ಬೆಂಗಳೂರು: ಆಲೂರಿನಲ್ಲಿ ಬಿಡಿಎ ವತಿಯಿಂದ ನಿರ್ಮಿಸಿದ ವಿಲ್ಲಾಗಳಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇದನ್ನು ಮತ್ತಷ್ಟು ಪ್ರೋತ್ಸಾಹಿಸಲು ‘ಪರಿಸರ ಸ್ನೇಹಿ’ ವಿಲ್ಲಾಗಳ ನಿರ್ಮಾಣಕ್ಕೆ ಪ್ರಾಧಿಕಾರ ಚಿಂತನೆ ನಡೆಸಿದೆ. ಇತ್ತೀಚೆಗೆ ನಡೆದ ಬಿಡಿಎ ಆಡಳಿತ ಮಂಡಳಿಯ ಸಭೆಯಲ್ಲಿ ಪರಿಸರ ಸ್ನೇಹಿ ವಿಲ್ಲಾ ನಿರ್ಮಾಣದ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಮುಂದಿನ ದಿನಗಳಲ್ಲಿ ‘ಗ್ರೀನ್ ಬಿಲ್ಡಿಂಗ್’ ಪರಿಕಲ್ಪನೆಯಲ್ಲಿ ವಿಲ್ಲಾಗಳನ್ನು ನಿರ್ಮಿಸಲು ಸಮಾಲೋಚನೆ ನಡೆಸಲಾಯಿತು.
ಆಲೂರಿನಲ್ಲಿ 27 ಎಕರೆ 24 ಗುಂಟೆಯಲ್ಲಿ ನಿರ್ಮಿಸಲಾಗಿದ್ದ ಎಲ್ಲಾ 452 ವಿಲ್ಲಾಗಳು ಮಾರಾಟವಾಗಿದೆ. ಕಣಮಿಣಿಕೆ ಮತ್ತು ಕೊಮ್ಮಘಟ್ಟಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದ್ದ ಅಪಾರ್ಟ್ಮೆಂಟ್‌ಗಳಿಗೆ ಬೇಡಿಕೆ ಬಂದಿದ್ದು, ಇದಾದ ಬಳಿಕ ಗ್ರಾಹಕರ ಪರಿಸರ ಸ್ನೇಹಿ ಅಭಿರುಚಿಗೆ ತಕ್ಕಂತೆ ವಿಲ್ಲಾ ನಿರ್ಮಿಸಲು ಬಿಡಿಎ ಚಿಂತಿಸಿದೆ.
ಸದ್ಯದಲ್ಲೇ ತುಮಕೂರು ರಸ್ತೆ ಬಳಿ ದಾಸನಪುರ ಹೋಬಳಿಯ ಹುನ್ನಿಗೆರೆಯಲ್ಲಿ 30 ಎಕರೆ ಜಾಗದಲ್ಲೂ ಪರಿಸರ ಸ್ನೇಹಿ ವಿಲ್ಲಾ ನಿರ್ಮಿಸಲು ಬಿಡಿಎ ಮುಂದಾಗಿದೆ. ಇಲ್ಲಿ 3 ಕೊಠಡಿಗಳು, ಹಾಲ್ ಹಾಗೂ ಅಡುಗೆ ಮನೆಯನ್ನು ಒಳಗೊಂಡ 150 ಹಾಗೂ 4 ರೂಂಗಳನ್ನು ಒಳಗೊಂಡ 150 ವಿಲ್ಲಾಗಳನ್ನು ನಿರ್ಮಿಸಲು ಬಿಡಿಎ ಯೋಜನೆ ರೂಪಿಸಿದೆ.
ಹೊಸ ವಿಲ್ಲಾಗಳಲ್ಲಿ ಕಾರು, ಬೈಕುಗಳ ನಿಲುಗಡೆಗೆ ಸ್ಥಳಾವಕಾಶ ಎಷ್ಟಿರಬೇಕು. ಆಟದ ಮೈದಾನ ಮತ್ತು ಉದ್ಯಾನವನ ಯಾವ ರೀತಿಯಲ್ಲಿ ಇರಬೇಕು. ವಿಲ್ಲಾಗಳ ನಿರ್ಮಾಣಕ್ಕೆ ಯಾವ ರೀತಿಯ ಸಾಮಗ್ರಿಗಳನ್ನು ಮತ್ತು ಟೈಲ್ಸ್‌ಗಳನ್ನು ಬಳಸಬೇಕು. ಹಾಗೂ ಗುಣಮಟ್ಟ ಹೇಗಿರಬೇಕೆಂಬ ಹತ್ತಾರು ಅಂಶಗಳನ್ನು ಟೆಂಡರ್ ನಿಯಮಗಳಲ್ಲಿ ಬಿಡಿಎ ಉಲ್ಲೇಖೀಸಲಿದೆ.
ಪರಿಸರ ಸ್ನೇಹಿ ವಿಲ್ಲಾಗಳ ವಿಶೇಷತೆ: ಬಿಡಿಎ ನಿರ್ಮಿಸುವ ಪರಿಸರ ಸ್ನೇಹಿ ವಿಲ್ಲಾಗಳಲ್ಲಿ ಶೇ.40ರಷ್ಟು ಭಾಗವನ್ನು ರಸ್ತೆ, ಆಟದ ಮೈದಾನ ಮತ್ತು ಉದ್ಯಾನಕ್ಕಾಗಿ ಮೀಸಲಿಡಲು ನಿರ್ಧರಿಸಲಾಗಿದೆ. ಇದರೊಂದಿಗೆ ನೈಸರ್ಗಿಕ ಗಾಳಿ ಮತ್ತು ಬೆಳಕಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ವಿಶೇಷವಾಗಿ ಮಳೆನೀರು ಕೊಯ್ಲು ಹಾಗೂ ನೀರಿನ ಮರುಬಳಕೆಗೆ ಆದ್ಯತೆ ನೀಡಲಾಗುವುದು. ಆ ಹಿನ್ನೆಲೆಯಲ್ಲಿ ತಾಜ್ಯನೀರು ಶುದ್ಧೀಕರಣ ಘಟಕ (ಎಸ್ ಟಿಪಿ) ನಿರ್ಮಿಸಲು ಉದ್ದೇಶಿಸಿದ್ದು, ಶುದ್ಧೀಕರಿಸಿದ ನೀರನ್ನು ಉದ್ಯಾನವನಗಳಿಗೆ ಬಳಸಲಾಗುತ್ತದೆ ಎಂದು ಬಿಡಿಎನ ಹಿರಿಯ ಅಧಿಕಾರಿಯೊಬ್ಬರು ‘ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಗೋಲ್ಡ್ ರೇಟಿಂಗ್
ಬಿಡಿಎ ಕಣಮಿನಿಕೆ, ಕೊಮಘಟ್ಟ ಪ್ರದೇಶದಲ್ಲಿ ನಿರ್ಮಿಸಲಾದ ಅಪಾರ್ಟ್‌ಮೆಂಟ್‌ಗಳಿಗೆ ಗೋಲ್ಡ್ ರೇಟಿಂಗ್ ಬಂದಿವೆ. ಪರಿಸರ ಸ್ನೇಹಿ ವಿಲ್ಲಾಗಳ ಗುಣಮಟ್ಟವನ್ನು ಇಸಿಬಿಸಿ (ಎನರ್ಜಿ ಕನ್ಸರ್ವೇಷನ್ ಬಿಲ್ಡಿಂಗ್ ಕೋಡ್) ಮೂಲಕ ಅಳೆಯಲಾಗುತ್ತದೆ. ಬಳಿಕ ಕೇಂದ್ರದ ಅಧೀನಕ್ಕೆ ಬರುವಂತಹ ‘ಗೃಹ’ ಸಂಸ್ಥೆ ಅಪಾರ್ಟ್‌ಮೆಂಟ್‌ನ ಗುಣಮಟ್ಟದ ಬಗ್ಗೆ ರೇಟಿಂಗ್ ನೀಡುತ್ತಿದ್ದು, ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳಿಗೆ ಗೋಲ್ಡ್ ರೇಟಿಂಗ್ ದೊರಕಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಿವಿಧ ರೀತಿಯ ಅಪಾರ್ಟ್‌ಮೆಂಟ್ ಮತ್ತು ವಿಲ್ಲಾಗಳ ನಿರ್ಮಾಣದ ಸಂಬಂಧ ಯೋಜನೆ ಹಮ್ಮಿಕೊಂಡಿದೆ. ಇದರಲ್ಲಿ ಪರಿಸರ ಸ್ನೇಹಿ ವಿಲ್ಲಾ ನಿರ್ಮಾಣ ಕೂಡ ಒಂದಾಗಿದೆ.
● ರಾಕೇಶ್ ಸಿಂಗ್, ಬಿಡಿಎ ಆಯುಕ್ತ
ದೇವೇಶ ಸೂರಗುಪ್ಪ