Advertisement

ಅಪಘಾತ ಎಸಗುವ ರೀತಿ ಹೆದರಿಸಿ ಸರ ಕಳವು

09:36 AM Aug 23, 2019 | Team Udayavani |

ಬೆಂಗಳೂರು: ಮೂರು ವರ್ಷದ ಮಗನನ್ನು ಕೂರಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ದುಷ್ಕರ್ಮಿಗಳು, ಅಪಘಾತ ಮಾಡುವಂತೆ ಭಯ ಹುಟ್ಟಿಸಿ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಹೋದ ಘಟನೆ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಇದೇ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಐದು ದಿನಗಳ ಹಿಂದೆ ಒಂದು ಮನೆಗಳವು, ಸರ ಕಳವು, ಕಾರು ಕಳವು ಪ್ರಕರಣಗಳು ನಡೆದಿವೆ. ಈ ಕುರಿತು ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಆ.20ರಂದು ರಾತ್ರಿ ನಾಗರಬಾವಿ ಎರಡನೇ ಹಂತದ ಮಾಳಗಾಳದಲ್ಲಿ ಸರ ಕಳವು ನಡೆದಿದೆ. ಈ ಕುರಿತು ಸರ ಕಳೆದುಕೊಂಡ ಮಹಿಳೆ ರಜಿನಿ ಅವರ ಪತಿ ದಿಲೀಪ್‌ ದೂರು ದಾಖಲಿಸಿದ್ದಾರೆ.

ರಜನಿ ಅವರು ಆ.20ರಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಮೂರು ವರ್ಷದ ಮಗನ ಜತೆ ದ್ವಿಚಕ್ರ ವಾಹನದಲ್ಲಿ ಮೆಡಿಕಲ್ ಸ್ಟೋರ್‌ಗೆ ತೆರಳಿ 22ನೇ ಕ್ರಾಸ್‌ ಮೂಲಕ ವಾಪಸಾಗುತ್ತಿದ್ದರು. ಮೆಡಿಕಲ್ ಸ್ಟೋರ್‌ನಿಂದಲೇ ಬೈಕ್‌ನಲ್ಲಿ ರಜಿನಿ ಅವರನ್ನು ಹಿಂಬಾಲಿಸಿಕೊಂಡು ಬಂದ ಇಬ್ಬರು ಹೆಲ್ಮೆಟ್ ಧರಿಸಿದ ದುಷ್ಕರ್ಮಿಗಳು, ರಸ್ತೆ ತಿರುವಿನಲ್ಲಿ ರಜಿನಿ ಅವರ ಬೈಕ್‌ಗೆ ಅಡ್ಡಲಾಗಿ ಹಠಾತ್‌ ಆಗಿ ಬೈಕ್‌ ನಿಲ್ಲಿಸಿದ್ದಾರೆ.

ಇದರಿಂದ ಆತಂಕಗೊಂಡ ರಜಿನಿ ಅವರು ಬೈಕ್‌ನಿಂದ ಮಗು ಬೀಳಬಹುದು ಎಂದು ಮಗನನ್ನು ಹಿಡಿದುಕೊಂಡಿದ್ದಾರೆ. ಕೂಡಲೇ ದುಷ್ಕರ್ಮಿಗಳು, ಕತ್ತಿನಲ್ಲಿದ್ದ ಸುಮಾರು 1 ಲಕ್ಷ ರೂ.ಗೂ ಅಧಿಕ ಮೌಲ್ಯದ 64 ಗ್ರಾಂ. ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

Advertisement

ಘಟನಾ ಸ್ಥಳದ ಸುತ್ತಮುತ್ತಲ ಸ್ಥಳಗಳಲ್ಲಿದ್ದ ಸಿಸಿ ಕ್ಯಾಮೆರಾಗಳಲ್ಲಿ ಆರೋಪಿಗಳ ಚಲನವಲನಗಳು ಸೆರೆಯಾಗಿದ್ದು, ಬಂಧನಕ್ಕೆ ಕ್ರಮ ವಹಿಸಿರುವುದಾಗಿ ಪೊಲೀಸರು ತಿಳಿಸಿದರು.

3 ಲಕ್ಷ ಮೌಲ್ಯದ ಚಿನ್ನಾಭರಣ ಕಳವು!: ಮನೆಯ ಬಾಗಿಲಿನ ಲಾಕ್‌ ಮುರಿದು ಒಳನುಗ್ಗಿರುವ ಕಳ್ಳರು, ಬೀರುವಿನಲ್ಲಿದ್ದ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 45 ಸಾವಿರ ರೂ. ನಗದು ದೋಚಿ ಪರಾರಿಯಾದ ಘಟನೆ ನಾಗರಬಾವಿ 9ನೇ ಬ್ಲಾಕ್‌ನ ವಿನಾಯಕ ಲೇಔಟ್‌ನಲ್ಲಿ ನಡೆದಿದೆ. ಈ ಕುರಿತು ಖಾಸಗಿ ಕಂಪನಿ ಉದ್ಯೋಗಿ ಸಿ.ಜೆ.ರಮೇಶ್‌ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಆ.16ರಂದು ರಮೇಶ್‌, ಕುಟುಂಬ ಸಮೇತ ಮೈಸೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಆ.18ರಂದು ಮನೆ ಕೆಲಸದ ಮಹಿಳೆ ಮನೆ ಬಳಿ ಬಂದಾಗ ಬಾಗಿಲು ತೆರೆದಿರುವುದನ್ನು ಗಮನಿಸಿ ರಮೇಶ್‌ ಅವರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಆತಂಕಗೊಂಡು ಮೈಸೂರಿನಿಂದ ವಾಪಸ್‌ ಬಂದು ಗಮನಿಸಿದಾಗ, ಬೀರುವಿನಲ್ಲಿದ್ದ ಮೂರು ಲಕ್ಷ ರೂ. ಮೌಲ್ಯದ ಚಿನ್ನ, ಒಂದು ಕೆ.ಜಿ ಬೆಳ್ಳಿ ಆಭರಣ, 45 ಸಾವಿರ ರೂ.ನಗದು ಕಳವು ಆಗಿರುವುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.