Advertisement

Drought; ಶೀಘ್ರದಲ್ಲಿ ಮೋಡ ಬಿತ್ತನೆಗೆ ಚಿಂತನೆ: ಡಿಸಿಎಂ ಡಿ.ಕೆ.ಶಿವಕುಮಾರ್

12:47 PM Sep 25, 2023 | Team Udayavani |

ಬೆಂಗಳೂರು: ಮೋಡ ಬಿತ್ತನೆ ಮಾಡಲು ಎರಡು- ಮೂರು ದಿನಗಳಲ್ಲಿ ಸರ್ಕಾರ ನಿರ್ಧಾರ ಮಾಡಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

Advertisement

ಸದಾಶಿವನಗರದ ನಿವಾಸದ ಬಳಿ ಸೋಮವಾರ ಬೆಳಿಗ್ಗೆ ಮಾಧ್ಯಮಗಳಿಗೆ ಪ್ರತ್ರಿಕೆಯೆ ನೀಡಿದ ಅವರು “ಎರಡು ದಿನಗಳಿಂದ ಬೆಂಗಳೂರು ನಗರ ಹಾಗೂ ಸುತ್ತಮುತ್ತ ಸುರಿದ ಮಳೆಯಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಮೋಡ ಬಿತ್ತನೆಯಿಂದ ಪರಿಸ್ಥಿತಿ ಸುಧಾರಿಸಬಹುದು ಎನ್ನುವ ನಂಬಿಕೆಯಿದೆ. ಸಚಿವ ಸಂಪುಟ ಸಭೆಯಲ್ಲಿ ಮೋಡ ಬಿತ್ತನೆ ಹಾಗೂ ಕಾವೇರಿ ನೀರು ಸಂಕಷ್ಟದ ಬಗ್ಗೆ ಚರ್ಚೆ ಮಾಡುತ್ತೇವೆ” ಎಂದು ತಿಳಿಸಿದರು.

ವಿರೋಧ ಪಕ್ಷಗಳ ಮೈತ್ರಿಯಿಂದ ಅಸಮಾಧಾನಿತರು ಕಾಂಗ್ರೆಸ್ ಸೇರುವ ಬಗ್ಗೆ ಕೇಳಿದಾಗ, “ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರವಾಗಿ ಎರಡೂ ಪಕ್ಷಗಳ ಅಸಮಾಧಾನಿತರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ, ಮುಖ್ಯಮಂತ್ರಿಗಳು ಹಾಗೂ ಸಂಪುಟ ಸಹೋದ್ಯೋಗಿಗಳ ಜೊತೆ ಈ ವಿಚಾರ ಚರ್ಚೆ ನಡೆಸಲಾಗುತ್ತದೆ. ಕಾರ್ಯಕರ್ತರ ಮಟ್ಟದಲ್ಲಿ ಪಕ್ಷ ಸೇರ್ಪಡೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿದ್ದೇವೆ. ಪಕ್ಷಾಂತರ ಕಾಯ್ದೆ ಬಗ್ಗೆಯೂ ನಮಗೆ ಎಚ್ಚರಿಕೆಯಿದೆ ಎಂದರು.

ಸಚಿವರುಗಳನ್ನು ಲೋಕಸಭೆ ಕ್ಷೇತ್ರಗಳ ವೀಕ್ಷಕರನ್ನಾಗಿ ನೇಮಿಸಿರುವ ಬಗ್ಗೆ ಕೇಳಿದಾಗ, “28 ಲೋಕಸಭಾ ಕ್ಷೇತ್ರಗಳಿಗೆ ಸಚಿವರನ್ನು ವೀಕ್ಷಕರನ್ನಾಗಿ ನೇಮಕ‌ ಮಾಡಲಾಗಿದೆ. ಇಬ್ಬರು -ಮೂವರು ಸಚಿವರನ್ನು ನೇಮಕ ಮಾಡಲು ಆಗಿಲ್ಲ. ಎಂ.ಬಿ. ಪಾಟೀಲರು ವಿದೇಶದಲ್ಲಿ, ಕೆ.ಜೆ.ಜಾರ್ಜ್ ಅವರು ಪಕ್ಷದ ಕೇಂದ್ರ ಸಮಿತಿಯಲ್ಲಿ ಇರುವ ಕಾರಣ ನೇಮಕ ಮಾಡಲು ಆಗಲಿಲ್ಲ. ಎಲ್ಲಾ ಕ್ಷೇತ್ರಗಳ ವರದಿ 10 ದಿನಗಳಲ್ಲಿ ಕೈ ಸೇರಲಿದ್ದು, ಎರಡು ಅಥವಾ ಮೂರು ಹೆಸರುಗಳನ್ನು ಸೂಚಿಸಬಹುದೆಂದು ನಿರೀಕ್ಷೆಯಿದೆ. ಜನವರಿ ಮುಂಚಿತವಾಗಿ ಮೊದಲ‌ ಪಟ್ಟಿ ಬಿಡುಗಡೆ ಮಾಡುತ್ತೇವೆ” ಎಂದು ತಿಳಿಸಿದರು.

ಪ್ರತಿಭಟನೆಗೆ ಸಹಕಾರ: ಪ್ರತಿಪಕ್ಷಗಳು ಹಮ್ಮಿಕೊಂಡಿರುವ ಕಾವೇರಿ ನೀರಿನ ವಿಚಾರವಾಗಿ ಬಂದ್ ಹಾಗೂ ಪ್ರತಿಭಟನೆ ಕುರಿತಾಗಿ “ರಾಜ್ಯದ ಹಿತರಕ್ಷಣೆಗೆ ಪ್ರತಿಭಟನೆ ಮಾಡಲು ನಾವು ಸಹಕಾರ ನೀಡುತ್ತೇವೆ.‌ ನೆಲ, ಜಲ, ಭಾಷೆಯನ್ನು ಎಲ್ಲರೂ ಉಳಿಸಿಕೊಳ್ಳಬೇಕು. ಯಾರ ಹೋರಾಟಗಳಿಗೂ ಸರ್ಕಾರ ಅಡ್ಡಿಪಡಿಸುವುದಿಲ್ಲ. ಆದರೆ ಇದರಿಂದ ಜನರಿಗೆ ತೊಂದರೆ ಆಗಬಾರದು, ಶಾಂತಿ ಕಾಪಾಡಬೇಕು, ಹೋರಾಟಗಳಿಗೆ ಸರ್ಕಾರದ ಸಹಕಾರ ಇದ್ದೇ ಇರುತ್ತದೆ. ಪ್ರತಿಭಟಿಸುವುದು ಪ್ರಜಾಪ್ರಭುತ್ವದ ಹಕ್ಕು, ಯಾವ ಪಕ್ಷದವರಿಗೂ ತೊಂದರೆ, ಅಡಚಣೆ ಮಾಡಲು ನಾವು ಮುಂದಾಗುವುದಿಲ್ಲ. ನಾವು ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ. ನಮ್ಮ ಪಕ್ಷದವರು ಸಹ ಏನು ಮಾಡುವುದು ಎಂದು ಕೇಳಿದರು, ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ಹೋರಾಟ ಮಾಡಿ” ಎಂದು ಹೇಳಿದ್ದೇವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next