Advertisement

ಸಂಕಷ್ಟಹರಣಕ್ಕೆ ಕಾಂಗ್ರೆಸ್‌ ನಾಯಕರ ಚಿಂತನೆ

06:20 AM Jul 22, 2018 | |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿರುವ ಅಪಸ್ವರಕ್ಕೆ ಬ್ರೇಕ್‌ ಹಾಕಲು ರಾಜ್ಯ ಕಾಂಗ್ರೆಸ್‌ ನಾಯಕರು ಚಿಂತನೆ ನಡೆಸಿದ್ದಾರೆ.

Advertisement

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ ನಡೆದ ಪಕ್ಷದ ನಾಯಕರ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಸಿದರು. ಜೆಡಿಎಸ್‌ ಜೊತೆಗಿನ ಮೈತ್ರಿಯಿಂದ ದಕ್ಷಿಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ನಷ್ಟವಾಗಲಿದೆ ಎಂದು ಪಕ್ಷದ ನಾಯಕರೇ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದರಿಂದ ಸಮ್ಮಿಶ್ರ ಸರ್ಕಾರಕ್ಕೆ ಮುಜುಗರ ಉಂಟಾದಂತಾಗುತ್ತದೆ. ಈ ರೀತಿಯ ಹೇಳಿಕೆಗಳನ್ನು ತಡೆಗಟ್ಟಿ ಹಳೆ ಮೈಸೂರು ಭಾಗದಲ್ಲಿಯೂ ಪಕ್ಷವನ್ನು ಚುನಾವಣೆಗೆ ಸಿದ್ಧತೆಗೊಳಿಸಲು ಯೋಜನೆ ರೂಪಿಸಲು ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷದ ಹಿತದೃಷ್ಠಿಯಿಂದ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋರಾಟ
ಮಾಡಲು ಕಾರ್ಯಕರ್ತರನ್ನು ಸನ್ನದ್ಧಗೊಳಿಸಲು ಪಕ್ಷದ ನಾಯಕರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು, ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಬಗ್ಗೆ ಆಕಾಂಕ್ಷಿಗಳು ಅಸಮಾಧಾನ ಗೊಂಡಿದ್ದು, ಆಷಾಢ ಮಾಸ ಮುಗಿದ ತಕ್ಷಣ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವ ಕುರಿತಂತೆಯೂ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಸಂಪುಟದಲ್ಲಿ ಸ್ಥಾನ ಸಿಗದೆ ಅಸಮಾಧಾನಗೊಂಡವರ ಸಂಖ್ಯೆ ಇಪ್ಪತ್ತಕ್ಕೂ ಹೆಚ್ಚಿರುವುದರಿಂದ ಯಾರಿಗೆ ಸಚಿವ ಸ್ಥಾನ ನೀಡಿದರೆ, ಮುಂದಿನ ಲೋಕಸಭೆ ಚುನಾವಣೆಗೆ ಅನುಕೂಲವಾಗಲಿದೆ ಎನ್ನುವ ಕುರಿತಂತೆಯೂ ಚರ್ಚೆ ನಡೆಸಲಾಗಿದೆ. ಅನೇಕ ಹಿರಿಯ ಶಾಸಕರನ್ನು ಸಂಪುಟದಿಂದ ಹೊರಗಿಟ್ಟಿರುವುದರಿಂದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಂತಹ ನಾಯಕರು ತಟಸ್ಥ ಧೋರಣೆ ಅನುಸರಿಸಿದರೆ
ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನೂ ಕೆಲವು ನಾಯಕರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿ ನಿಗಮ ಮಂಡಳಿ ನೇಮಕ ಮತ್ತುಸಂಪುಟ ವಿಸ್ತರಣೆಯಲ್ಲಿ ಗೊಂದಲಗಳಾಗದಂತೆ ನೋಡಿಕೊಳ್ಳಬೇಕು ಎಂಬ ಅಭಿಪ್ರಾಯ
ವ್ಯಕ್ತವಾಗಿದೆ. ಅಲ್ಲದೇ ಸಮ್ಮಿಶ್ರ ಸರ್ಕಾರದ ಬಗ್ಗೆ ಅನಗತ್ಯವಾಗಿ ಬಹಿರಂಗ ಹೇಳಿಕೆ ನೀಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

ಕೇಂದ್ರದ ವಿರುದ್ಧ ಹೋರಾಟ
ಬೆಂಗಳೂರು:
ಅವಧಿಗೂ ಮುಂಚೆಯೇ ಲೋಕಸಭೆ ಚುನಾವಣೆ ಬರುವ ಸಾಧ್ಯತೆ ಇರುವುದರಿಂದ ಕೇಂದ್ರ ಸರ್ಕಾರದ ವೈಫ‌ಲ್ಯಗಳನ್ನು ಜನರಿಗೆ ತಿಳಿಸಲು ಹೋರಾಟ ಆರಂಭಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಪಕ್ಷದ ಪದಾಧಿಕಾರಿಗಳ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.ಹೀಗಾಗಿ ಪಕ್ಷದ ಸಂಘಟನೆಯನ್ನು ಪುನರ್‌ ರಚಿಸಲು ನಿರ್ಧರಿಸಲಾಗಿದೆ ಎಂದರು. ಬೇರೆ ರಾಜ್ಯಗಳ ಚುನಾವಣೆ ಜೊತೆಯಲ್ಲಿ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಆಗಸ್ಟ್‌ 15ರೊಳಗೆ ಬ್ಲಾಕ್‌ ಮಟ್ಟದಲ್ಲಿ ಸಭೆ ನಡೆಸಿ, ವಸ್ತು ಸ್ಥಿತಿ ವರದಿ ನೀಡುವಂತೆ ಸೂಚಿಸಲಾಗಿದೆ. ಆಗಸ್ಟ್‌ 15ರ ನಂತರ ಬ್ಲಾಕ್‌ ಅಧ್ಯಕ್ಷರ ಬದಲಾವಣೆ ಕುರಿತು ತೀರ್ಮಾನ ಮಾಡಲಾಗುವುದು. ಆ.3 ರಿಂದ 5ರ ವರೆಗೆ ಮೂರು ದಿನ ಲೋಕಸಭೆ ಚುನಾವಣೆ ಸಿದ್ಧತೆ ಕುರಿತು ಪ್ರತಿ ಕ್ಷೇತ್ರದ ಮುಖಂಡರ ಜೊತೆಗೆ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಲೋಕಸಭೆ ಚುನಾವಣೆಗೆ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಈಗಾಗಲೇ ಹೈ ಕಮಾಂಡ್‌ ನಿರ್ಧರಿಸಿದೆ. ದೇಶದ ಹಿತದೃಷ್ಠಿಯಿಂದ ಜೆಡಿಎಸ್‌ ಜೊತೆ ಕೈ ಜೋಡಿಸಿದ್ದೇವೆ. ಇಬ್ಬರೂ ಸೇರಿ ಯಶಸ್ವಿ ಚುನಾವಣೆ ಎದುರಿಸುತ್ತೇವೆ.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next