ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿರುವ 3,500 ಹಾಸ್ಟೆಲ್‌ಗಳ ಸ್ವರೂಪವನ್ನು ಸಮಗ್ರವಾಗಿ ಬದಲಾಯಿಸಲು ಚಿಂತಿಸಿದ್ದು, ಸಮಿತಿ ರಚಿಸಲಾಗಿದೆ. ಸಮಿತಿ ವರದಿ ನೀಡಿದ ನಂತರ ಹಾಸ್ಟೆಲ್‌ಗಳ ಕಾರ್ಯವೈಖರಿಯಲ್ಲಿ ಬದಲಾವಣೆಗಳಾಗಲಿವೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ರಾಜ್ಯಾದ್ಯಂತ ನಡೆಸುತ್ತಿರುವ ವಸತಿ ಶಿಕ್ಷಣ ಶಾಲೆಗಳ ಪ್ರಿನ್ಸಿಪಾಲರು ಹಾಗೂ ವಿದ್ಯಾರ್ಥಿ ನಿಲಯಗಳ ವಾರ್ಡನ್‌ಗಳ ಸಭೆಯಲ್ಲಿ ಮಾತನಾಡಿದ ಅವರು, ಕ್ರೈಸ್ ಸಂಸ್ಥೆ ರಾಜ್ಯಾದ್ಯಂತ ನಡೆಸುತ್ತಿರುವ ವಸತಿ ಶಿಕ್ಷಣ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳ ವಾರ್ಡನ್‌ಗಳ ಸೇವಾ ವಿಷಯದಲ್ಲಿನ ನ್ಯೂನತೆ ಸರಿಪಡಿಸಲು ಸೂಕ್ತ ಶಿಫಾರಸು ಮಾಡುವಂತೆಯೂ ಈಗಾಗಲೇ ರಚನೆಯಾಗಿರುವ ಸಮಿತಿಯನ್ನು ಕೋರಲಾಗಿದೆ ಎಂದು ತಿಳಿಸಿದರು.
ಇಲಾಖೆಯ ವಸತಿ ಶಿಕ್ಷಣ ಶಾಲೆಗಳ ಪ್ರಿನ್ಸಿಪಾಲರು ಹಾಗೂ ಬೋಧಕ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯನ್ನು ಅಳವಡಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಉತ್ತಮ ಸಮಾಜ ನಿರ್ಮಿಸುವ ಶಕ್ತಿ ಶಿಕ್ಷಕರಿಗಿದೆ. ಬೋಧಕರು ಹಾಗೂ ವಿದ್ಯಾರ್ಥಿಗಳಿಗೆ ಪ್ರಿನ್ಸಿಪಾಲರುಗಳು ಪ್ರೇರಣೆಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಬೇಕು. ಮೌಡ್ಯತೆಗೆ ಅವಕಾಶ ನೀಡದಂತೆ ವ್ಯಕ್ತಿತ್ವ ಬೆಳೆಸಿಕೊಳ್ಳುವಂತೆ ಪ್ರೇರಣೆ ನೀಡಬೇಕು. ಕುತೂಹಲ ಮೂಡುವಂತಹ ವಾತಾವರಣ ಸೃಷ್ಟಿಸುವ ಜತೆಗೆ ಪ್ರಶ್ನೆ ಮಾಡುವ ಮನಸ್ಥಿತಿ ರೂಪಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ರಾಜ್ಯದ ವಸತಿ ಶಾಲೆಗಳ 820 ಪ್ರಾಂಶುಪಾಲರು ಹಾಗೂ 820 ಮಂದಿ ವಾರ್ಡನ್‌ಗಳು ಪಾಲ್ಗೊಂಡಿದ್ದರು. ಇದೇ ವೇಳೆ ವಸತಿ ಶಿಕ್ಷಣ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳ ವಾರ್ಡನ್‌ಗಳ ಸಂಘದ ಪದಾಧಿಕಾರಿಗಳೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ ಸಚಿವರು ಕುಂದುಕೊರತೆ ಆಲಿಸಿದರು. ಕ್ರೈಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಜೆ.ವಿ.ನಂದನ್ ಕುಮಾರ್ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.