Advertisement

ನದಿ ದಾಟಲು ಕಿರುಸೇತುವೆ ನಿರ್ಮಾಣಕ್ಕೆ ಚಿಂತನೆ: ಸಚಿವ ಸತೀಶ್ ಜಾರಕಿಹೊಳಿ

06:21 PM Jul 25, 2023 | Team Udayavani |

ಬೆಳಗಾವಿ: ಮಳೆಗಾಲದಲ್ಲಿ ಖಾನಾಪುರ ಸೇರಿದಂತೆ ರಾಜ್ಯದ ಮಲೆನಾಡು ಪ್ರದೇಶಗಳಲ್ಲಿ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ನದಿ ದಾಟಲು ಅನುಕೂಲವಾಗುವಂತೆ ಕಿರುಸೇತುವೆಗಳನ್ನು ನಿರ್ಮಿಸುವ ಬಗ್ಗೆ ವಿಶೇಷ ಯೋಜನೆಯನ್ನು ಜಾರಿಗೆ ತರುವ ಚಿಂತನೆ ನಡೆಸಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

Advertisement

ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಖಾನಾಪುರ ತಾಲ್ಲೂಕಿನ ಭೂರಣಕಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಮನೆಹಾನಿಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ನದಿ ದಾಟಲು ಅನುಕೂಲವಾಗುವಂತೆ ಐದರಿಂದ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಕಿರುಸೇತುವೆ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಅದೇ ರೀತಿ ಖಾನಾಪುರ ತಾಲ್ಲೂಕಿನಲ್ಲಿ ಸೇತುವೆ ನಿರ್ಮಾಣಕ್ಕೆ ವಿಶೇಷ ಅಭಿಯಾನ ಮಾದರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ಮನೆಗಳಿಗೆ ಸದ್ಯಕ್ಜೆ ಮಾರ್ಗಸೂಚಿ ಪ್ರಕಾರ ಪರಿಹಾರವನ್ನು ನೀಡಲಾಗುತ್ತಿದೆ. ಸಂಪೂರ್ಣವಾಗಿ ಕುಸಿದಿರುವ ಮನೆಗಳ ನಿರ್ಮಾಣಕ್ಕೆ ಐದು ಲಕ್ಷ ರೂಪಾಯಿ ಪರಿಹಾರವನ್ನು ನೀಡುವ ಬಗ್ಗೆ ಸರಕಾರದ ಮಟ್ಟದಲ್ಲಿ ನಿರ್ಧರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಮಳೆಯಿಂದಾಗಿ ಅನೇಕ ಕಡೆಗಳಲ್ಲಿ ರಸ್ತೆಗಳು ತೀವ್ರ ಹದಗೆಟ್ಟಿರುವುದು ಗಮನಕ್ಕೆ ಬಂದಿದೆ. ಸದ್ಯಕ್ಕೆ ತಾತ್ಕಾಲಿಕ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ನವೆಂಬರ್ ಬಳಿಕ ರಸ್ತೆ ನಿರ್ಮಾಣದ ಕುರಿತು ಪರಿಶೀಲಿಸಲಾಗುವುದು ಎಂದು ಹೇಳಿದರು.

ಖಾನಾಪುರ ತಾಲ್ಲೂಕಿನಲ್ಲಿ 87 ಮನೆಗಳು ಭಾಗಶಃ ಕುಸಿದಿವೆ. ನಾಲ್ಕು ಮನೆಗಳು ಸಂಪೂರ್ಣವಾಗಿ ಕುಸಿದಿವೆ ಎಂದು ಮಾಹಿತಿ ನೀಡಿದ ಸಚಿವರು, ಮಳೆಯ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅದೇ ರೀತಿ ಹಾನಿಯ ಪ್ರಮಾಣ ಕೂಡ ಹೆಚ್ಚಾಗಬಹುದು ಎಂದರು.

Advertisement

ಇದನ್ನೂ ಓದಿ:ಮಲ್ಪೆ: ಸಾಲದ ಆಮಿಷ- ಮಹಿಳೆಯರಿಂದ ಲಕ್ಷಾಂತರ ರೂ. ಪಡೆದು ವಂಚನೆ; ದೂರು ದಾಖಲು

ಸಂಭವನೀಯ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ವೇದಗಂಗಾ-ದೂಧಗಂಗಾ ಸೇರಿದಂತೆ ಎಲ್ಲ ನದಿಗಳ ಒಳಹರಿವು ಪ್ರಮಾಣದ ಮೇಲೆ ನಿಗಾವಹಿಸಲಾಗಿದೆ ಎಂದು ಹೇಳಿದರು.

ಖಾನಾಪುರ ತಾಲ್ಲೂಕಿನ ಭೂರಣಕಿ ಗ್ರಾಮದಲ್ಲಿ ಮಳೆಯಿಂದ ಮನೆಯ ಗೋಡೆ ಕುಸಿದಿರುವುದನ್ನು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಎರಡು ಕುಟುಂಬಗಳಿಗೆ ತಲಾ 1.20 ಲಕ್ಷ ರೂಪಾಯಿ ಪರಿಹಾರದ ಚೆಕ್ ಗಳನ್ನು ವಿತರಿಸಿದರು.

ಪರಿಹಾರದ ಚೆಕ್ ಜತೆಗೆ ಅಕ್ಕಿ, ಬೆಲ್ಲ, ಚಹಾಪುಡಿ ಸೇರಿದಂತೆ ದೈನಂದಿನ ಬಳಕೆಗೆ ಅಗತ್ಯವಿರುವ ಆಹಾರ ಕಿಟ್ ಗಳನ್ನು ಕೂಡ ಸಂತ್ರಸ್ತ ಕುಟುಂಬಗಳಿಗೆ ನೀಡಲಾಯಿತು.

ಖಾನಾಪುರ ಶಾಸಕರಾದ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಅಂಜಲಿ ನಿಂಬಾಳ್ಕರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next