Advertisement

ಖಾಸಗಿ, ಸರಕಾರಿ ಶಾಲೆಗಳಲ್ಲಿ ವಾಟರ್‌ ಬೆಲ್‌ ಕಾರ್ಯಕ್ರಮಕ್ಕೆ ಚಿಂತನೆ

08:17 PM Dec 11, 2019 | mahesh |

ಬಜಗೋಳಿ: ನೆರೆಯ ಕೇರಳ ರಾಜ್ಯದಲ್ಲಿರುವಂತೆ ಕರ್ನಾಟಕದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರ ಪರಿಕಲ್ಪನೆಯಂತೆ ವಾಟರ್‌ಬೆಲ್‌ ಕಾರ್ಯಕ್ರಮವನ್ನು ಎಲ್ಲ ಸರಕಾರಿ, ಅನುದಾನಿತ, ಖಾಸಗಿ ಶಾಲೆಗಳಲ್ಲಿ ಆರಂಭಿಸುವ ಕಾರ್ಯ ರೂಪಿಸಲಾಗಿದೆ ಸರಕಾರದ ಸುತ್ತೋಲೆ ಬರುವ ಮುಂಚೆಯೇ ಕಾರ್ಕಳ ತಾಲೂಕಿನ ಮಾಳ ಗುರುಕುಲ ಅನುದಾನಿತ ಹಿ. ಪ್ರಾ. ಶಾಲೆಯಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ.

Advertisement

ಮಕ್ಕಳು ಸಾಕಷ್ಟು ನೀರನ್ನು ಕುಡಿಯಬೇಕು ಎನ್ನುವ ನಿಟ್ಟಿನಲ್ಲಿ ಜಲಗಂಟೆಯ ಪರಿಕಲ್ಪನೆ ಜಾರಿಗೊಳಿಸಲಾಗಿದೆ. ಹೆಚ್ಚಿನ ಮಕ್ಕಳು ಶಾಲೆಗೆ ನೀರಿನ ಬಾಟಲು ಸಾಮಾನ್ಯವಾಗಿ ತೆಗೆದುಕೊಂಡು ಹೋಗುತ್ತಾರೆ. ಆದರೇ ಬಹುತೇಕ ಮಕ್ಕಳು ನೀರನ್ನು ಸಮರ್ಪಕವಾಗಿ ಕುಡಿಯದೆ ವಾಪಸ್‌ ಮನೆಗೆ ತರುತ್ತಾರೆ. ಮಕ್ಕಳು ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯುತ್ತಿಲ್ಲ ಎನ್ನುವುದನ್ನು ಮನಗಂಡ ಶಿಕ್ಷಣ ಸಚಿವರು ರಾಜ್ಯದ ಎಲ್ಲ ಸರಕಾರಿ ಖಾಸಗಿ, ಅನುದಾನಿತ ಶಾಲೆಗಳಲ್ಲಿಯೂ ವಾಟರ್‌ಬೆಲ್‌ ಯೋಜನೆ ಜಾರಿಗೊಳಿಸಲು ಮುತುವರ್ಜಿ ವಹಿಸಿದ್ದಾರೆ. ಆದರೆ ಸರಕಾರಿ ಆದೇಶ ಪ್ರತಿ ಸಿಗುವ ಮುನ್ನವೇ ಮಾಳ ಶ್ರೀ ಗುರುಕುಲ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ವಿನೂತನ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ.

8 ಬಾರಿ ನೀರು ಸೇವನೆ
ಪ್ರತೀ ತರಗತಿಯಂತೆ ತರಗತಿಗೆ ಅಧ್ಯಾಪಕರು ಆಗಮಿಸುತ್ತಿದ್ದಂತೆ ಮಕ್ಕಳು ಅಧ್ಯಾಪಕರ ಸಮ್ಮುಖದಲ್ಲೇ ನೀರನ್ನು ಕುಡಿಯಬೇಕು. ದಿನಕ್ಕೆ ಒಟ್ಟು 8 ತರಗತಿ ಇದ್ದು ಇದರಂತೆ ಮಕ್ಕಳು 8 ಬಾರಿ ನೀರು ಕುಡಿಯುತ್ತಿದ್ದಾರೆ. ಪ್ರತಿಯೊಬ್ಬರೂ ದಿನಕ್ಕೆ 1ರಿಂದ 2 ಲೀ. ನಷ್ಟು ನೀರನ್ನು ಕುಡಿಯಬೇಕಿದ್ದು, ಈ ಯೋಜನೆಯಿಂದ ಮಕ್ಕಳು ಸುಮಾರು 1 ಲೀಟರ್‌ಗಿಂತಲೂ ಹೆಚ್ಚಿನ ನೀರನ್ನು ಕುಡಿಯುವಂತಾಗಿದೆ. ಅಲ್ಲದೆ ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಬಾಲ್ಯದಲ್ಲಿಯೇ ಅರಿವುಂಟಾಗುವುದರ ಜತೆಗೆ ಪ್ರಾಥಮಿಕ ಹಂತದಲ್ಲೇ ನೀರನ್ನು ಕುಡಿಯುವುದರಿಂದ ನೀರು ಕುಡಿಯುವ ಹವ್ಯಾಸವಾಗಿ ಮುಂದಿನ ದಿನಗಳಲ್ಲಿ ಆರೋಗ್ಯವಂತರಾಗಲು ಸಹಕಾರಿ ಯಾಗಲಿದೆ.

ಮಾಳ ಶ್ರೀ ಅನುದಾನಿತ ಹಿ. ಪ್ರಾ. ಶಾಲೆಯಲ್ಲಿ ಒಟ್ಟು 95 ವಿದ್ಯಾರ್ಥಿಗಳಿದ್ದಾರೆ. ಶಾಲೆಯ ಬಹುತೇಕ ಮಕ್ಕಳು ಶಾಲೆಯ ನೀರನ್ನೇ ಬಳಸುತ್ತಿದ್ದಾರೆ.

ಆರೋಗ್ಯಕ್ಕೆ ನೀರು ಉತ್ತಮ
ವಾಟರ್‌ ಬೆಲ್‌ ಯೋಜನೆಯಿಂದ ಮಕ್ಕಳಲ್ಲಿನ ಉರಿಮೂತ್ರ, ಮಕ್ಕಳು ಸರಿಯಾಗಿ ನೀರನ್ನು ಕುಡಿಯದೇ ದೇಹದಲ್ಲಿ ಸಾಕಷ್ಟು ನೀರಿನ ಅಂಶ ಕಡಿಮೆಯಾಗಿ ಮೂತ್ರ ಸೋಂಕು
ಉಂಟಾಗುತ್ತದೆ. ನಿರಂತರ ನೀರು ಕುಡಿಯುವುದರಿಂದ ಮಕ್ಕಳ ದೇಹ ಉಲ್ಲಾಸ, ಗ್ಯಾಸ್ಟ್ರಿಕ್‌, ವಾತ, ಮೊದಲಾದ ಕಾಯಿಲೆ ಕಡಿಮೆಯಾಗುತ್ತದೆ. ಇದರಿಂದ ಮಕ್ಕಳ ಆರೋಗ್ಯ ದಲ್ಲಿಯೂ ಸುಧಾರಣೆಯಾಗುತ್ತದೆ. ಸರಕಾರದ ಈ ಯೋಜನೆಯಿಂದ ಮಕ್ಕಳ ಹೆತ್ತವರೂ ಸಂತಸಗೊಳ್ಳುವಂತೆ ಮಾಡಿದೆ. ಮಾಳ ಗುರುಕುಲ ಶಾಲೆಯಲ್ಲಿ ಈಗಾಗಲೇ ಆರಂಭಗೊಂಡ ವಾಟರ್‌ ಬೆಲ್‌ ಕಾರ್ಯಕ್ರಮ ತಾಲೂಕಿನ ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ.

Advertisement

ಪರಿಣಾಮಕಾರಿ
ಈ ಹಿಂದೆ ಮಕ್ಕಳಿಗೆ ನಾವು ನೀರಿನ ಬಾಟಲ್‌ ಮೂಲಕ ನೀರು ಕಳುಹಿಸಿಕೊಡುತ್ತಿದ್ದೆವಾದರೂ, ಸಂಜೆ ಅದೇ ನೀರನ್ನು ಮಕ್ಕಳು ವಾಪಸ್‌ ತರುತ್ತಿದ್ದರು. ವಾಟರ್‌ ಬೆಲ್‌ ಕಾರ್ಯಕ್ರಮದ ಪರಿಣಾಮ ಮಕ್ಕಳು ಪ್ರತೀ ದಿನ ಸೂಕ್ತ ಪ್ರಮಾಣದಲ್ಲಿ ನೀರು ಕುಡಿಯುವಂತಾಗಿದೆ.
-ಗೀತಾ ಸೇರಿಗಾರ್‌, ಮಾಳ, ಪೋಷಕರು

ಆರೋಗ್ಯ ದೃಷ್ಟಿಯಿಂದ ಉತ್ತಮ
ಸರಕಾರಿ ಸುತ್ತೋಲೆ ಬರುವ ಮೊದಲೇ ನಾವು ವಾಟರ್‌ ಬೆಲ್‌ ಯೋಜನೆಯನ್ನು ಜಾರಿಗೆ ತಂದಿದ್ದು, ಮಕ್ಕಳ ಆರೋಗ್ಯ ದೃಷ್ಟಿಯಿಂದ ಬಹಳ ಉತ್ತಮವಾದ ಯೋಜನೆಯಾಗಿದೆ.
-ಶೈಲಜಾ ಶೆಟ್ಟಿ, ಮುಖ್ಯ ಶಿಕ್ಷಕಿ, ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ


ಬೆಳ್ಮಣ್‌: ಕೇರಳ ರಾಜ್ಯದಲ್ಲಿ ವಾಟರ್‌ ಬೆಲ್‌ ವಿಶೇಷ ಪರಿಕಲ್ಪನೆ ಜಾರಿಯಾಗಿ ಯಶಸ್ವಿಯಾದ ಬಳಿಕ ಇದೀಗ ಕರ್ನಾಟಕದಲ್ಲಿಯೂ ಅಳವಡಿಕೆಯಾಗಿದ್ದು ಸೂಡ ಪಡುಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆರಂಭಗೊಂಡಿದೆ.

ಮಕ್ಕಳು ಶಾಲಾವ ಧಿಯಲ್ಲಿ ನೀರು ಕುಡಿಯು ವುದು ಕಡಿಮೆಯಾಗುವ ಹಿನ್ನೆಲೆಯಲ್ಲಿ ವಾಟರ್‌ ಬೆಲ್‌
ಆರಂಭಿಸಲಾಗಿದೆ. ಎಲ್ಲ ಮಕ್ಕಳು ಸಾಮಾನ್ಯವಾಗಿ ಶಾಲೆಗೆ ನೀರಿನ ಬಾಟಲ್‌ ತೆಗೆದು ಕೊಂಡು ಹೋಗುತ್ತಾರೆ. ಆದರೆ ಸಮರ್ಪಕವಾಗಿ ನೀರು ಕುಡಿಯುತ್ತಾರೋ ಇಲ್ಲವೋ ಎನ್ನುವುದು ಹೆತ್ತವರಿಗೆ, ಅಧ್ಯಾಪಕರಿಗೆ ಗೊತ್ತಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನ ಅತ್ಯಂತ ಗ್ರಾಮೀಣ ಭಾಗದ ಸೂಡ ಪಡುಬೆಟ್ಟು ಸರಕಾರಿ ಶಾಲೆಯಲ್ಲಿಯೂ ಇನ್ನು “ವಾಟರ್‌ ಬೆಲ್‌’ ಬರಲಿದೆ.

ನೀರಿನ ಜತೆ ಬೆಲ್ಲ
ಮಕ್ಕಳು ಕಡಿಮೆ ನೀರು ಕುಡಿಯುವುದರಿಂದ ಮಕ್ಕಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಬಹುದೆಂಬ ಕಾರಣಕ್ಕೆ ಮಕ್ಕಳಿಗೆ “ವಾಟರ್‌ ಬೆಲ್‌’ ವಿಶೇಷ ಪರಿಕಲ್ಪನೆ ಅಳವಡಿಸಲಾಗಿದೆ. ಸೂಡ ಪಡುಬೆಟ್ಟು ಸರಕಾರಿ ಶಾಲೆಯಲ್ಲಿ ಪ್ರತಿದಿನ ಬೆಳಗ್ಗೆ 11.10ಕ್ಕೆ, ಮಧ್ಯಾಹ್ನ 2.10ಕ್ಕೆ, 3.10ಕ್ಕೆ ಮಕ್ಕಳಿಗೆಲ್ಲ ನೀರು ಕುಡಿಯಲು ಬೆಲ್‌ ನೀಡಲಾಗುತ್ತದೆ. ಆಗ ಎಲ್ಲ ಮಕ್ಕಳು ಒಂದೆಡೆ ಸೇರಿ ನೀರು ಕುಡಿಯುತ್ತಾರೆ. ಬೆಳಗ್ಗಿನ ಸಂದರ್ಭ ನೀರಿನ ಜತೆಯಲ್ಲಿ ಬೆಲ್ಲವನ್ನು ಶಾಲಾ ವತಿಯಿಂದ ನೀಡಲಾಗುತ್ತಿದೆ. ಈ ವಿಶೇಷ ಪರಿಕಲ್ಪನೆಗೆ ಪೋಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವ್ಯಾಪಕ ಮೆಚ್ಚುಗೆ
ಕಾರ್ಯಕ್ರಮಕ್ಕೆ ಸಿ.ಆರ್‌.ಪಿ. ಚಂದ್ರಕಾಂತ್‌ ಡೇಸಾ ಚಾಲನೆ ನೀಡಿದರು. ಪ್ರತಿದಿನ ವಾಟರ್‌ಬೆಲ್‌ಗೆ ವಿದ್ಯಾರ್ಥಿಗಳು ಖುಷಿಯಿಂದ‌ ನೀರು ಕುಡಿಯುತ್ತಾರೆ ಎಂದು ಅಧ್ಯಾಪಕರು ತಿಳಿಸಿದ್ದಾರೆ.

ಪ್ರತಿದಿನ ವಾಟರ್‌ಬೆಲ್‌
ಸಾಮಾನ್ಯವಾಗಿ ವಿದ್ಯಾರ್ಥಿಗಳು ನೀರು ಕುಡಿಯುವುದು ಕಡಿಮೆಯಾಗಿದ್ದು ಆರೋಗ್ಯದ ದೃಷ್ಟಿಯಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಶಾಲಾವ ಧಿಯಲ್ಲಿ ಮೂರು ಬಾರಿ ವಾಟರ್‌ ಬೆಲ್‌ ನೀಡಲಾಗುತ್ತದೆ.
– ಚಂದ್ರಶೇಖರ್‌ ಭಟ್‌, ಮುಖ್ಯ ಶಿಕ್ಷಕ

ಗ್ರಾಮೀಣ ಶಾಲೆಗಳಲ್ಲಿ ಸ್ತುತ್ಯರ್ಹ
ವಾಟರ್‌ಬೆಲ್‌ ವಿಶೇಷ ಪರಿಕಲ್ಪನೆಗಳು ಕೇರಳ ರಾಜ್ಯ, ಪಟ್ಟಣ ಭಾಗದ ಕೆಲವೊಂದು ಖಾಸಗಿ ಶಾಲೆಗಳಲ್ಲಿ ಆರಂಭವಾಗಿತ್ತಾದರೂ ಗ್ರಾಮೀಣ ಭಾಗದ ಸರಕಾರಿ ಶಾಲೆಯಲ್ಲಿ ಈ ಯೋಜನೆ ಅಳವಡಿಸಿರುವುದು ಮೆಚ್ಚುವಂತದ್ದು.
-ಚಂದ್ರಕಾಂತ್‌ ಡೇಸಾ, ಸಿ.ಆರ್‌.ಪಿ.

Advertisement

Udayavani is now on Telegram. Click here to join our channel and stay updated with the latest news.

Next