ರಾಮನಗರ: ಕೂಟಗಲ್ ಗ್ರಾಮದ ಬಳಿಯ ತಿಮ್ಮಪ್ಪನ ಬೆಟ್ಟದಲ್ಲಿ ರುವ ದೇವಾಲಯದ ನಿರ್ವಹಣೆಯನ್ನು ಶ್ರೀ ಬೆಟ್ಟದ ತಿಮ್ಮಪ್ಪಸ್ವಾಮಿ ದೇವಸ್ಥಾನ ಟ್ರಸ್ಟ್ ಆರಂಭಿಸಿದ ನಂತರವಷ್ಟೇ ಬೆಟ್ಟದ ಮೇಲೆ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ.
ಪರಿಸರ ಸ್ವತ್ಛತೆ ಕಾಪಾಡಿಕೊಳ್ಳಲಾಗು ತ್ತಿದೆ. ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಟ್ರಸ್ಟ್‌ನ ಪಾರ ದರ್ಶಕ ಚಟುವಟಿಕೆ ಗಮನಿಸಿ ಸಹಕರಿಸಬೇಕು ಎಂದು ಟ್ರಸ್ಟ್‌ನ ಅಧ್ಯಕ್ಷ ದೇವರಾಜು ಹೇಳಿದರು.
ದೇಗುಲದ ನಿರ್ವಹಣೆಗೆ ಪಾರ್ಕಿಂಗ್ ಶುಲ್ಕ: ತಿಮ್ಮಪ್ಪನ ಬೆಟ್ಟದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೂಟಗಲ್ ಗ್ರಾಮಸ್ಥರು 2018ರಲ್ಲಿ ಟ್ರಸ್ಟ್ ಸ್ಥಾಪಿಸಿಕೊಂಡ ನಂತರ ಪ್ರಕೃತಿದತ್ತವಾದ ತಿಮ್ಮಪ್ಪನ ಬೆಟ್ಟದಲ್ಲಿರುವ ದೇವಾಲಯ ನಿರ್ವಹಣೆ ಮಾಡುತ್ತಿದೆ. ದೇವಾಲಯ ನಿರ್ವಹಣೆಗೆಂದು ಇಲ್ಲಿಗೆ ಬರುವ ಭಕ್ತರು ಮತ್ತು ಚಾರ ಣಿಗರ ವಾಹನಗಳಿಗೆ ಇಂತಿಷ್ಟು ಶುಲ್ಕ ಪಡೆಯಲಾಗುತ್ತಿದೆ. ಈ ವಿಚಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲಾಗಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ದೊಡ್ಡ ಹಗರಣ ಎಂಬಂತೆ ಅಪಪ್ರಚಾರ ಮಾಡುತ್ತಿದ್ದಾರೆ.
ದೇವಾಲಯದ ಅಭಿವೃದ್ಧಿಗಾಗಲಿ, ಪರಿಸರ ಸ್ವತ್ಛತೆಗೆ ಆದ್ಯತೆ ಕೊಡದ ಅರಣ್ಯ ಇಲಾಖೆ ಅಧಿಕಾರಿಗಳು ಟ್ರಸ್ಟ್‌ನ ಚಟುವಟಿಕೆಗಳ ಬಗ್ಗೆ ಹೀಗೆ ಹೀಯಾಳಿಸುವುದು ಸರಿ ಯಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಟ್ರಸ್ಟ್‌ನಿಂದ ಅನೈತಿಕ ಚಟುವಟಿಕೆ ತಡೆ: ತಿಮಪ್ಪನ ಬೆಟ್ಟ ಪ್ರಕೃತಿದತ್ತವಾಗಿದೆ. ಸದಾ ಹಸಿರು ಪರಿಸರವಿರುತ್ತದೆ. ಇಲ್ಲಿ ತಿಮ್ಮಪ್ಪಸ್ವಾಮಿ ಹಾಗೂ ಲಕ್ಷ್ಮೀದೇವಿ ದೇವಾಲಯಗಳಿವೆ. ಪ್ರಕೃತಿ ಆಸ್ವಾದಿಸಲು ಬರುತ್ತಿದ್ದ ಕೆಲವು ಗುಂಪುಗಳು ಇಲ್ಲಿ ಮದ್ಯಪಾನ ಸೇವಿಸುವುದು ಸೇರಿದಂತೆ ಅನೈ ತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅಲ್ಲದೆ ತ್ಯಾಜ್ಯವನ್ನು ಬೀಸಾಡಿ ಹೋಗುತ್ತಿದ್ದರು. ಕೂಟಗಲ್ ಗ್ರಾಮಸ್ಥರು ಟ್ರಸ್ಟ್ ಸ್ಥಾಪಿಸಿಕೊಂಡು ಇದಕ್ಕೆಲ್ಲ ಕಡಿವಾಣ ಹಾಕಿದ್ದಾರೆ ಎಂದರು.
ಟ್ರಸ್ಟ್ ಬಗ್ಗೆ ಅಪಪ್ರಚಾರ ಸಲ್ಲದು: ಜನಪ್ರತಿನಿಧಿಗಳ ಸಹಕಾರದಲ್ಲಿ ಜಿಲ್ಲಾಡಳಿತದಿಂದ ಬೆಟ್ಟಕ್ಕೆ ರಸ್ತೆ ನಿರ್ಮಾಣವಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯಾಗಿದೆ. ಟ್ರಸ್ಟ್ ಮೂಲಕ ದೇವಾಲಯದ ಅರ್ಚಕರಿಗೆ ವೇತನ ಕೊಡಲಾಗುತ್ತಿದೆ. ಬೆಟ್ಟದ ಮೇಲೊಂದು ಛತ್ರವಿದೆ. ಇದೀಗ ಊಟದ ಹಾಲ್ ನಿರ್ಮಿಸಲಾಗುತ್ತಿದೆ. ಬಡ ಕುಟುಂಬಗಳು ಇಲ್ಲಿ ಮದುವೆ ಮುಂತಾದ ಶುಭಕಾರ್ಯಗಳನ್ನು ನೆರೆವೇರಿಸಿಕೊಂಡು ಬರುತ್ತಿದ್ದಾರೆ. ಆದರೆ ಟ್ರಸ್ಟ್ ಬಗ್ಗೆ ಕೆಲವರು ಇಲ್ಲ ಸಲ್ಲದ ಆರೋಪ ಹೊರೆಸುತ್ತಿದ್ದಾರೆ. ವಾಹನ ಶುಲ್ಕ ಪಡೆಯುವುದು ಮಹಾ ಅಪರಾಧ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಕ್ರಮ ಗಣಿಗಾರಿಕೆ ತಡೆದಿಲ್ಲವೇಕೆ?: ಟ್ರಸ್ಟ್‌ನ ಜಂಟಿ ಕಾರ್ಯದರ್ಶಿ ಎಂ.ಮಹೇಶ್ ಮಾತನಾಡಿ, ತಿಮ್ಮಪ್ಪನ ಬೆಟ್ಟ ಅರಣ್ಯ ಇಲಾಖೆ ಸುಪರ್ದಿನಲ್ಲಿದೆ. ಬೆಟ್ಟಕ್ಕೆ ಬರುವ ಪ್ರವಾಸಿಗರಿಂದ ಪಾರ್ಕಿಂಗ್ ಶುಲ್ಕ ಪಡೆಯಬಾರದು ಎಂದು ಆದೇಶ ಕೊಡುವ ಅಧಿಕಾರಿಗಳು ಬೆಟ್ಟದ ಸುತ್ತ ಮುತ್ತಲು ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ತಡೆಯುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು? ಅರಣ್ಯ ಭೂಮಿ ಒತ್ತುವರಿಯಾಗಿದ್ದರೂ ಈ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಗ್ರಾಮಸ್ಥರ ನಿರಂತರ ಶ್ರಮದಿಂದ ಬೆಟಕ್ಕೆ ರಸ್ತೆ ಸೇರಿದಂತೆ ಒಂದಿಷ್ಟು ಅಭಿವೃದ್ದಿಯಾಗಿದೆ. ರಸ್ತೆ ಪಕ್ಕ ಸಸಿ ನೆಟ್ಟಿರುವು ದೊಂದೆ ಅರಣ್ಯ ಇಲಾಖೆಯ ಸಾಧನೆ. ಅಕ್ರಮ ಚಟುವಟಿಕೆಗಳ ತಡೆಗೆ ಟ್ರಸ್ಟ್‌ವತಿಯಿಂದಲೇ ಸಿಸಿ ಕ್ಯಾಮರ ಅಳವಡಿಸಲಾಗಿದೆ. ಬೆಟ್ಟದ ಮೇಲೆ ಪರಿಸರ ಸ್ವತ್ಛತೆ ಕಾಪಾಡಿಕೊಂಡು ಬರಲಾಗುತ್ತಿದೆ. ಟ್ರಸ್ಟ್ ಕೈಗೊಂಡಿರುವ ನಿರ್ವಹಣೆ ಮತ್ತು ಅಭಿವೃದ್ಧಿಗೆ ಅರಣ್ಯ ಇಲಾಖೆ ಸಹ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಕೆ.ವಿ.ದೇವರಾಜು, ಖಜಾಂಚಿ ಕಾಂತರಾಜು, ಗೌರವಾಧ್ಯಕ್ಷ ಕೆ.ಪುಟ್ಟಸ್ವಾಮಿ, ಉಪಾಧ್ಯಕ್ಷ ಕೆ.ವಿ.ಅಶೋಕ್, ನಿರ್ದೇಶಕರುಗಳಾದ ಜಗದೀಶ್ ಕುಮಾರ್.ಸಿ, ಎಂ.ಪರಮಶಿವಯ್ಯ, ಹನುಮರಾಜು, ಶಿವರಾಮು, ಶಿವಣ್ಣ, ಕೃಷ್ಣಪ್ಪ, ಸಿದ್ದರಾಜು, ಅರ್ಚಕರುಗಳಾದ ದಿವಾಕರ್ ಮತ್ತು ನರಸಿಂಹಮೂರ್ತಿಯವರು ಹಾಜರಿದ್ದರು.