೆ.
ಸಚಿವರ ಸೂಚನೆ: ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಫಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದಾಗ ಮೇಯರ್ ಗಂಗಾಂಬಿಕೆ, ರೈಲ್ವೆ ಮೇಲ್ಸೇತುವೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ಗಮನ ಸೆಳೆದಿದ್ದರು. ತಕ್ಷಣವೇ ಸಚಿವರು, ಬೆಂಗಳೂರು ವಿಭಾಗದ ವ್ಯವಸ್ಥಾಪಕ ನಿರ್ದೇಶಕರನ್ನು ಕರೆದು ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಯಬೇಕು ಎಂದು ಸೂಚನೆ ನೀಡಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ರೈಲ್ವೆ ಮೇಲ್ಸೇತುವೆಗಳನ್ನು ಗುರುತಿಸಿ ಕಾಮಗಾರಿ ಆರಂಭಿಸಿದ್ದಾರೆ.
ವರದಿ ಪ್ರಕಟವಾಗಿತ್ತು: ರೈಲ್ವೆ ಅಂಡರ್‌ಪಾಸ್‌ನಲ್ಲಿ ಸಂಚರಿಸುವ ವಾಹನ ಸವಾರರ ಮೇಲೆ ತ್ಯಾಜ್ಯ ನೀರು ಬೀಳುತ್ತಿರುವ ಬಗ್ಗೆ ಉದಯವಾಣಿ ಪತ್ರಿಕೆಯ ಮೆಟ್ರೋ ಫೋಕಸ್‌ನಲ್ಲಿ ರೈಲ್ವೆ ಸೇತುವೆ ಕೆಳಗೆ ಶೌಚ ನೀರಿನ ಪ್ರೋಕ್ಷಣೆ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.
ರೈಲ್ವೆ ಮೇಲ್ಸೇತುವೆಯಲ್ಲಿ ರೈಲು ಸಂಚಾರ ನಡೆಸುವ ವೇಳೆ ಕೆಳಗೆ ತ್ಯಾಜ್ಯ ನೀರು ಬೀಳುತ್ತಿದೆ ಎಂದು ಸಾರ್ವಜನಿಕರು ಇಲಾಖೆಯ ಗಮನಕ್ಕೆ ತಂದಿದ್ದರು. ಹಾಗೇ ಸಚಿವರು ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಈಗಾಗಲೇ ಕಾಮಗಾರಿ ಆರಂಭಿಸಲಾಗಿದ್ದು, ಶೀಘ್ರ ಮುಗಿಸಲಾಗುವುದು.
-ಶ್ರೀಧರಮೂರ್ತಿ, ನಗರ ವಾಣಿಜ್ಯ ವಿಭಾಗದ ವ್ಯವಸ್ಥಾಪಕ
ರೈಲ್ವೆ ಮೇಲ್ಸೇತುವೆಯಿಂದ ಬೀಳುವ ಅಶುದ್ಧ ನೀರಿನಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿತ್ತು. ಶಾಶ್ವತ ಪರಿಹಾರಕ್ಕಾಗಿ ಬೆಂಗಳೂರು ವಿಭಾಗದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದರು. ಪ್ರಸ್ತುತ ಕಾಮಗಾರಿ ನಡೆಯುತ್ತಿದ್ದು, ಸಚಿವರಿಗೆ ಬೆಂಗಳೂರು ಜನತೆ ಪರವಾಗಿ ಧನ್ಯವಾದ.
-ಗಂಗಾಂಬಿಕೆ, ಮೇಯರ್
* ಮಂಜುನಾಥ್ ಗಂಗಾವತಿ