ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಹೊರತುಪಡಿಸಿ ಉಳಿದೆಲ್ಲ ಸೌಲಭ್ಯಗಳು ದೊರೆಯುತ್ತಿದ್ದು, ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಸಂಸದ ವರುಣ್ ಗಾಂಧಿ ಸಲಹೆ ನೀಡಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ(ಎಫ್‌ಕೆಸಿಸಿಐ) ಸೋಮವಾರ ಆಯೋಜಿಸಿದ್ದ “ಭವಿಷ್ಯದ ಭಾರತ – ಅವಕಾಶ ಮತ್ತು ಸವಾಲು’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ ಸರ್ಕಾರಿ 1.5 ಲಕ್ಷ ರೂ. ಖರ್ಚು ಮಾಡುತ್ತಿದೆ. ಆದರೂ, ಶಿಕ್ಷಣದಲ್ಲಿ ಅಸಮಾನತೆ ದೂರ ಮಾಡಲು ಸಾಧ್ಯವಾಗಿಲ್ಲ ಎಂದರು.
ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುವಷ್ಟರ ಮಟ್ಟಿಗೆ ಎಲ್ಲ ಕುಟುಂಬಗಳು ಶಕ್ತವಾಗಿರುವುದಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ. ಶಿಕ್ಷಣ ಪಡೆದ ಪ್ರತಿಯೊಬ್ಬರನ್ನೂ ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಾದರೆ, ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯ ಹಾಗೂ ಶಿಕ್ಷಣದ ಗುಣಮಟ್ಟದ ಕೊರತೆ ನೀಗಿಸಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕಿದೆ ಎಂದು ಹೇಳಿದರು.
ದೇಶದಾದ್ಯಂತ ಬ್ಯಾಂಕ್‌ಗಳಲ್ಲಿ 6 ಸಾವಿರ ಕೋಟಿ ರೂ. ಶಿಕ್ಷಣ ಸಾಲ ಮರುಪಾವತಿಯಾಗಿಲ್ಲ. ಪೋಷಕರು ಸಾಲ ಮಾಡಿ ಮಕ್ಕಳನ್ನು ಓದಿಸುತ್ತಾರೆ. ಆದರೆ, ಮಕ್ಕಳಿಗೆ ಸೂಕ್ತ ಕೆಲಸ ಹಾಗೂ ವೇತನ ದೊರೆಯದ ಹಿನ್ನೆಲೆಯಲ್ಲಿ ಸಾಲ ಮರುಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಎಚ್ಚೆತ್ತುಕೊಳ್ಳಬೇಕಿದೆ: ಕೆಲ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟ ಕುಸಿದು ನೀರಿನ ಸಮಸ್ಯೆಯಾಗಲಿದೆ ಎಂದು ನೀತಿ ಆಯೋಗ ವರದಿಯಲ್ಲಿ ಉಲ್ಲೇಖೀಸಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಜನರು ಎಚ್ಚೆತ್ತುಕೊಂಡು ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳಬೇಕಿದ್ದು, ನಗರದಲ್ಲಿ ಗಿಡಗಳನ್ನು ನೆಡುವ ಮೂಲಕ ಮತ್ತೆ ನಗರವನ್ನು ಉದ್ಯಾನ ನಗರಿಯನ್ನಾಗಿಸಬೇಕು ಎಂದು ಸಲಹೆ ನೀಡಿದರು.
ಸಂಸದ ವೇತನ ಹೆಚ್ಚಳಕ್ಕೆ ಕಡಿವಾಣ: ಲೋಕಸಭೆಯಲ್ಲಿ ಸಂಸದರು ತಮಗೆ ಬೇಕಾದಂತೆ ತಮ್ಮ ವೇತನವನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ಸಂಸದರ ವೇತನ 4 ಬಾರಿ ಹೆಚ್ಚಳವಾಗಿದ್ದು, ಬೇಕಾಬಿಟ್ಟಿ ವೇತನ ಹೆಚ್ಚಳಕ್ಕೆ ಕಡಿವಾಣ ಹಾಕುವುದು ನನ್ನ ಉದ್ದೇಶವಾಗಿದೆ ಎಂದು ವರುಣ್ ಗಾಂಧಿ ಹೇಳಿದರು.
ದೇಶದಲ್ಲಿ ಎಂಜಿನಿಯರ್, ವೈದ್ಯರು, ಶಿಕ್ಷಕರು, ಕೃಷಿಕರು, ವಿಜ್ಞಾನಿಗಳು ತಮ್ಮ ವೇತನ ತಾವೇ ನಿಗದಿಪಡಿಸಿಕೊಳ್ಳಲು ಸಾಧ್ಯವೇ? ಹೀಗಿರುವಾಗ ಶಾಸಕರು, ಸಂಸದರು ಮಾತ್ರ ತಮಗೆ ಬೇಕಾದಂತೆ ವೇತನ ಹೆಚ್ಚು ಮಾಡಲು ಹೇಗೆ ಸಾಧ್ಯ ಎಂದರು. ಎಸ್‌ಕೆಸಿಸಿಐ ಅಧ್ಯಕ್ಷ ಕೆ.ರವಿ, ಚುನಾಯಿತ ಅಧ್ಯಕ್ಷ ಸುಧಾಕರ್ ಶೆಟ್ಟಿ ಸೇರಿದಂತೆ ಪ್ರಮುಖರು ಹಾಜರಿದ್ದರು.