ಉರ್ವಸ್ಟೋರ್: ದ.ಕ. ಜಿಲ್ಲೆಯಲ್ಲಿ ಸುಮಾರು 20 ಸಾವಿರದಷ್ಟು ಖಾಸಗಿ ಹಾಗೂ ಸರಕಾರಿ ಕೊಳವೆ ಬಾವಿಗಳು ನಿರುಪಯುಕ್ತವಾಗಿವೆ. ಅಂತಹ ಬಾವಿಗಳಿಗೆ ಅಳವಡಿಸಿರುವ ಪೈಪ್ ಹಾಗೂ ಎಲೆಕ್ಟ್ರಿಕಲ್ ಉಪಕರಣಗಳನ್ನು ಪುನರ್ಬಳಕೆ ಮಾಡುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್. ರವಿ ಹೇಳಿದರು.
ಮಳೆನೀರು ಸಂಗ್ರಹಣೆ ಮತ್ತು ಮರು ಬಳಕೆ, ಅಂತರ್ಜಲ ಸಂರಕ್ಷಣೆ, ಕಲುಷಿತ ತಡೆಗಟ್ಟುವಿಕೆ, ತೆರೆದ, ತ್ಯಕ್ತ ಕೊಳವೆ ಬಾವಿಗಳಲ್ಲಿ ಚಿಕ್ಕ ಮಕ್ಕಳು ಬೀಳದಂತೆ ನಿಯಂತ್ರಿಸುವ ಮತ್ತು ಅಂತರ್ಜಲ ಅಭಿವೃದ್ಧಿ ಸದ್ಬಳಕೆ ಕುರಿತು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಜಿ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಾಗಾರವನ್ನು ಅವರು ಉದ್ಘಾಟಿಸಿದರು.
ದೋಷಪೂರಿತ ನೀತಿಗಳು ಹಾಗೂ ವಿವೇಚನರಹಿತ ನಿರ್ಧಾರಗಳಿಂದ ಜಿಲ್ಲೆಯಲ್ಲಿ 2007ರಿಂದೀಚೆಗೆ ತೀವ್ರ ಪ್ರಮಾಣದಲ್ಲಿ ಅಂತರ್ಜಲ ಕುಸಿತಗೊಂಡಿದೆ. ಪುತ್ತೂರು ತಾ|ನಲ್ಲಿ ಅಂತರ್ಜಲ ಬಳಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಕೊಳವೆಬಾವಿ ಕೊರೆಯುವುದನ್ನು ನಿಷೇಧಿಸಲಾಗಿದೆ. ಬೆಳ್ತಂಗಡಿ ಮತ್ತು ಮಂಗಳೂರು ತಾ| ಕೂಡ ಈ ವಿಚಾರದಲ್ಲಿ ಅಪಾಯಕಾರಿ ಹಂತದಲ್ಲಿರುವುದರಿಂದ ಸೂಕ್ತ ಮುನ್ನೆಚ್ಚರಿಕೆ ಅಗತ್ಯ ಎಂದರು.
ತೋಟಗಾರಿಕೆ ಇಲಾಖೆ ನಿರ್ದೇಶಕ ಎಚ್. ಆರ್. ನಾಯಕ್ ಮಾತನಾಡಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ| ಬಿ. ಎಂ. ರವೀಂದ್ರ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಡಾ| ಸುಮಿತ್ರಾ ಎಸ್., ಹಿರಿಯ ಭೂ ವಿಜ್ಞಾನಿ ಜಾನಕಿ, ಅಂತರ್ಜಲ ಇಲಾಖೆಯ ನಿತೇಶ್ ಉಪಸ್ಥಿತರಿದ್ದರು. ಜಿಲ್ಲಾ ಅಂತರ್ಜಲ ಕಚೇರಿಯ ಪ್ರಭಾರ ಹಿರಿಯ ಭೂ ವಿಜ್ಞಾನಿ ಡಾ| ಎಂ. ದಿನಕರ ಶೆಟ್ಟಿ ಸ್ವಾಗತಿಸಿದರು. ಇದೇ ವೇಳೆ ಅಂತರ್ಜಲ ಅಭಿವೃದ್ಧಿ ಮಾಹಿತಿ ಯನ್ನು ಒಳಗೊಂಡ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.
ಲಕ್ಷಾಂತರ ರೂ. ಪೋಲು
ಎನ್‌ಆರ್‌ಡಿಎಂಸಿ ನಡೆಸಿದ ಪರಿಶೀಲನೆಯಲ್ಲಿ 2,400 ಕುಟುಂಬಗಳಿರುವ ಮತ್ತು 10,000 ಜನಸಂಖ್ಯೆ ಹೊಂದಿರುವ ನರಿಮೊಗರು ಗ್ರಾಮದಲ್ಲಿ 2,500 ಬೋರ್‌ವೆಲ್‌ಗಳಿರುವುದು ಪತ್ತೆಯಾಗಿದೆ. ಕೊರೆದ ಬೋರ್ ವೆಲ್ ವಿಫಲವಾದರೆ ಇನ್ನೊಂದು ಬೋರ್‌ವೆಲ್ ಕೊರೆಯಲಾಗುತ್ತದೆಯೇ ಹೊರತು ಈಗಾಗಲೇ ಕೊರೆದಿರುವ ಬೋರ್‌ವೆಲ್‌ಗೆ ಮಾಡಲಾದ ವೆಚ್ಚ, ಬಳಸಿದ ಸಾಮಗ್ರಿಗಳ ಕಡೆಗೆ ಗಮನ ಹರಿಸುತ್ತಿಲ್ಲ. ಇದರಿಂದ ಲಕ್ಷಾಂತರ ರೂ. ಪೋಲಾಗುತ್ತಿದೆ. ನಿರುಪಯುಕ್ತ ಬೋರ್‌ವೆಲ್ ಸಾಮಗ್ರಿಗಳನ್ನು ಮರು ಬಳಕೆ ಮಾಡಲು ಸಾಧ್ಯವೇ ಎಂಬ ಬಗ್ಗೆ ಅಧ್ಯಯನ ನಡೆಸಲು ಚಿಂತಿಸಲಾಗಿದೆ ಎಂದು ಡಾ| ಎಂ.ಆರ್. ರವಿ ತಿಳಿಸಿದರು.