Advertisement

ಹೊಸ ಮುಕ್ತ ವಿವಿಗೆ ಚಿಂತನೆ

07:47 AM Oct 10, 2017 | |

ಬೆಂಗಳೂರು: ಭ್ರಷ್ಟಾಚಾರ, ದುರಾಡಳಿತದ ಆರೋಪಗಳಿಂದಾಗಿ ಯುಜಿಸಿ ಮಾನ್ಯತೆ ಕಳೆದುಕೊಂಡಿರುವ ಕರ್ನಾಟಕ ರಾಜ್ಯ ಮುಕ್ತ ವಿವಿಯ ಭವಿಷ್ಯ ತೂಗುಯ್ನಾಲೆಯಲ್ಲಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪರ್ಯಾಯವಾಗಿ ಹೊಸದೊಂದು ಮುಕ್ತ ವಿವಿ ಸ್ಥಾಪಿಸುವ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆದಿದೆ.

Advertisement

ಮುಕ್ತ ವಿವಿ ಅತಂತ್ರ ಸ್ಥಿತಿಯಲ್ಲಿರುವುದರಿಂದ ಅಲ್ಲಿನ 3 ಲಕ್ಷ ವಿದ್ಯಾರ್ಥಿಗಳು ಮತ್ತು 900 ಸಿಬ್ಬಂದಿಯ ಹಿತ ಕಾಯಲು ನಮ್ಮ ಮುಂದಿರುವ ಪರ್ಯಾಯ ಸಾಧ್ಯತೆಗಳೇನು ಎಂಬುದನ್ನು ಪರಿಶೀಲಿಸಲು ಸರ್ಕಾರ ಅಪರ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ನೇತೃತ್ವದಲ್ಲಿ ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ವಿಧಾನಸೌಧದಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, “”ಮುಕ್ತ ವಿವಿ ಮಾನ್ಯತೆ ಕಳೆದುಕೊಂಡು ಮೂರು ವರ್ಷ ಆಗಿದೆ. ಮಾನ್ಯತೆ ಪಡೆದುಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೇವೆ. ಸುಪ್ರೀಂಕೋರ್ಟ್‌ ಹಾಗೂ ಯುಜಿಸಿ ಹೇಳಿದ್ದ ಎಲ್ಲ ಷರತ್ತುಗಳನ್ನು ಪೂರೈಸಿದ್ದೇವೆ. ಅದಾಗ್ಯೂ, ಇಲ್ಲಿವರೆಗೆ ಯಾವುದೇ ಯಶಸ್ಸು ಸಿಕ್ಕಿಲ್ಲ. ಹೀಗಿರುವಾಗ, ರಾಜ್ಯ ಸರ್ಕಾರ ಮುಂದೇನು ಮಾಡ ಬೇಕು? ಪರ್ಯಾಯ  ವಾಗಿ ಹೊಸದೊಂದು ಮುಕ್ತ ವಿವಿ ಸ್ಥಾಪಿಸಬೇಕಾ? ಹೊಸ ಕಾನೂನುಗಳನ್ನು ರೂಪಿಸಬೇಕಾ? ಇರುವ ಕಾನೂನುಗಳಿಗೆ ಇನ್ನಷ್ಟು ತಿದ್ದುಪಡಿಗಳನ್ನು ತರಬೇಕಾ? ಎನ್ನುವ ಅಂಶಗಳು ಸೇರಿದಂತೆ ನಮ್ಮ ಮುಂದಿರುವ ಪರ್ಯಾಯ ಸಾಧ್ಯತೆಗಳ ಸಾಧಕ-ಬಾಧಕಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ರತ್ನಪ್ರಭಾ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ” ಎಂದರು.

ಕರ್ನಾಟಕ ಮುಕ್ತ ವಿವಿ ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಲೇ ಸಮಿತಿ ರಚಿಸಿರುವ ಉದ್ದೇಶಗಳನ್ನು ಪ್ರಸ್ತಾಪಿಸುವ ಮೂಲಕ ರಾಯರಡ್ಡಿ, ಪರ್ಯಾಯ ಮುಕ್ತ ವಿವಿ ಸ್ಥಾಪನೆಯ ಸುಳಿವು ನೀಡಿದರು. ಈ ವೇಳೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಮಾನ್ಯತೆ ಕೊಡಿಸಿ ಎಂದು ಪ್ರಧಾನಿ ಅವರಿಗೆ ಸ್ವತಃ ಸಿಎಂ ಪತ್ರ ಬರೆದರು. ನಾನೂ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಮನವಿ ಸಲ್ಲಿಸಿದ್ದೇನೆ. ರಾಜ್ಯದ ಕೇಂದ್ರ ಸಚಿವರ ಗಮನಕ್ಕೂ ತಂದಿದ್ದೇನೆ. ಆದರೆ, ಈವರೆಗೆ ಏನೂ ಆಗಿಲ್ಲ. ಮುಂದೇನು ಮಾಡಬೇಕೆನ್ನುವುದರ ಸಾಧಕ -ಬಾಧಕಗಳನ್ನು ಪರಿಶೀಲಿಸಿ ತಿಂಗಳಲ್ಲಿ ವರದಿ ನೀಡಲು ಸಮಿತಿ ರಚಿಸಲಾಗಿದೆ ಎಂದರು.

ಕರ್ನಾಟಕ ಮುಕ್ತ ವಿವಿ ಮಾನ್ಯತೆ ರದ್ದಾಗಿ ಮೂರು ವರ್ಷ ಕಳೆದಿದೆ. 3 ಲಕ್ಷ ವಿದ್ಯಾರ್ಥಿಗಳು, 900 ಸಿಬ್ಬಂದಿ ಅತಂತ್ರರಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 15ಕ್ಕೂ ಹೆಚ್ಚು ದೊಡ್ಡ ಸುಸಜ್ಜಿತ ಕಟ್ಟಡಗಳು ಖಾಲಿ ಬಿದ್ದಿವೆ. ಯಾವುದೇ ಕೆಲಸ ಇಲ್ಲದಿದ್ದರೂ ಸಿಬ್ಬಂದಿ ವೇತನ ಮತ್ತು ಆಡಳಿತ ನಿರ್ವಹಣೆಗೆ ಮೂರು ವರ್ಷಗಳಲ್ಲಿ 50 ಕೋಟಿ ರೂ. ಖರ್ಚು ಮಾಡಲಾಗಿದೆ. ಸ್ವಜನಪಕ್ಷಪಾತ, ಭ್ರಷ್ಟಾಚಾರ, ಅವ್ಯವಹಾರ ಮತ್ತು ತಪ್ಪು ನೀತಿಗಳಿಂದಾಗಿ ವಿವಿ ತೊಂದರೆಗೆ ಸಿಕ್ಕಿಕೊಂಡಿದೆ. ಪರಿಸ್ಥಿತಿ ಸರಿ ಆಗದಿರುವುದಕ್ಕೆ ಕೇಂದ್ರ ಸರ್ಕಾರ ಮತ್ತು ಯುಜಿಸಿ ಕಾರಣ ಎಂದು ಆರೋಪಿಸಿದ ರಾಯರಡ್ಡಿ, ವಿವಿಗಳ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಭೇಟಿ ಮಾಡಲು ಯುಜಿಸಿ ಅಧ್ಯಕ್ಷರು ನನಗೆ ಸಮಯ ಕೊಟ್ಟಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಮುಕ್ತ ವಿವಿ ಮಾನ್ಯತೆ ಪಡೆದುಕೊಳ್ಳಲು ಸುಪ್ರೀಂಕೋರ್ಟ್‌ ಮಾರ್ಗಸೂಚಿ, ಯುಜಿಸಿ ಸಲಹೆಗಳನ್ನು ಪಾಲಿಸಿದ್ದೇವೆ. ವಿವಿಯ ವ್ಯಾಪ್ತಿ ಯನ್ನು ರಾಜ್ಯಕ್ಕೆ ಸೀಮಿತಗೊಳಿಸಿ ಕಾಯ್ದೆ ತರಲಾಗಿದೆ. ವಿವಿಗೆ ಮಾನ್ಯತೆ ಕೊಡಿ ಎಂದು ಪ್ರಧಾನಿಗೆ ಖುದ್ದು ಮುಖ್ಯಮಂತ್ರಿಯವರು ಪತ್ರ ಬರೆದಿದ್ದಾರೆ. 

Advertisement

ಅನೇಕ ಬಾರಿ ನಾನು ಕೇಂದ್ರ ಮಾನವ ಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ. ರಾಜ್ಯದ ಕೇಂದ್ರ ಸಚಿವರನ್ನು ಭೇಟಿ ಮಾಡಿ ತಿಳಿಸಿದ್ದೇನೆ. ಆದರೆ, ಈವರೆಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಂದೇನು ಮಾಡಬೇಕು ಅನ್ನುವ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ರತ್ನಪ್ರಭಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಅಲ್ಲದೇ ಮುಕ್ತ ವಿವಿ ಸಮಸ್ಯೆ ಬಗ್ಗೆ ಚರ್ಚಿಸಲು ಸಭೆ ಕರೆಯುವಂತೆ ಅ.4ಕ್ಕೆ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಮತ್ತೂಂದು ಪತ್ರ ಬರೆದಿದ್ದೇನೆ. ಸಮಿತಿ ವರದಿ ಹಾಗೂ ಕೇಂದ್ರ ಪ್ರತಿಕ್ರಿಯೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಯರಡ್ಡಿ ತಿಳಿಸಿದರು. 

ಸಮಿತಿ ಸದಸ್ಯರು: ಅಧ್ಯಕ್ಷರು-ಕೆ. ರತ್ನಪ್ರಭಾ, ಅಪರ ಮುಖ್ಯಕಾರ್ಯದರ್ಶಿ. ಸದಸ್ಯರು- ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯಕಾರಿ ನಿರ್ದೇಶಕ ಎಸ್‌.ಎ. ಕೋರಿ, ಬೆಂಗಳೂರು ವಿವಿ ಕುಲಸಚಿವ ಪ್ರೊ. ಬಿ.ಕೆ. ರವಿ, ವಿಶ್ರಾಂತ ಕುಲಪತಿ ಪ್ರೊ. ವಿ.ಬಿ. ಕುಟಿØನೋ ಹಾಗೂ ರಾಜ್ಯ ಲೆಕ್ಕಪತ್ರ ಇಲಾಖೆಯ ನಿಯಂತ್ರಕರು.

ಕೇಂದ್ರದ ವಿರುದ್ಧ ಅಸಮಾಧಾನ 
ಕಲಬುರಗಿಯಲ್ಲಿರುವ ಕೇಂದ್ರೀಯ ವಿವಿಗೆ ಕೇಂದ್ರ ಸರ್ಕಾರ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಹೆಸರು ನಾಮಕರಣ ಮಾಡಿದರೆ, ಗುಲಬರ್ಗಾ ವಿವಿಗೆ ಬಸವೇಶ್ವರ ವಿವಿ ಎಂದು ರಾಜ್ಯ ಸರ್ಕಾರ ನಾಮಕರಣ ಮಾಡುತ್ತದೆ ಎಂದು ಮುಖ್ಯಮಂತ್ರಿಯವರು ತಾತ್ವಿಕವಾಗಿ ಒಪ್ಪಿಕೊಂಡಿದ್ದರು. ಹಾಗಾಗಿ, ಕೇಂದ್ರೀಯ ವಿವಿಗೆ ಅಂಬೇಡ್ಕರ್‌ ಹೆಸರು ಇಡುವಂತೆ ಕೇಂದ್ರ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅದೇ ರೀತಿ ಧಾರವಾಡದಲ್ಲಿ ಸ್ಥಾಪಿಸಲಾಗಿರುವ ಐಐಟಿಗೆ ರಾಜ್ಯ ಸರ್ಕಾರ 2 ಸಾವಿರ ಕೋಟಿ ರೂ. ಮೌಲ್ಯದ 500 ಎಕರೆ ಜಮೀನು ಕೊಟ್ಟಿದೆ. ಐಐಟಿಯಲ್ಲಿ ಸ್ಥಳೀಯರಿಗೆ ಶೇ.25ರಷ್ಟು ಮೀಸಲಾತಿ ನೀಡಬೇಕು ಎಂಬ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ರಾಯಚೂರಿನಲ್ಲಿ ಐಐಐಟಿ ಸ್ಥಾಪನೆ ಮಾಡುವ ಕೇಂದ್ರ ಸರ್ಕಾರದ ತೀರ್ಮಾನ ಇನ್ನೂ ಹೇಳಿಕೆ ಮತ್ತು ಕಡತಗಳಲ್ಲೇ ಉಳಿದಿದೆ ಎಂದು ರಾಯರಡ್ಡಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

„ 3 ಲಕ್ಷ ವಿದ್ಯಾರ್ಥಿಗಳು ಹಾಗೂ 900 ಸಿಬ್ಬಂದಿ ಹಿತ ಕಾಯುವ ಉದ್ದೇಶದಿಂದ ಈ ಚಿಂತನೆ „ 
ಮೂರು ವರ್ಷದಲ್ಲಿ ಬರೋಬ್ಬರಿ 50 ಕೋಟಿ ರೂ. ಖರ್ಚುಮಾಡಿದ ಸರ್ಕಾರ 

Advertisement

Udayavani is now on Telegram. Click here to join our channel and stay updated with the latest news.

Next